ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಕ್ಕಳ ಕೋವಿಡ್ ವಿಶೇಷ ಘಟಕ ಆರಂಭಕ್ಕೆ ಕ್ರಮ: ಶಾಸಕ ಎಂ.ಬಿ.ಪಾಟೀಲ ಹೇಳಿಕೆ

Last Updated 14 ಮೇ 2021, 10:19 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಮೂರನೇ ಅಲೆಯಲ್ಲಿ ಚಿಕ್ಕಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ ಎಂಬಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಬಿಎಲ್‌ಡಿಇಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಕೋವಿಡ್ ವಿಶೇಷ ಘಟಕ ಆರಂಭಿಸಲು ಈಗಲೇ ಕ್ರಮ ಜರುಗಿಸಬೇಕು ಎಂದು ಸಂಸ್ಥೆ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿಶುಕ್ರವಾರನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯನ್ನು ಗಮನದಲ್ಲಿರಿಸಿ ನಾವು ಈಗಿನಿಂದಲೇ ಮಕ್ಕಳ ಚಿಕಿತ್ಸೆಗೆ ಹೆಚ್ಚು ನಿಗಾ ವಹಿಸಬೇಕು ಎಂದರು.

ಯಾವ ಮಗು ಸಹ ಚಿಕಿತ್ಸೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿ ನಮ್ಮ ಮೇಲೆ ಇದೆ. ಅದರ ಅನುಸಾರ ಹೆಚ್ಚಿನ ಬೆಡ್‌ಗಳು, ಆಕ್ಸಿಜನ್ ವ್ಯವಸ್ಥೆ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲು ಚಿಕ್ಕಮಕ್ಕಳ ವಿಭಾಗವನ್ನು ಈಗಿನಿಂದಲೇ ಸನ್ನದ್ಧಗೊಳಿಸಲು ಸೂಚಿಸಿದರು.

ಮುಖ್ಯವಾಗಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಇಂಜೆಕ್ಷನ್ ಮತ್ತು ಔಷಧಗಳನ್ನು ಈಗಿನಿಂದಲೇ ಸಂಗ್ರಹಿಸಬೇಕು.ಯಾವುದೇ ಪರಿಸ್ಥಿತಿಯಲ್ಲಿ ಔಷಧ ಕೊರತೆಯಾಗುವುದು ಬೇಡ ಎಂದರು.

ವಿಶೇಷವಾಗಿ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಗುವ ತೊಂದರೆಗಳು ಮತ್ತು ಸೂಕ್ತ ಚಿಕಿತ್ಸೆ ಕುರಿತು ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞವೈದ್ಯರೊಂದಿಗೆ ನಮ್ಮ ವೈದ್ಯರ ತಂಡ ಸಮಾಲೋಚನೆ, ಮಾಹಿತಿ, ನೆರವು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಸಂಘಟಿಸಲು ತಿಳಿಸಿದ್ದಾರೆ.

ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಮಾತನಾಡಿ, ಮೂರನೇ ಅಲೆಯನ್ನು ಗಮನಿಸಿ, ಮಕ್ಕಳ ಚಿಕಿತ್ಸಾ ವಿಭಾಗವನ್ನುಎಚ್ಚರಗೊಳಿಸಲಾಗಿದೆ. ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಆರಂಭಿಕ ಹಂತದಲ್ಲಿ 60 ಆಕ್ಸಿಜನ್ ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಅಗತ್ಯವಿದ್ದರೆ ಇನ್ನೂ 60 ಬೆಡ್‌ಗಳಿಗೆ ವಿಸ್ತರಿಸಿ, ಒಟ್ಟು 120 ಆಕ್ಸಿಜನ್ ಸಹಿತ ಮಕ್ಕಳ ಚಿಕಿತ್ಸಾ ವಾರ್ಡ್ ಆರಂಭಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಾಗುವುದು ಮತ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹಿಸಲಾಗುವುದು. ಅಲ್ಲದೇ, ಸರಣಿ ಕಾರ್ಯಾಗಾರಗಳನ್ನು ಏರ್ಪಡಿಸಿ, ತಜ್ಞವೈದ್ಯರೊಂದಿಗೆ ಮಕ್ಕಳ ವೈದ್ಯರು, ಶುಶ್ರೂಷಕ ಸಿಬ್ಬಂದಿ ಹಾಗೂ ತಂತ್ರಜ್ಞರನ್ನು ಸನ್ನದ್ಧಗೊಳಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT