ಕೋವಿಡ್ ಲಸಿಕಾಕರಣ: ವಿಜಯಪುರ ಸಾಧನೆಗೆ ಸಿಎಂ ಮೆಚ್ಚುಗೆ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದಲ್ಲಿ ಸಾಧಿಸಿರುವ ಪ್ರಗತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ನಡೆದ ವಿಡಿಯೊ ಕಾನ್ಪರೆನ್ಸ್ ಸಭೆಯಲ್ಲಿ ಕೋವಿಡ್ ಲಸಿಕಾಕರಣ, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಅವರು, ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಎಂದು ತಿಳಿಸಿದರು.
ಕೋವಿಡ್ ಲಸಿಕಾಕರಣದ ಮೊದಲ ಡೋಸ್ ನೀಡುವಲ್ಲಿ ಜಿಲ್ಲೆ ಶೇ 104ರಷ್ಟು ಸಾಧನೆ ಮಾಡಿದೆ. ಎರಡನೇ ಡೋಸ್ ನೀಡುವಲ್ಲಿ ಶೇ 91 ರಷ್ಟು ಗುರಿ ತಲುಪಿದೆ. ಫೆಬ್ರುವರಿ ಮೊದಲ ವಾರದಲ್ಲಿ ಎರಡನೇ ಡೋಸ್ ಲಸಿಕಾಕರಣ ಪೂರ್ಣಗೊಳಿಸಲಾಗುವುದು ಎಂದು ಸಿಎಂಗೆ ಭರವಸೆ ನೀಡಿದ್ದೇವೆ ಎಂದರು.
ರಾಜ್ಯದ 15 ಜಿಲ್ಲೆಗಳ ಪರಿಶೀಲನಾ ಸಭೆಯಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲೇ ಅತೀ ಹೆಚ್ಚು ಲಸಿಕಾಕರಣ ಆಗಿದ್ದು, ಮೊದಲ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.
15 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಶೇ 61ದಷ್ಟು ಲಸಿಕಾಕರಣವಾಗಿದೆ. ಶಾಲೆಯಿಂದ ಹೊರಗುಳಿದ, ಮನೆಯಲ್ಲಿರುವ ಮಕ್ಕಳಿಗೆ ಮನೆ ಬಾಗಿಲಿಗೆ ತೆರಳಿ ಕೋವಿಡ್ ಲಸಿಕೆ ಹಾಕಲು ಸಿಎಂ ಸೂಚನೆ ನೀಡಿದ್ಧಾರೆ. ಬೂಸ್ಟರ್ ಡೋಸ್ ಸಹ ಹಾಕಲು ಅವರು ಸೂಚಿಸಿದ್ದಾರೆ ಎಂದರು.
ವಾರಾಂತ್ಯ ಕರ್ಫ್ಯೂ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಕೋವಿಡ್ ಪಾಸಿಟಿವಿಟಿ ರೇಟ್, ಚಿಕಿತ್ಸೆ, ಆಸ್ಪತ್ರೆಯಲ್ಲಿರುವ ಪಾಸಿಟಿವ್ ಪೀಡಿತರ ಸಂಖ್ಯೆ, ಹಾಸಿಗೆ ಸೌಲಭ್ಯ, ಆಮಜನಕ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.