ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು: ಸಚಿವ ಎಚ್‌.ಕೆ.ಪಾಟೀಲ ವಿಶ್ವಾಸ

Published 21 ಏಪ್ರಿಲ್ 2024, 14:29 IST
Last Updated 21 ಏಪ್ರಿಲ್ 2024, 14:29 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಉತ್ತರ ಕರ್ನಾಟಕ ಭಾಗದ ಎಲ್ಲ 12 ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದು ಸಚಿವ ಎಚ್‌.ಕೆ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ 1.10 ಲಕ್ಷ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದ್ದೇವೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಕಟುವಾಗಿ ಟೀಕೆ ಮಾಡಿದ್ದರು. ರಾಜ್ಯವನ್ನು ದಿವಾಳಿ ಮಾಡುತ್ತಾರೆ. ಜಾರಿಗೆ ತರಲು ಸಾಧ್ಯವೇ ಆಗದ ಕಾರ್ಯಕ್ರಮ, ಜನರಿಗೆ ಮೋಸ ಮಾಡುತ್ತಾರೆ ಎಂದೆಲ್ಲ ಆರೋಪಿಸಿದ್ದರು. ಪ್ರಧಾನಿ ಅವರೇ ನಮ್ಮ ಗ್ಯಾರಂಟಿಗಳನ್ನು ಶೇ 99ರಷ್ಟು ಜಾರಿಗೊಳಿಸಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ ಎಂದರು.

ಶಕ್ತಿ ಯೋಜನೆ ಮೂಲಕ 163 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 1.60 ಲಕ್ಷ ನೋಂದಾಯಿತ ಕುಟುಂಬಗಳಿಗೆ ಸೌಲಭ್ಯ ಒದಗಿಸಿದ್ದೇವೆ. ಗೃಹ ಲಕ್ಷ್ಮಿ 1.21 ಕೋಟಿ ಮಹಿಳೆಯರು ಪ್ರತಿ ತಿಂಗಳು ₹ 2 ಸಾವಿರ ನೀಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 1.28 ಲಕ್ಷ ಕುಟುಂಬಗಳು ಪ್ರಯೋಜನ ಪಡೆದುಕೊಂಡಿದ್ದಾರೆ, ಯುವ ನಿಧಿ ಯೋಜನೆಯಡಿ ₹16 ಕೋಟಿ ವಿನಿಯೋಗಿಸಿದ್ದೇವೆ ಎಂದರು.

ಬರ ಪರಿಹಾರವನ್ನು ನೀಡದೇ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಧಾನಿ ಯತ್ನಸಿದರು. ಒಂದು ವೇಳೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿದ್ದರೇ ಸಂತ್ರಸ್ತ ಪ್ರತಿ ಕುಟುಂಬಕ್ಕೆ ₹13 ಸಾವಿರ ನೀಡಬಹುದಿತ್ತು. ಆದರೆ, ದುರ್ದೈವ ಪ್ರಧಾನಿ ರಾಜಕಾರಣ ಮಾಡಿದರು. ಪರಿಣಾಮ ಜನರಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಶಂಕೆ, ಅನುಮಾನ ಹುಟ್ಟುವಂತೆ ಆಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ₹1 ಲಕ್ಷ ನೀಡುತ್ತೇವೆ, ಪಂಚ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ದೇಶದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಘೋಷಣೆಗಳು ಪರಿಣಾಮ ಬೀರತೊಡಗಿದೆ. ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದರು.

ದೇಶದ ‍ಪ್ರಜಾಪ್ರಭುತ್ವ ವ್ಯವಸ್ಥೆ ಮೋದಿ ಅವರಿಂದ ಸರ್ವಾಧಿಕಾರತ್ವಕ್ಕೆ ತೆರಳುತ್ತಿದೆ ಎಂದು ಆರೋಪಿಸಿದರು.

ಚೊಂಬು ನೀಡಿದವರು ಯಾರು?:

ಕರ್ನಾಟಕಕ್ಕೆ ಚೊಂಬು ನೀಡಿದವರು ಯಾರು? ಅಕ್ಷಯ ಪಾತ್ರ ನೀಡಿದವರು ಯಾರು? ಎಂಬುದನ್ನು ರಾಜ್ಯದ ಜನತೆ ಈ ಚುನಾವಣೆಯಲ್ಲಿ ನಿರ್ಧಾರ ಮಾಡಲಿದ್ದಾರೆ. ರಾಜ್ಯದ ಪಾಲಿನ ತೆರಿಗೆ ಹಣ ಕೊಡದೇ, ಬರ ಪರಿಹಾರ ಕೊಡದೇ ಚೊಂಬು ಕೊಟ್ಟವರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಅಭ್ಯಂತರವಿಲ್ಲ:

ಕೃಷ್ಣಾ ನದಿ ನೀರು ಕುಡಿಯಲು ಚಿಕ್ಕಬಳ್ಳಾಪುರ, ಕೋಲಾರಕ್ಕೆ ಕೊಡಲು ಅಡ್ಡಿಯಿಲ್ಲ. ಆದರೆ, ಸದ್ಯ ಈ ಭಾಗದ ಜನರಿಗೆ ನೀರು ಸಾಲುತ್ತಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯಲು ದೇವೇಗೌಡರು ಹೇಳಿಕೆ ನೀಡಿದ್ದಾರೆ. ಬ್ರಿಜೇಶ್‌ ಕುಮಾರ್‌ ಐತೀರ್ಪನ್ನು ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿಲ್ಲ. ಆ ಕೆಲಸ ಕೇಂದ್ರ ಸರ್ಕಾರ ಮೊದಲು ಮಾಡಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ, ಮಲ್ಲಿಕಾರ್ಜುನ ಲೋಣಿ, ಮಹಾಂತೇಶ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT