ಶನಿವಾರ, ಫೆಬ್ರವರಿ 27, 2021
30 °C
ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ

ಪ್ರಥಮ ದಿನ 359 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ಜನತೆ ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕೋವಿಡ್ 19 ಲಸಿಕೆ ನೀಡುವ ಕಾರ್ಯಕ್ಕೆ ಶನಿವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್ ‘ಡಿ’ ನೌಕರ ಲಕ್ಷ್ಮಣ ಕೊಳೂರಗಿ (57) ಅವರು ಕೋವಿಡ್-19 ಪ್ರಥಮ ಲಸಿಕೆಯನ್ನು ಪಡೆದುಕೊಂಡರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶ್ರೀಶೈಲ ಶಿವಪ್ಪ ಚಟ್ಟರ (59) ಎರಡನೇ ಡೋಸ್, ಜಿಲ್ಲಾ ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರ ಬಾಬಾಜಾನ್ ತಾಜಿಂತರಕ್ (33) ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಕಂಪ್ಯೂಟರ್ ಆಪರೇಟರ್ ಮೀನಾಕ್ಷಿ ಸಲಗರ್ (38) ನಾಲ್ಕನೇ ಡೋಸ್ ಪಡೆದುಕೊಂಡರು.

ಲಸಿಕಾ ಕೇಂದ್ರದಲ್ಲಿ ಪ್ರಧಾನಮಂತ್ರಿ ಭಾಷಣದ ನೇರ ಪ್ರಸಾರದ ವೀಕ್ಷಣೆ ಮಾಡಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಹಾಕುವ ಉದ್ದೇಶಕ್ಕಾಗಿ ಪ್ರತ್ಯೇಕ ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. ಆಧಾರ್ ವೆರಿಫಿಕೇಶನ್ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

359 ಜನರಿಗೆ ಕೋವಿಡ್ ಲಸಿಕೆ: ಕೋವಿಡ್ ಲಸಿಕೆಯನ್ನು ಸರ್ಕಾರದ ನಿರ್ದೇಶನದಂತೆ ಮೊದಲ ಹಂತದಲ್ಲಿ ನಿಗದಿತ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದರು.

ಪ್ರಥಮ ದಿನವಾದ ಶನಿವಾರ 474 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿತ್ತು. ಆದರೆ, 359 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಅನಾರೋಗ್ಯ ಕಾರಣದಿಂದ ಐದು ಜನ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದರು. 88 ಜನ ಗೈರಾಗಿದ್ದರು. ಉಳಿದವರಿಗೆ ಸೋಮವಾರ ಲಸಿಕೆ ಹಾಕಲಾಗುವುದು ಎಂದರು.

ಜಿಲ್ಲಾಸ್ಪತ್ರೆಯಲ್ಲಿ 58, ಬಿಎಲ್‌ಡಿಇ 32,ಮುದ್ದೇಬಿಹಾಳ 51, ವಿಜಯಪುರ ದರ್ಗಾ ನಗರ ಆಸ್ಪತ್ರೆಯಲ್ಲಿ 35, ಸಿಂದಗಿ 60, ಇಂಡಿ 27 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.

ಹಿಂಜರಿ ಬೇಡ: 'ನಾನು ಆರೋಗ್ಯ ಇಲಾಖೆಯ ನೌಕರ, ಕೋವಿಡ್ ಸಂದರ್ಭದಲ್ಲಿಯೂ ಕಾರ್ಯನಿರ್ವಹಿಸಿದ್ದೇನೆ. ಈಗ ಲಸಿಕೆ ಬಂದಿರುವುದು ಅತ್ಯಂತ ಸಂತೋಷ ತಂದಿದೆ. ಮೊದಲಿಗನಾಗಿ ಲಸಿಕೆ ಪಡೆದುಕೊಂಡಿದ್ದು, ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಲಸಿಕೆ ಪಡೆಯಲು ಹಿಂಜರಿಯಬೇಕಾದ ಅವಶ್ಯಕತೆ ಇಲ್ಲ. ಸರ್ಕಾರ ಸಾಕಷ್ಟು ಸಂಶೋಧನೆ ನಡೆಸಿದ ನಂತರವೇ ಈ ಲಸಿಕೆಯನ್ನು ಹೊರ ತಂದಿದೆ' ಪ್ರಥಮವಾಗಿ ಲಸಿಕೆ ಸ್ವೀಕರಿಸಿದ ಲಕ್ಷ್ಮಣ ಕೋಳೂರ ತಿಳಿಸಿದರು.

ಕೋವಿಡ್ ಲಸಿಕೆಯ ಹಿಂದೆ ಅನೇಕ ಜನರ ಶ್ರಮವಿದೆ. ಈ ಲಸಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಯಾವುದೇ ತೆರನಾಗಿ ನನಗೆ ತೊಂದರೆಯಾಗಿಲ್ಲ, ಅಡ್ಡಪರಿಣಾಮದ ಮಾತೇ ಇಲ್ಲ ಲಸಿಕೆ ಪಡೆದ ಎರಡನೇಯ ವ್ಯಕ್ತಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶ್ರೀಶೈಲ ಚಟ್ಟೇರ ಹೇಳಿದರು. 

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಡಾ.ಜಯರಾಜ್, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಮಹೇಂದ್ರ ಕಾಪಸೆ, ಡಾ.ಲಕ್ಕಣ್ಣವರ್ ಡಾ.ಎಂ.ಬಿ.ಬಿರಾದಾರ, ಸಿ.ಎಚ್ ಅಧಿಕಾರಿ ಮಹೇಶ್ ಭಟ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು