ಬುಧವಾರ, ಮಾರ್ಚ್ 3, 2021
18 °C
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಸಾಧ್ಯತೆ

ಗಣರಾಜ್ಯೋತ್ಸವ ಧ್ವಜಾರೋಹಣ: ಜೊಲ್ಲೆಯೋ? ನಿರಾಣಿಯೋ?

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಹಾಲಿ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬದಲು ಮುರುಗೇಶ ನಿರಾಣಿ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಮಾತು ಕೇಳಿಬರುತ್ತಿದೆ.

ಮುರುಗೇಶ ನಿರಾಣಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕೆಂಬ ಒತ್ತಾಯವೂ ಜಿಲ್ಲೆಯಲ್ಲಿ ಈಗಾಗಲೇ ವ್ಯಕ್ತವಾಗಿದೆ.

‘ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವ ಇರುವ ನಿರಾಣಿ ಅವರನ್ನೇ ಜಿಲ್ಲೆಗೆ ನಿಯೋಜಿಸಬೇಕು’ ಎಂದು ಪಂಚಮ ಸಾಲಿ ಸಮಾಜದ ಮುಖಂಡರಾದ ಶ್ರೀಹರ್ಷ ಗೌಡ ಎಸ್.ಪಾಟೀಲ, ರಮೇಶ ಎಸ್.ಬಿದನೂರ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಹಾಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಜಿಲ್ಲೆಯ ಆಡಳಿತ ವಿಷಯದಲ್ಲಿ ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ, ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ವಿಜಯಪುರ ಮಹಾನಗರ ಪಾಲಿಕೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಬಲರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿದರೆ ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ ಎಂದು ಬಿಜೆಪಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಸಚಿವ ಸ್ಥಾನ ಜಿಲ್ಲೆಗೆ ಸಿಗದೇ ಇರುವುದರಿಂದ ಮೂವರು ಶಾಸಕರು ಸೇರಿದಂತೆ ಮುಖಂಡರು, ಕಾರ್ಯಕರ್ತರು ನಿರಾಶರಾಗಿದ್ದಾರೆ. ಇನ್ನೊಂದೆಡೆ ಜಿಲ್ಲಾ ಬಿಜೆಪಿ ಮುಖಂಡರ ನಡುವಿನ ಭಿನ್ನಮತ, ಮುಸುಕಿನ ಗುದ್ದಾಟದಿಂದ ಪಕ್ಷಕ್ಕೆ ಹಿನ್ನೆಡೆಯಾಗಿದ್ದು, ಇಂತಹ ಸಂದರ್ಭದಲ್ಲಿ ಕ್ರೀಯಾಶೀಲ ಸಚಿವರನ್ನು ಜಿಲ್ಲೆಗೆ ನಿಯೋಜಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಸಚಿವ ಸ್ಥಾನ ಸಿಗದೆ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಕಟ್ಟಿಹಾಕಲು ಅವರದೇ ಸಮಾಜದ ಪ್ರಭಾವಿ ಮುಖಂಡ ಮುರುಗೇಶ ನಿರಾಣಿಗೆ ಮುಖ್ಯಮಂತ್ರಿ ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸುವ ಸಾಧ್ಯತೆ ಇದೆ.

ಇನ್ನೊಂದೆಡೆ ನಿರಾಣಿ ಅವರು ಬಾಗಲಕೋಟೆ ಉಸ್ತುವಾರಿ ಮೇಲೆ ಕಟ್ಟಿದ್ದಾರೆ. ಆದರೆ, ಉಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪರ ಬಾಗಲಕೋಟೆಯ ಬಹುತೇಕ ಶಾಸಕರೂ ಇರುವುದರಿಂದ ನಿರಾಣಿ ಅವರಿಗೆ ಅಲ್ಲಿಯ ಉಸ್ತುವಾರಿ ಸುಲಭದ ತುತ್ತಲ್ಲ. ಹೀಗಾಗಿ ನೆರೆಯ ವಿಜಯಪುರದ ಉಸ್ತುವಾರಿ ಲಭಿಸುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರದ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿವೆ.

ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸಿ.ಸಿ.ಪಾಟೀಲ ಆರಂಭದಲ್ಲಿ ವಿಜಯಪುರ ಉಸ್ತುವಾರಿಯಾಗಿದ್ದರು. ಆದರೆ, ಅವರು ಜಿಲ್ಲೆಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕಾರಣಕ್ಕೆ ಬದಲಾವಣೆ ಮಾಡಿ, ಸಚಿವೆ ಶಶಿಕಲಾ ಜೊಲ್ಲೆ ಹೆಗಲಿಗೆ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿತ್ತು. ಅವರೂ ಸಹ ಜವಾಬ್ದಾರಿ ನಿರ್ವಹಿಸುವಲ್ಲಿ ಎಡವಿದ್ದಾರೆ. ಹೀಗಾಗಿ ಮೂರನೇ ಬಾರಿಗೆ ಉಸ್ತುವಾರಿ ಸಚಿವರ ಬದಲಾವಣೆ ಮಾತು ದಟ್ಟವಾಗಿ ಕೇಳಿಬರುತ್ತಿದೆ. 

ಸರ್ಕಾರದಲ್ಲಿ ಪ್ರಬಲ ಖಾತೆ ಜೊತೆಗೆ ಬಾಗಲಕೋಟೆ ಅಥವಾ ವಿಜಯಪುರ ಉಸ್ತುವಾರಿ ಮೇಲೆ ಕಣ್ಣಿಟ್ಟಿರುವ ನಿರಾಣಿ ಅವರೇ ಜಿಲ್ಲೆಯ ಹೊಣೆ ಹೊತ್ತುಕೊಳ್ಳುತ್ತಾರಾ ಎಂಬುದು ಈ ವಾರದಲ್ಲೇ ಸ್ಪಷ್ಟವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು