ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ: ಡಾ.ಎಚ್‌.ಸಿ.ಮಹಾದೇವಪ್ಪ ಕಳವಳ

Last Updated 25 ಜುಲೈ 2021, 13:31 IST
ಅಕ್ಷರ ಗಾತ್ರ

ವಿಜಯಪುರ: ದೇಶದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ, ಸಂವಿಧಾನ ಅಪಾಯದಲ್ಲಿವೆ. ಈ ಸಂದರ್ಭದಲ್ಲಿ ಶೂದ್ರ ಶಕ್ತಿಗಳು ಸಂಘಟನಾತ್ಮಕವಾಗಿ ಹೋರಾಟ ನಡೆಸುವ ಮೂಲಕ ದ್ವಿಜ ಶಕ್ತಿಗಳನ್ನು ಹಿಮ್ಮೆಟಿಸಬೇಕಾಗಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಸಿದ್ದಲಿಂಗಯ್ಯ ಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹರಿದುಹಂಚಿಹೋಗಿರುವ ದಲಿತ ಸಂಘಟನೆಗಳು ಒಂದು ಸಂಘ ಮತ್ತು ಒಂದು ನಾಯಕತ್ವದಲ್ಲಿ ಒಂದುಗೂಡಬೇಕಿದೆ ಎಂದು ಸಲಹೆ ನೀಡಿದರು.

ಪ್ರಗತಿಪರ, ಶೋಷಿತ ಸಮುದಾಯದ ನಾಯಕರನ್ನು ಜಾತಿ ಮತ್ತು ಹಣ ಬಲದಿಂದ ರಾಜಕೀಯವಾಗಿ ಮೂಲೆಗುಂಪು ಮಾಡುವ ಶಕ್ತಿಗಳು ಕೇವಲ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಇವೆ ಎಂದು ಹೇಳಿದರು.

ಚುನಾವಣೆಯಲ್ಲಿ ಸೋಲು, ಗೆಲುವನ್ನು ಹಣ ನಿರ್ಧರಿಸುತ್ತಿದೆ. ಯೋಗ್ಯರು ಆಯ್ಕೆಯಾಗುವುದು ಕಷ್ಟವಾಗಿದೆ. ಎಲ್ಲ ಪಕ್ಷಗಳಲ್ಲೂ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯನ್ನು ನಿಲ್ಲಿಸುವ ಮೊದಲು ₹10 ಕೋಟಿ ಇದೆಯಾ ಎಂದುಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕರ್ನಾಟಕ ಸೇರಿದಂತೆ ದೇಶದಲ್ಲಿ ಸದ್ಯ ಧರ್ಮ ಆಧರಿತ ರಾಜಕಾರಣ ನಡೆಯುತ್ತಿದ್ದು, ಇದು ಬಹಳ ಅಪಾಯಕಾರಿಯಾಗಿದೆ. ಶೋಷಿತ ಸಮಾಜಗಳು ನಶಿಸಿಹೋಗುತ್ತವೆ.ಈ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಗೆ ನಾಯಕತ್ವ ಇಲ್ಲದಿದ್ದರೇ ಸಮಾಜ ಕಟ್ಟಲು ಆಗದು ಎಂದು ಹೇಳಿದರು.

ಕುವೆಂಪು ನಂತರ ಸಮಾಜದಲ್ಲಿ ಜಾಗೃತಿ ಮೂಡಿಸಿದ ಕವಿ ಸಿದ್ದಲಿಂಗಯ್ಯನವರಾಗಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಶೋಷಿತರ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದರು.

ಶಾಸಕ ಶಿವಾನಂದ ಪಾಟೀಲ, ಜಾತಿ, ಧರ್ಮಾಧಾರಿತ ಯಾವ ಸಮಾಜ, ದೇಶವೂ ಅಭಿವೃದ್ಧಿಯಾಗದು. ಅಧೋಗತಿಗೆ ತಲುಪುತ್ತವೆ ಎನ್ನುವುದಕ್ಕೆ ಅಫ್ಘಾನಿಸ್ತಾನ, ಪಾಕಿಸ್ತಾನವನ್ನು ನೋಡಬಹುದಾಗಿದೆ. ಭಾರತ ಸುಭದ್ರವಾಗಿ ಉಳಿಯಲು ಬುದ್ಧ, ಬಸವ, ಅಂಬೇಡ್ಕರ್‌, ಸಿದ್ದಲಿಂಗಯ್ಯನವರಂತವರು ಕಾರಣ ಎಂದು ಹೇಳಿದರು.

