ಮಂಗಳವಾರ, ಅಕ್ಟೋಬರ್ 26, 2021
23 °C
ಅಡಿಗಡಿಗೆ ಹಮ್ಸ್‌, ರೋಡ್‌ ಬ್ರೇಕರ್‌; ವಾಹನಗಳ ಸರಾಗ ಸಂಚಾರ ದುಸ್ಥರ

ವಿಜಯಪುರ: ಹದಗೆಟ್ಟ ರಸ್ತೆಗಳಲ್ಲಿ ಅಪಾಯಕಾರಿ ‘ಉಬ್ಬು’ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಮೊದಲೇ ರಸ್ತೆಗಳು ವ್ಯವಸ್ಥಿತವಾಗಿಲ್ಲ. ತೆಗ್ಗು, ಗುಂಡಿಗಳು ಬಿದ್ದು ಹದಗೆಟ್ಟು ಹೋಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇಂತಿಪ್ಪ ರಸ್ತೆಗಳಲ್ಲಿ  ವಾಹನ ಸವಾರರ ತಾಳ್ಮೆ ಪರೀಕ್ಷೆ ಮಾಡುವಂತಿವೆ ಅಪಾಯಕಾರಿ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ರೋಡ್‌ ಬ್ರೇಕರ್‌ಗಳು! 

ವಾಹನಗಳ ವೇಗಮಿತಿ ತಗ್ಗಿಸಲು, ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ನಿರ್ಮಿಸಿರುವ ರಸ್ತೆ ಉಬ್ಬುಗಳೇ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿರುವುದು ದುರ್ದೈವ.

ರೋಡ್‌ ಬ್ರೇಕರ್‌ ಇರುವ ಬಗ್ಗೆ ವಾಹನ ಸವಾರರಿಗೆ ದೂರದಿಂದಲೇ ಸೂಚನೆ ನೀಡುವಂತ ಯಾವುದೇ ಫಲಕ, ಸಿಗ್ನಲ್‌ಗಳನ್ನು ಎಲ್ಲಿಯೂ ಅಳವಡಿಸಿಲ್ಲ. ರೋಡ್‌ ಮಾರ್ಕಿಂಗ್‌, ಬ್ಲಿಂಕರ್ಸ್, ಲೈಟಿಂಗ್‌, ಡಿಪ್ಲಕ್ಸ್‌, ಸೈನ್‌ ಬೋರ್ಡ್‌ ಯಾವುದೂ ಕಂಡುಬರುವುದಿಲ್ಲ. ಹೀಗಾಗಿ ಅಪಘಾತಗಳು ಪ್ರತಿದಿನ ನಡೆಯುತ್ತಲೇ ಇವೆ.

ರೋಡ್‌ ಬ್ರೇಕರ್‌, ಹಮ್ಸ್‌ಗಳ ನಿರ್ಮಾಣಕ್ಕೆ ಯಾವುದೇ ನಿಯಮಾವಳಿಯನ್ನು ಅನುಸರಿಸಿಲ್ಲ. ಏಕ ರೂಪದ ಹಮ್ಸ್‌, ರೋಡ್‌ ಬ್ರೇಕರ್‌ಗಳ ಬದಲು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತವೆ. ಇವುಗಳನ್ನು ಎಂಜಿನಿಯರ್‌ಗಳು ನಿರ್ಮಿಸಿರುವುದೋ ಅಥವಾ ಕೂಲಿಕಾರ್ಮಿಕರು ನಿರ್ಮಿಸಿರುವುದೋ ತಿಳಿಯದಾಗಿವೆ.

ರಸ್ತೆ ಉಬ್ಬುಗಳು ಎಷ್ಟು ಅವೈಜ್ಞಾನಿಕವಾಗಿವೆ ಎಂದರೆ ಬೈಕು, ಕಾರು, ಲಾರಿ, ಬಸ್ಸುಗಳು ಸಹ ಅವುಗಳನ್ನು ಸರಾಗವಾಗಿ ದಾಟಿಕೊಂಡು ಮುಂದೆ ಹೋಗಲಾಗದೇ ಏದುಸಿರು ಬಿಡುತ್ತಾ ನಿಲ್ಲುವಷ್ಟು ಬೇಕಾಬಿಟ್ಟಿಯಾಗಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ವಾಹನಗಳ ಕೆಳಭಾಗಕ್ಕೆ ತಾಗಿ, ಡ್ಯಾಮೇಜ್‌ ಅಗುವಂತಿವೆ. ಬೈಕ್‌ ಸವಾರರಂತು ಹಮ್ಸ್‌ ದಾಟಲಾಗದೇ ಬೀಳುವಂತಿವೆ. ಹಮ್ಸ್‌ಗಳ ಅರಿವಿಲ್ಲದೇ ವೇಗವಾಗಿ ಬರುವ ವಾಹನಗಳ ಹಿಂಬಂದಿ ಸವರಾರರು  ಕೆಳಗೆ ಜಾರಿ ಬಿದ್ದು, ಮುಖ ಮುಸುಡಿ ಒಡೆದುಕೊಳ್ಳವ ಘಟನೆಗಳು ಸಾಮಾನ್ಯವಾಗಿವೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ, ದಿನದ 24 ಗಂಟೆ ಸಹಸ್ರಾರು ವಾಹನಗಳು ಸಂಚರಿಸುವ ವಿಜಯಪುರ ನಗರದ ಬೆಂಗಳೂರು ರಸ್ತೆಯ ರಿಂಗ್‌ ರೋಡ್‌ನಲ್ಲಿ ಅಡಿಗಡಿಗೆ ಮೂರು ಹಮ್ಸ್‌ಗಳನ್ನು ಹಾಕಲಾಗಿದೆ.  ಬೈಕು, ಕಾರು, ಲಾರಿ, ಬಸ್ಸುಗಳು ಸಹ ಈ ಹಮ್ಸ್‌ ದಾಟಿಕೊಂಡು ಮುಂದೆ ಹೋಗಲಾಗದೇ ಏದುಸಿರು ಬಿಡುತ್ತಾ ನಿಲ್ಲುವಷ್ಟು ಬೇಕಾಬಿಟ್ಟಿಯಾಗಿ ನಿರ್ಮಿಸಲಾಗಿದೆ. ಚಾಲಕ ಎಷ್ಟೇ ಪರಿಣಿತನಿದ್ದರೂ ಈ ಹಮ್ಸ್‌ ಅನ್ನು ಸುಲಭವಾಗಿ ದಾಟಿಕೊಂಡು ಹೋಗಲಾಗದ ಪರಿಸ್ಥಿತಿ ಇದೆ. ಪ್ರತಿನಿತ್ಯ ಇಲ್ಲಿ ಹತ್ತಾರು ಜನ ಬೈಕ್‌ ಸವಾರರು ಬಿದ್ದು, ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಹಮ್ಸ್‌ ದಾಟಲಾಗದೇ ಬಿದ್ದವರ ಮೇಲೆ ಹಿಂದಿನಿಂದ ಬರುವ ಭಾರೀ ವಾಹನಗಳು ಹತ್ತಿಕೊಂಡು ಹೋಗಿರುವ ಉದಾಹರಣೆಗಳು ಇವೆ.

ರಾಷ್ಟ್ರೀಯ ಹೆದ್ದಾರಿಯಾಗಿರಲಿ, ರಾಜ್ಯ ಹೆದ್ದಾರಿಯಾಗಿರಲಿ, ಜಿಲ್ಲಾ ಮುಖ್ಯ ರಸ್ತೆಯಾಗಿರಲಿ ಗ್ರಾಮೀಣ ಭಾಗಗಳಲ್ಲಂತೂ ಹಮ್ಸ್‌ಗಳ ಹಾವಳಿಗೆ ಕಡಿವಾಣವೇ ಇಲ್ಲವಾಗಿವೆ. ಕೆಲವು ಕಡೆ ಜನರೇ ಸಿಮೆಂಟ್‌ನಿಂದ ಕಟ್ಟೆ ನಿರ್ಮಿಸಿಕೊಂಡಿದ್ದಾರೆ. 

ಜಿಲ್ಲೆಯಲ್ಲಿ 30ಕ್ಕೂ ಅಧಿಕ ಬ್ಲಾಕ್‌ ಸ್ಪಾಟ್‌ಗಳಿದ್ದು(ಅಪಘಾತ ಹೆಚ್ಚು ಸಂಭವಿಸುವ ಸ್ಥಳ) ಅವುಗಳ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಗಮನ ಹರಿಸದೇ ಇರುವುದು ದಿನ ನಿತ್ಯ ಪ್ರಯಾಣಿಕರ ಜೀವಕ್ಕೆ ಕುತ್ತುಂಟು ಮಾಡುತ್ತಿವೆ.

ಸುಪ್ರೀಂ ಕೋರ್ಟ್‌ ಸಹ ಇಂತಹ ಅವೈಜ್ಞಾನಿಕ ರಸ್ತೆ ತಡೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿಲ್ಲ.

ಅವೈಜ್ಞಾನಿಕ ರೋಡ್‌ ಹಮ್ಸ್‌, ರೋಡ್‌ ಬ್ರೇಕರ್‌ಗಳಿಂದಾಗಿ ಸಾಕಷ್ಟು ಜನ ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಬೈಕ್‌ ಸವಾರರು ಕೈಕಾಲು ಮುರಿದುಕೊಂಡಿರುವ, ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಇವೆ. ಇವುಗಳ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌.

ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳಿಗಿಲ್ಲ ಬ್ರೆಕ್ ‌

ಚಡಚಣ: ತಾಲ್ಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಿಗಿಂತ ರಾಜ್ಯ ಹೆದ್ದಾರಿಗಳು ಹಾಗೂ ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಹದಗೆಟ್ಟ ರಸ್ತೆಗಳ ಮಧ್ಯೆ ಈ ಸ್ಪೀಡ್‌ ಬ್ರೆಕರ್‌ಗಳ ಕಾಟ ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ.

ರಸ್ತೆ ಪಕ್ಕದಲ್ಲಿರುವ ಅಡವಿ ವಸತಿ ಮನೆಗಳ ಮಾಲಿಕರು ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ತೀವ್ರ ಒತ್ತಡ ಹೇರಿ ಇವುಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಕೆಲವು ರಸ್ತೆಗಳಲ್ಲಿ ಅದೆಷ್ಟು ಸ್ಪೀಡ್‌ಬ್ರೇಕರ್‌ಗಳಿವೆ ಎಂದರೆ ಕಿ.ಮೀ ಒಂದರಂತೆ ನಿರ್ಮಿಸಲಾಗಿವೆ. ಇದಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಹೆದ್ದಾರಿ 50 ರ ಏಳಗಿ ಗ್ರಾಮದಿಂದ ಹಲಸಂಗಿ ಗ್ರಾಮದ ಶ್ರೀ ಅರವಿಂದ ಆಶ್ರಮದ ವರೆಗಿನ 3 ಕಿ. ಮೀ. ರಸ್ತೆಯಲ್ಲಿ 15 ಕಡೆಗಳಲ್ಲಿ ವೇಗ ನಿಯಂತ್ರಕಗಳನ್ನು ಹಾಕಲಾಗಿದೆ.

ಸಿಂದಗಿಯಲ್ಲಿ ಕಂಡಕಂಡಲ್ಲಿ ಸ್ಪೀಡ್ ಬ್ರೇಕರ್ !

ಸಿಂದಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ವಿಜಯಪುರ-ಕಲಬುರ್ಗಿ ಮುಖ್ಯರಸ್ತೆಯಲ್ಲಿ ಪಾರ್ಕಿಂಗ್‌ಗೆ ಹಾಕಲಾಗುವ ಗಟ್ಟುಗಳನ್ನು ಹಾಕಿ ಸ್ಪೀಡ್ ಬ್ರೇಕರ್ ನಿರ್ಮಿಸಲಾಗಿದೆ. ಇದರ ಸ್ವಲ್ಪ ದೂರದಲ್ಲಿ ಮಿನಿವಿಧಾನಸೌಧ ಬಳಿ ಮುಖ್ಯರಸ್ತೆಯಲ್ಲಿಯೇ ಡಾಂಬರಿನಲ್ಲಿ ಎತ್ತರದ ಸ್ಪೀಡ್ ಬ್ರೇಕರ್ ಹಾಕಿದ್ದಾರೆ. ಆದರೆ, ಅದು ಹಗಲು ಹೊತ್ತಿನಲ್ಲಿಯೇ ಕಾಣಿಸುವುದಿಲ್ಲ. ಇನ್ನು ರಾತ್ರಿ ಬಹಳ ಅಪಾಯಕಾರಿಯಾಗಿದೆ. ಇಲ್ಲಿರುವ ಇದ್ದೂ ಇಲ್ಲದಂತಿರುವ ಬೀದಿದೀಪಗಳ ಬೆಳಕೆ ರಸ್ತೆಯಲ್ಲಿ ಕಾಣಿಸುವದಿಲ್ಲ. ಹೀಗಾಗಿ ಸಾಕಷ್ಟು ಬಾರಿ ಬೈಕ್ ಸವಾರರು ಒಳಗೊಂಡಂತೆ ಬಹುತೇಕ ಜನರಿಗೆ ಇದರ ಅಪಾಯದ ಅನುಭವ ಆಗಿದೆ.

ಸ್ಪೀಡ್ ಬ್ರೇಕರ್‌ಗಳಿಗೆ ಬಿಳಿ ಬಣ್ಣ ಕೂಡ ಹಚ್ಚಿಲ್ಲ. ಇದರಂತೆ ಪಟ್ಟಣದ ಕಲ್ಯಾಣನಗರ ಒಳಗೊಂಡಂತೆ ವಿವಿಧ ಕಡೆ ನಿರ್ಮಿಸಿದ ಸಿ.ಸಿ ರಸ್ತೆಗಳಲ್ಲಿ ಮನೆ, ಮನೆ ಎದುರು ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕಲಾಗಿದೆ. ಎಲ್ಲ ಸ್ಪೀಡ್ ಬ್ರೇಕರ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಕೆಡಿಪಿ ಸದಸ್ಯ ಶಿವಾನಂದ ಆಲಮೇಲ ಒತ್ತಾಯಿಸಿದ್ದಾರೆ.

ಹೆದ್ದಾರಿಯಲ್ಲಿ ಲೆಕ್ಕವಿಲ್ಲದಷ್ಟು ರಸ್ತೆ ಉಬ್ಬುಗಳು

ಬಬಲೇಶ್ವರ: ತಾಲ್ಲೂಕಿನಲ್ಲಿ ಹಾದುಹೋಗಿರುವ ವಿಜಯಪುರ– ಬೆಳಗಾವಿ ರಾಜ್ಯ ಹೆದ್ದಾರಿಯ ಮೇಲೆ ಲೆಕ್ಕವಿಲ್ಲದಷ್ಟು ರೋಡ್ ಬ್ರೇಕರ್‌ಗಳನ್ನು ಹಾಕಿರುವುದರಿಂದ  ಬೈಕ್, ಕಾರು ಚಾಲಕರು ನಿತ್ಯ ತೊಂದರೆ ಅನುಭವಿಸುತ್ತಿರುವುದು ಮಾತ್ರವಲ್ಲ, ಅಪಘಾತಗಳು ಉಂಟಾಗುತ್ತಿವೆ.

ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋದಾಗ ಜಂಪ್‌ ಆಗಿ ಹಿಂಬದಿ ಸವಾರರು ಉರುಳಿಬಿದ್ದು ಕೈಕಾಲು ಮುರಿದುಕೊಂಡಿರುವ, ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ.

ಸಾರವಾಡ, ಬಬಲೇಶ್ವರ, ಯಕ್ಕುಂಡಿ, ಅರ್ಜುನಗಿ ಗ್ರಾಮಗಳಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರೋಡ್ ಬ್ರೇಕರ್‌ಗಳಿಂದಾಗಿ ನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಬಬಲೇಶ್ವರದಿಂದ ಗಲಗಲಿ ಮಾರ್ಗದಲ್ಲಿ ಯರಗಟ್ಟಿಯ ಮುಖ್ಯ ರಸ್ತೆಯಲ್ಲಿ ಇರುವ ಅವೈಜ್ಞಾನಿಕ ರಸ್ತೆ ಉಬ್ಬುಗಳು ಇವೆ. ಇವುಗಳನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಡಾ.ಪ್ರಕಾಶ್ ಗುಣದಾಳ, ಕಾಳಪ್ಪ ಬಡಿಗೇರ ಆಗ್ರಹಿಸಿದ್ದಾರೆ.

ರೋಡ್‌ ಬ್ರೇಕರ್‌ಗಳ ಹಾವಳಿ...

ಮುದ್ದೇಬಿಹಾಳ: ತಾಲ್ಲೂಕಿನ ಬಹುತೇಕ ಕಡೆ ಅವೈಜ್ಞಾನಿಕ ರಸ್ತೆ ತಡೆ ನಿರ್ಮಿಸಲಾಗಿದೆ.‌ ಸ್ಥಳೀಯ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಅವರು ಹೇಳಿದಲ್ಲಿ ರಸ್ತೆ ತಡೆಗಳನ್ನು ನಿರ್ಮಿಸಿ, ತಮ್ಮ ಪಾಲಿನ ಬಿಲ್ ಎತ್ತಿಕೊಂಡು ಹೋಗುವ ಪರಿಪಾಠ ಬೆಳೆದಿದೆ.

ತಾಲ್ಲೂಕಿನಲ್ಲಿ ಹಾಯ್ದು ಹೋಗಿರುವ ಹುನಗುಂದ-ತಾಳಿಕೋಟಿ ರಾಜ್ಯ ಹೆದ್ದಾರಿಯಲ್ಲಿ ನೇಬಗೇರಿ, ಕುಂಟೋಜಿ, ದೇವರ ಹುಲಗಬಾಳ ಹತ್ತಿರ ದೊಡ್ಡ ದೊಡ್ಡ ಅವೈಜ್ಞಾನಿಕ ರೋಡ್ ಬ್ರೇಕರ್‌ಗಳನ್ನು ನಿರ್ಮಿಸಲಾಗಿದೆ ಎಂದು ನಿವೃತ್ತ ಸೈನಿಕ ಸೋಮಶೇಖರ ಚೀರಲದಿನ್ನಿ ಆರೋಪಿಸಿದರು.

ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಭೇಟಿ ನೀಡುತ್ತಾರೆ ಎಂದಾಗ ಈ ರಸ್ತೆಯಲ್ಲಿ ಬರುವ ರೋಡ್ ಬ್ರೇಕರ್‌ ತೆರವುಗೊಳಿಸಿದ್ದರು. ಹೀಗಾಗಿ ತುಂಬಾ ಅಪಾಯಕಾರಿ ಆಗಿದ್ದ ಗೆದ್ದಲಮಾರಿ, ನಾಗರಬೆಟ್ಟ, ಹಿರೇಮುರಾಳದ ರೋಡ್ ಬ್ರೇಕರ್‌ ತೆರವುಗೊಳಿಸಲಾಗಿತ್ತು. ಈಗಲೂ ಜನರೇ ಇಲ್ಲದ, ಶಾಲೆಗಳೂ ಇಲ್ಲದ ಸ್ಥಳವಾಗಿರುವ ಆಲಮಟ್ಟಿ ರಸ್ತೆಯಲ್ಲಿ ಬರುವ ಗೆದ್ದಲಮಾರಿ ಕೆರೆಗೆ ಹೋಗುವಲ್ಲಿ, ಕೋಳೂರ ತಾಂಡಾದಲ್ಲಿ ಸೀತಿಮನಿ ಅವರ ಮನೆಯ ಹತ್ತಿರ ಎರಡು ಕಡೆ ರೋಡ್ ಬ್ರೇಕರ್‌ ವಾಹನ ಚಾಲಕರಿಗೆ ಬಹಳಷ್ಟು ತೊಂದರೆ ನೀಡುತ್ತಿವೆ. ಕುಂಟೋಜಿ ಗ್ರಾಮದಲ್ಲಿ ಬಹಳ ದೊಡ್ಡದಾದ ಅವೈಜ್ಞಾನಿಕ ರೋಡ್ ಬ್ರೇಕರ್‌ಗಳನ್ನು ಎರಡು ಕಡೆ ಸಿಮೆಂಟ್ ಬಳಸಿ ನಿರ್ಮಿಸಲಾಗಿದೆ. ಇದು ರಾಜ್ಯ ಹೆದ್ದಾರಿಯಾಗಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

*****

ವಿಜಯಪುರ ಜಿಲ್ಲೆಯಾದ್ಯಂತ ಮುಖ್ಯ ರಸ್ತೆಗಳಲ್ಲಿ ಇರುವ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಗುರುತಿಸಿ, ಅವುಗಳ ತೆರವಿಗೆ ಕ್ರಮಕೈಗೊಳ್ಳಲು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶೀಘ್ರ ತಂಡ ರಚನೆ ಮಾಡಲಾಗುವುದು
–ಎಚ್‌.ಡಿ.ಆನಂದ ಕುಮಾರ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

*****

ನಾವೆಷ್ಟೇ ಬೇಡವೆಂದರೂ ಸ್ಥಳೀಯ ಗ್ರಾಮಸ್ಥರು ಗುತ್ತಿಗೆದಾರರ ಜೊತೆ ಜಗಳ ಮಾಡಿ ರೋಡ್ ಬ್ರೆಕ್ ಹಾಕಿಸಿಕೊಳ್ಳುತ್ತಾರೆ. ನಾವು ಕೆಲಸ ಮಾಡಲು ಬಿಡುವುದಿಲ್ಲ
–ಅಶೋಕ ಬಿರಾದಾರ,
ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಮುದ್ದೇಬಿಹಾಳ.

*****

ಸ್ಪೀಡ್ ಬ್ರೇಕರ್ ಮೇಲೆ ವೇಗವಾಗಿ ವಾಹನ ಚಾಲನೆ ಮಾಡಿದರೆ ಕೆಲವೇ ದಿನಗಳಲ್ಲಿ ಬೆನ್ನು ನೋವು, ಸ್ನಾಯು ಸೆಳೆತ ಹಾಗೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು, ಅವುಗಳ ಚಿಕಿತ್ಸೆ ದೀರ್ಘಕಾಲಿನದಾಗಿರುತ್ತದೆ
ಡಾ.ಜಾನ್‌ ಕಠವಠೆ, ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಚಡಚಣ

*****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಅಲ್ಲಮಪ್ರಭು ಕರ್ಜಗಿ, ಶಾಂತೂ ಹಿರೇಮಠ, ಮಹಾಬಲೇಶ್ವರ ಗಡೇದ, ಎ.ಸಿ.ಪಾಟೀಲ, ನಾಗಪ್ಪ ಹೊಳೆಯಪ್ಪಗೋಳ, ಶರಣ ಬಸಪ್ಪ ಗಡೇದ.

*****

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು