ಶನಿವಾರ, ಮೇ 28, 2022
21 °C
ವ್ಯಾಪಾರಿಗಳು, ಅಂಗಡಿಕಾರರಿಗೆ ದಂಡ, ದೂರು ದಾಖಲು

ವಿಜಯಪುರ: ಅಳತೆ, ತೂಕದಲ್ಲಿ ಮೋಸ - ಎಚ್ಚರ ಗ್ರಾಹಕ ಎಚ್ಚರ

ಬಸವರಾಜ್‌ ಸಂಪಳ್ಳಿ/ ಎ.ಸಿ.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಎಲ್ಲ ವ್ಯಾಪಾರ, ವಹಿವಾಟಿನಲ್ಲೂ ಲಾಭವೇ ಪ್ರಧಾನವಾಗಿರುವ ಈ ದಿನಗಳಲ್ಲಿ ಗ್ರಾಹಕರಿಗೆ ಒಂದಲ್ಲ ಒಂದು ಬಗೆಯ ಮೋಸವಾಗುತ್ತಲೇ ಇರುತ್ತವೆ. ಆದರೆ, ಬೆಳಕಿಗೆ ಬರುವುದು ಮಾತ್ರ ಅಲ್ಲಲ್ಲಿ ಒಂದೊಂದು. ಗ್ರಾಹಕರು ಮೈಯೆಲ್ಲ ಕಣ್ಣಾಗಿದ್ದರೆ ಮಾತ್ರ ಈ ಮೋಸಗಳು ಬಯಲಾಗಲು ಸಾಧ್ಯ.

ಅದರಲ್ಲೂ ಇಂದಿನ ಆನ್‌ಲೈನ್‌ ಮಾರಾಟ ವ್ಯವಸ್ಥೆಯಲ್ಲಂತೂ ಯಾರನ್ನು ನಂಬಬೇಕು, ಯಾವುದನ್ನು ನಂಬಬೇಕು ಎಂಬುದು ಗ್ರಾಹಕರಿಗೆ ತಿಳಿಯದಂತಾಗಿದೆ. ಇದನ್ನು ತಡೆಯುವ ಉದ್ದೇಶಕ್ಕಾಗಿಯೇ ಅನೇಕ ಕಾನೂನು, ಇಲಾಖೆ,  ಅಧಿಕಾರಿಗಳು ಇದ್ದರೂ ಅವರ ಕಣ್ಣಿಗೂ ಮಣ್ಣೆರೆಚುವಷ್ಟು ವ್ಯವಸ್ಥೆ ಜಾಣವಾಗಿರುವುದರಿಂದ ಪ್ರತಿಯೊಬ್ಬ ಗ್ರಾಹಕರು ಎಚ್ಚರ ವಹಿಸಲೇ ಬೇಕಾದ ಸ್ಥಿತಿ ಇದೆ.

ಗ್ರಾಹಕರು ಕೊಳ್ಳುವ ವಸ್ತುಗಳ ತೂಕ, ಅಳತೆ, ಗುಣಮಟ್ಟದಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಮೋಸ ಮಾಡುವ ಒಂದಲ್ಲ ಒಂದು ಪ್ರಕರಣಗಳು ಜಿಲ್ಲೆಯಲ್ಲೂ ಆಗಾಗ ಪತ್ತೆಯಾಗುತ್ತಲೇ ಇವೆ. ದಿನ ಬಳಕೆ ವಸ್ತುಗಳ ಅಳತೆ ಮತ್ತು ತೂಕದಲ್ಲಿ ಮೋಸ ಮಾಡಿ ಅನೇಕ ವ್ಯಾಪಾರಿಗಳು ಸಾಕ್ಷಿ ಸಮೇತ ಸಿಕ್ಕಿಬಿದ್ದು ದಂಡ ತೆತ್ತರುವ ಉದಾಹರಣೆಗಳು  ಜಿಲ್ಲೆಯಲ್ಲಿ ಸಾಕಷ್ಟು ಇವೆ. ಇನ್ನು ಅನೇಕರು ತಪ್ಪಿಸಿಕೊಂಡಿರುವುದು ಉಂಟು.

ವಸ್ತುಗಳ ತೂಕ ಮತ್ತು ಅಳತೆಯಲ್ಲಾಗುತ್ತಿರುವ ಮೋಸಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಗ್ರಾಹಕರಿಂದ ಹೆಚ್ಚು ದೂರುಗಳು ಬರುತ್ತಿಲ್ಲ ಎಂಬುದು ಇಲಾಖೆ ಅಧಿಕಾರಿಗಳ ಕೊರಗು. ಗ್ರಾಹಕರು ಹೆಚ್ಚು ಜಾಗೃತರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಏನೇ ಆಗಲಿ ಗ್ರಾಹಕರಿಗೆ ಯಾವೆಲ್ಲ ಬಗೆಯಲ್ಲಿ ವ್ಯಾಪಾರಿಗಳು, ಮಾರಾಟಗಾರರು, ಅಂಗಡಿಕಾರರು ಮೋಸ ಮಾಡುತ್ತಿದ್ದಾರೆ. ಗ್ರಾಹಕರು ಯಾವ ರೀತಿ ಮೋಸ ಹೋಗುತ್ತಿದ್ದಾರೆ,  ಕಾನೂನು ಮಾಪನ ಇಲಾಖೆ ಅಧಿಕಾರಿಗಳು ಎಷ್ಟೆಲ್ಲ ಮೋಸದ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ ಎಂಬುದರ ಮೇಲೆ ಈ ಬಾರಿಯ ‘ನಮ್ಮ ಜನ ನಮ್ಮ ಧ್ವನಿ‘ ಬೆಳಕು ಚೆಲ್ಲಿದೆ.

845 ದೂರು ದಾಖಲು:

ಜಿಲ್ಲೆಯ ಕಾನೂನು ಮಾಪನ ಇಲಾಖೆ ಅಧಿಕಾರಿಗಳು 3895 ಅಂಗಡಿಗಳನ್ನು ಸ್ವಯಂ ಪರಿಶೀಲನೆ ಮಾಡಿ 845 ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ₹14,46,500 ದಂಡ ಸಂಗ್ರಹ ಮಾಡಲಾಗಿದೆ ಎನ್ನುತ್ತಾರೆ ವಿಜಯಪುರ ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಪಾಣಿಶೆಟ್ಟರ್.

ಮೋಸ..ಮೋಸ..:

ಹೆಸರಿಗಷ್ಟೇ ನ್ಯಾಯ ಬೆಲೆ ಅಂಗಡಿಗಳು. ಆದರೆ, ಇಲ್ಲಿಯೂ ಒಂದಿಲ್ಲೊಂದು ಅನ್ಯಾಯಗಳು ಬೆಳಕಿಗೆ ಬರುತ್ತಿವೆ. ಫಲಾನುಭವಿಗಳಿಗೆ ನೀಡಬೇಕಾದ ಅಕ್ಕಿ, ಗೋಧಿ, ಸಕ್ಕರೆ ತೂಕ, ಅಳತೆಯಲ್ಲಿ ಮೋಸ ಮಾಡುವುದು ಬೆಳಕಿಗೆ ಬಂದಿದೆ. ಹೌದು, ಜಿಲ್ಲೆಯಲ್ಲಿ 325 ನ್ಯಾಯಬೆಲೆ ಅಂಗಡಿಗಳನ್ನು ಕಾನೂನು ಮಾಪನ ಇಲಾಖೆ ಅಧಿಕಾರಿಗಳುಯ ತಪಾಸಣೆ ಮಾಡಿದ್ದು, ಇದರಲ್ಲಿ 72 ಅಂಗಡಿಗಳಲ್ಲಿ ಪಡಿತರ ಮಾರಾಟದಲ್ಲಿ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ₹ 1.26 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಪೆಟ್ರೋಲ್‌ ಪಂಪ್‌ಗಳಲ್ಲಿ 223 ಪೆಟ್ರೋಲ್‌ ಪಂಪ್‌ಗಳನ್ನು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಇದರಲ್ಲಿ 39 ಪೆಟ್ರೋಲ್‌ ಪ‍ಂಪ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಅಳತೆಯಲ್ಲಿ ಮೋಸ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ₹21,500 ದಂಡ ವಿಧಿಸಲಾಗಿದೆ.

ಅದೇ ರೀತಿ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಗೋಡನ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದಾಗಲ್ಲೂ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ₹ 7 ಸಾವಿರ ದಂಡ ಹಾಕಲಾಗಿದೆ.

ಆಹಾರ ಪದಾರ್ಥಗಳ ಪ್ಯಾಕೇಟ್‌ ಮೇಲೆ ಎಂಆರ್‌ಪಿ ಮುದ್ರಿಸದ ಸಂಬಂಧ 63 ಪ್ರಕರಣಗಳನ್ನು ದಾಖಲಿಸಲಾಗಿದೆ. ಇರದಲ್ಲಿ 12 ತಯಾರಕರು ಮತ್ತು ಐವರು ವಿತರಕರ ಮೇಲೆ ಪ್ರಕರಣ ದಾಖಲಿಸಿ ₹2.40 ಲಕ್ಷ ದಂಡ ವಿಧಿಸಲಾಗಿದೆ.

ಹೊರ್ತಿ ಬಳಸಿ ಬಯೋ ಡೀಸೆಲ್‌ ಅನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ದೂರು ದಾಖಲಿಸಲಾಗಿದೆ.

ವಿಜಯಪುರದ ಕೈಗಾರಿಕಾ ಪ್ರದೇಶದ ಮೇಲೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಅನುಮತಿ ಇಲ್ಲದೇ ಅಡುಗೆ ಎಣ್ಣೆ ಪ್ಯಾಕಿಂಗ್‌ ಮಾಡುತ್ತಿದ್ದ ಎರಡು ಅಂಗಡಿಗಳ ವಿರುದ್ಧ ದೂರು ದಾಖಲಿಸಿಕೊಂಡು ₹ 20 ಸಾವಿರ ದಂಡ ವಿಧಿಸಿದ್ದಾರೆ. ಅದೇ ರೀತಿ ಅನಧಿಕೃತವಾಗಿ ಅಕ್ಕಿಯನ್ನು ಪ್ಯಾಕ್‌ ಮಾಡುತ್ತಿದ್ದ ಅಂಗಡಿಯನ್ನು ಪತ್ತೆ ಹಚ್ಚಿ ₹ 25 ಸಾವಿರ ದಂಡ ವಸೂಲಿ ಮಾಡಿದ್ದಾರೆ.

ವಿಜಯಪುರ ಜಲನಗರದ ರಿಲಯನ್ಸ್ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಸ್ಯಾನಿಟೈಜರ್ ಬಾಟಲಿ ಮೇಲೆ ಎಂಆರ್‌ಪಿ ದಾಖಲಿಸದೇ ಮಾರಾಟ ಮಾಡುವುದು ಕಂಡುಬಂದ ಹಿನ್ನೆಲೆಯಲ್ಲಿ ₹35 ಸಾವಿರ ದಂಡವನ್ನು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ವಿಧಿಸಿದ್ದಾರೆ.

ಸಿಂದಗಿ ಪಟ್ಟಣದಲ್ಲಿ ‘ನಮ್ಮ ಗ್ರೋಮೋರ್‌‘ ರಾಸಾಯನಿಕ ಗೊಬ್ಬರ ಮಾರಾಟ ಮಳಿಗೆಯಲ್ಲಿ ಎಂಆರ್‌ಪಿ ಇಲ್ಲದೇ ಮಾರಾಟ ಮಾಡುವುದು ಕಂಡಬಂದ ಹಿನ್ನೆಲೆಯಲ್ಲಿ ₹ 55 ಸಾವಿರ ದಂಡ ವಸೂಲಿ ಮಾಡಲಾಗಿದೆ. 

ಜಿಲ್ಲೆಯಲ್ಲಿ 41ವೇ ಬ್ರಿಡ್ಜ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಪರಿಶೀಲನೆ ಮಾಡಲಾಗಿದೆ. ಆದರೆ, ವ್ಯತ್ಯಾಸ ಕಂಡುಬಂದಿಲ್ಲ ಎನ್ನುತ್ತಾರೆ ಕಾನೂನು ಮಾ‍ಪನ ಇಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿರುವ ಅನೇಖ ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರುಗಳು ಆಗಾಗ ವ್ಯಕ್ತವಾಗುತ್ತಲೇ ಇವೆ. ಆದರೆ, ಇವುಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಕಬ್ಬು ಬೆಳೆಗಾರರಿಗೆ ತೂಕ ಮತ್ತು ಅಳತೆಯಲ್ಲಿ ಖಂಡಿತವಾಗಿಯೂ ಮೋಸವಾಗುತ್ತಿದೆ. ಕಾರ್ಖಾನೆಗಳು ಬಲಾಢ್ಯರ ಕೈಯಲ್ಲಿರುವುದರಿಂದ ದೂರು ನೀಡಿದರೂ ನ್ಯಾಯ ಸಿಗುವುದಿಲ್ಲ. ದೂರು ನೀಡಿದವರಿಗೆ ತೊಂದರೆಯೇ ಹೆಚ್ಚು. ಕಾರಣ ರೈತರು ದೂರು ನೀಡಲು ಮುಂದಾಗುವುದಿಲ್ಲ ಎನ್ನುತ್ತಾರೆ ಇಂಡಿ ತಾಲ್ಲೂಕಿನ ರೈತರು.

ತೂಕ ಮತ್ತು ಅಳತೆಯಲ್ಲಿ ಸಾಮಾನ್ಯ ಗ್ರಾಹಕರಿಗಿಂತಲೂ ರೈತರಿಗೆ ಮೋಸವಾಗುವುದಂತೂ ಸತ್ಯ. ಆದರೆ, ರೈತರು ಈ ಬಗ್ಗೆ ಯಾರ ಹತ್ತಿರವೂ ದೂರು ನೀಡುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುತ್ತಾರೆ ಇಂಡಿ ತಾಲ್ಲೂಕಿನ ರೈತ ಪರಸಪ್ಪ ಸಿನ್ನೂರ.

ದೂರು ನೀಡಲು ಅವಕಾಶ:

ತೂಕ ಮತ್ತು ಅಳತೆಯಲ್ಲಿ ಎಲ್ಲಿಯಾದರೂ ಮೋಸ, ವಂಚನೆಯಾಗುತ್ತಿರುವುದು ಕಂಡುಬಂದರೆ ಗ್ರಾಹಕರು ವಿಜಯಪುರದ ನಗರದ ಗಗನ್‌ ಮಹಲ್‌ ರಸ್ತೆಯಲ್ಲಿ ಇರುವ ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆಯ ದೂರವಾಣಿ ಸಂಖ್ಯೆ 08352–250829ಗೆ ಹಾಗೂ  ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ  ಪಾಣಿಶೆಟ್ಟರ್ ಅವರ ಮೊಬೈಲ್‌ ಸಂಖ್ಯೆ 9481611133 ಗೆ ಕರೆ ಮಾಡಿ ದೂರು ನೀಡಬಹುದು. ಅಲ್ಲದೇ, ACbjpur-Im-ka@nic.in ಗೆ ಇ–ಮೇಲ್‌ ಮೂಲಕವೂ ದೂರು ನೀಡಬಹುದು.

*******

ತೂಕ, ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ, ಅಳತೆ ಸಾಧನಗಳು ಸರಿಯಾಗಿಲ್ಲದಿದ್ದರೆ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದರೆ ಇಲಾಖೆಗೆ ದೂರು ನೀಡಿದರೆ,ಕಾನೂನು ಕ್ರಮಕೈಗೊಳ್ಳಲಾಗುವುದು

–ಪಾಣಿ ಶೆಟ್ಟರ

ಸಹಾಯಕ ನಿಯಂತ್ರಕ, ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆ 

*****

ಗ್ರಾಹಕರಿಗೆ ಅಗತ್ಯ ಮಾಹಿತಿ

*ಎಲ್ಲ ತೂಕ, ಅಳತೆಯ ಸಾಧನಗಳನ್ನು ಪ್ರತಿ 12 ತಿಂಗಳಿಗೊಮ್ಮೆ ಇಲಾಖೆಯಿಂದ ಪರಿಶೀಲಿಸಿ ಮುದ್ರೆ ಹಾಕಲಾಗುತ್ತದೆ. ತೂಕ ಮತ್ತು ಅಳತೆ ಸಾಧನಗಳ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮುದ್ರೆ ಇಲ್ಲದಿದ್ದರೆ ಗ್ರಾಹಕರು ಎಚ್ಚರ ವಹಿಸಬೇಕು.

*ಸಂತೆ ವ್ಯಾಪಾರಸ್ಥರನ್ನು ಹೊರತು ಪಡಿಸಿ ಇತರೆ ವ್ಯಾಪಾರಸ್ಥರು ತಕ್ಕಡಿಯನ್ನು ಕಡ್ಡಾಯವಾಗಿ ತೂಗು ಹಾಕಿರಬೇಕು. ತೂಕ ಮಾಡುವ ಮೊದಲು ತಕ್ಕಡಿಯ ಎರಡೂ ತಟ್ಟೆಗಳು ಖಾಲಿಯಾಗಿದ್ದು, ಅವುಗಳ ಸಮತೋಲನ ಖಚಿತಪಡಿಸಿಕೊಳ್ಳಬೇಕು. ತೂಕ ಮಾಡುವಾಗ ತಕ್ಕಡಿಯ ಪಾಯಿಂಟ್‌ ಗಮನಿಸಬೇಕು.

*ಪಾತ್ರೆ, ಸೀಸೆ ಮತ್ತು ಇತರೆ ಡಬ್ಬಿಗಳಲ್ಲಿ ಎಣ್ಣೆ, ಬೆಣ್ಣೆ, ತುಪ್ಪ ಇವುಗಳನ್ನು ಕೊಳ್ಳುವಾಗ ಪಾತ್ರೆಗಳ ಸಮಾನ ತೂಕವು ಪದಾರ್ಥವನ್ನು ತೂಕ ಮಾಡುವವರೆಗೂ ತಕ್ಕಡಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

*ರದ್ದಿ ಕಾಗದ ಮಾರಾಟ ಮಾಡುವಾಗ ಇಲಾಖೆಯಿಂದ ಪರಿಶೀಲಿಸಿ ಮುದ್ರೆ ಮಾಡಲಾದ ತೂಕದ ಕಲ್ಲುಗಳನ್ನು ಮತ್ತು ತಕ್ಕಡಿಗಳನ್ನು ಉಪಯೋಗಿಸುತ್ತಿದ್ದಾರೆಯೇ ಎಂದು ನೋಡಿಕೊಳ್ಳಬೇಕು. 

*ಸಿಹಿ ತಿಂಡಿ, ಬೇಕರಿ ವಸ್ತುಗಳನ್ನು ಕೊಳ್ಳುವಾಗ ಡಬ್ಬಿಯ ತೂಕವನ್ನು ಬಿಟ್ಟು ಉಳಿದ ತೂಕವನ್ನು ಮಾತ್ರ ಲೆಕ್ಕ ಮಾಡಲಾಗುತ್ತಿದೆಯೇ ಎಂದು ನೋಡಿ, ಆ ತಿಂಡಿಯ ಜೊತೆ ಡಬ್ಬಿಯ ತೂಕವನ್ನು ಸೇರಿಸಕೂಡದು.

*ಕಿ.ಗ್ರಾಂ, ಲೀಟರ್‌, ಮೀಟರ್‌, ಸಂಖ್ಯೆ ಇತ್ಯಾದಿ ಮೆಟ್ರಿಕ್‌ ತೂಕ ಮತ್ತು ಅಳತೆಗಳಲ್ಲಿಯೇ ವಸ್ತುಗಳಿಗೆ ಬೆಲೆ ಕೇಳಬೇಕು ಮತ್ತು ವ್ಯವಹಾರ ಮಾಡಬೇಕು. ಬದಲಿಗೆ ₹ 5 ವಸ್ತು ಕೊಡಿ, ₹ 10ರ ವಸ್ತು ಕೊಡಿ ಎಂದು ಕೇಳಬಾರದು.

*ಪ್ಯಾಕ್‌ ಮಾಡಿದ ವಸ್ತುಗಳನ್ನು ಕೊಳ್ಳುವಾಗ ತಯಾರಿಕ ಹಾಗೂ ಪ್ಯಾಕರ್‌, ಆಮದುದಾರರ ಹೆಸರು ಮತ್ತು ವಿಳಾಸ, ಪದಾರ್ಥದ ಹೆಸರು, ಪೊಟ್ಟಣದಲ್ಲಿರುವ ಪದಾರ್ಥದ ಮಾರಾಟ ಬೆಲೆ ಪರಿಶೀಲಿಸಬೇಕು.

* ಪ್ಯಾಕ್‌ ಮಾಡಿದ ಸಾಮಗ್ರಿಯ ತೂಕದ ಬಗ್ಗೆ ಸಂಶಯ ಬಂದಲ್ಲಿ ನಿಮ್ಮ ಎದುರಿನಲ್ಲೇ ತೂಕ ಮಾಡಿಕೊಡಲು ಸೂಚಿಸಬೇಕು.

* ತಂಪು ಪಾನೀಯಗಳ ಬಾಟಲ್‌ಗಳ ಮೇಲೆ ಮುಚ್ಚಳಗಳ ಮೇಲೆ ಗರಿಷ್ಠ ಮಾರಾಟ ಬೆಲೆಯನ್ನು ಮುದ್ರಿಸುವುದು ಕಡ್ಡಾಯ. ಮುದ್ರಿತ ಬೆಲೆಯನ್ನು ಮಾತ್ರ ನೀಡಬೇಕು. ಕೂಲಿಂಗ್‌ ಚಾರ್ಜ್‌ ಎಂದು ಹೆಚ್ಚುವರಿ ತೆಗೆದುಕೊಳ್ಳುವಂತಿಲ್ಲ.

*ಪೆಟ್ರೋಲ್‌ ಪಂಪ್‌ನಲ್ಲಿ ಸ್ಟಾಟ್‌ ಮಾಡಿದ ಕೂಡಲೇ ‘0’ ತೋರಿಸುವುದುನ್ನು ಗಮನಿಸಬೇಕು. ಅಡುಗೆ ಗ್ಯಾಸ್‌ ಸಿಲಿಂಡರ್‌ ಶೀಲ್‌ ಭದ್ರವಾಗಿರುವುದು ಖಚಿತಪಡಿಸಿಕೊಳ್ಳಬೇಕು. 

*ಕಾನೂನು ಮಾಪನ ಇಲಾಖೆಯ ಅನುಮತಿ ಇಲ್ಲದೇ ಪ್ರತ್ಯೇಕ ಸ್ಟಿಕರ್‌ ಮೇಲೆ ಎಂಆರ್‌ಪಿಯನ್ನು ನಮೂದಿಸುವುದು ಅಪರಾಧ. ಪೊಟ್ಟಣ ಸಾಮಗ್ರಿಗಳ ಮೇಲೆ ನಮೂದಿಸಿದ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು ತಿದ್ದುವುದು, ಬದಲಾವಣೆ ಮಾಡುವುದು ಅಪರಾಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.