ನಮ್ಮ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಸಾಹಿತಿ ಸಿದ್ದಲಿಂಗಯ್ಯ. ಸಮಾಜದ ಏಳಿಗೆಗಾಗಿ ಶ್ರಮಿಸಿದ ಸಾಹಿತಿಯಾಗಿದ್ದಾರೆ ಎಂದು ತಿಳಿಸಿದರು.

ಶಾಸಕ ಯಶವಂತರಾಯಗೌಡ ಪಾಟೀಲ, ಅಂಬೇಡ್ಕರ್‌, ಸಿದ್ದಲಿಂಗಯ್ಯ ಅವರ ವಿಚಾರಧಾರೆಗಳು ಸೂರ್ಯ, ಚಂದ್ರ ಇರುವವರೆಗೂ ಇರುತ್ತವೆ. ಅವುಗಳನ್ನು ಕಾರ್ಯರೂಪಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಮಾಜಿ ಶಾಸಕ ಪ್ರೊ.ರಾಜು ಅಲಗೂರ, ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕಿದೆ. ಅವರು ರಚಿಸಿದ ಸಾಹಿತ್ಯ ಸಂಘಟನೆಗಳಹೋರಾಟಕ್ಕೆ ಪ್ರಾರ್ಥನಾ ಗೀತೆಗಳಾಗಿವೆ ಎಂದು ಅವರು ಹೇಳಿದರು.

ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ.ಶಿವಶಂಕರ, ಸಿದ್ದಲಿಂಗಯ್ಯ ಅವರು ಎಂದಿಗೂ ತಾವು ನಂಬಿಕೊಂಡು ಬಂದಿದ್ದ ಸಿದ್ದಾಂತದೊಂದಿಗೆ ರಾಜಿಮಾಡಿಕೊಳ್ಳಲಿಲ್ಲ, ತಮ್ಮ ನೈತಿಕತೆ ಮಾರಿಕೊಳ್ಳಲಿಲ್ಲ. ಅವಕಾಶವಾದಿ, ಸಮಯಸಾಧಕರಾಗಿರಲಿಲ್ಲ.ಸಂಸಾರದ ಬದಲು ಸಮಾಜವನ್ನು, ಜನಾಂಗವನ್ನು ಪ್ರೀತಿಸಿದರು ಎಂದರು.

ಡಿಎಸ್‌ಎಸ್‌ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್‌, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಎಸ್‌.ಎಂ.ಪಾಟೀಲ ಗಣಿಹಾರ, ಮೆಹಬೂಬಸಾಬ್‌ ತಾಂಬೋಳಿ, ಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಸಿದ್ದು ರಾಯಣ್ಣವರ, ರಮೇಶ ಧರಣಾಕರ, ವೈ.ಸಿ.ಮಯೂರ, ಮಾರುತಿ ಬೌದ್ಧೆ, ಎಸ್‌.ಡಿ.ಕುಮಾಣಿ, ಶ್ರೀಮಂತ ನಡುವಿನ ಕೇರಿ, ಎಸ್‌.ಪಿ.ಸುಳ್ಳದ, ಅಶೋಕ ಚಲವಾದಿ, ಬಿ.ಸಿ.ವಾಲಿ, ವಿನಾಯಕ ಗುಣಸಾಗರ, ಶರಣು ಶಿಂಧೆ, ಪ್ರೊ.ಅಂಬಣ್ಣ ಜೀವಣಗಿ ಇದ್ದರು.

****

ಜಾತಿ, ಧರ್ಮ, ಹಣದಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ. ಪ್ರಜಾಪ್ರಭುತ್ವ ದುರ್ಬಲವಾದರೆ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು, ಮಹಿಳೆಯರು ಬೀದಿಪಾಲಾಗುತ್ತಾರೆ

ಡಾ.ಎಚ್‌.ಸಿ.ಮಹಾದೇವಪ್ಪ,ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT