ವಿಜಯಪುರ: ಗದುಗಿನ ದಲಿತ ಸಾಹಿತ್ಯ ಪರಿಷತ್, ಸಾಹಿತಿ ಪ್ರೊ.ಎಚ್.ಟಿ.ಪೋತೆ ಅವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ‘ಪ್ರಬುದ್ಧ ಭಾರತ’ ಮತ್ತು ‘ಬುದ್ಧ ಭಾರತ’ ನಿರ್ಮಾಣದ ಆಶಯದೊಂದಿಗೆ ಭಾನುವಾರ ತೆರೆಕಂಡಿತು.
ದಲಿತ ಸಾಹಿತ್ಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದು ಸೇರಿದಂತೆ ಐದು ಪ್ರಮುಖ ನಿರ್ಣಯಗಳನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೈಗೊಳ್ಳಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು, ನವ ಬೌದ್ಧರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು, ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮನುಷ್ಯರ ಬದಲು ಕಡ್ಡಾಯವಾಗಿ ಯಂತ್ರೋಪಕರಣ ಬಳಸಬೇಕು ಹಾಗೂ ದಲಿತ ಸಾಹಿತ್ಯ ಪರಿಷತ್ತಿಗೆ ಶಾಶ್ವತ ಅನುದಾನ ನೀಡಬೇಕು ಎಂಬ ನಿರ್ಣಯಗಳನ್ನು ಕೈಗೊಂಡಿದ್ದು, ರಾಜ್ಯ ಸರ್ಕಾರ ಆದಷ್ಟು ಬೇಗ ಈ ಹಕ್ಕೊತ್ತಾಯಗಳಿಗೆ ಸ್ಪಂದಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ತಿಳಿಸಿದರು.
ಪ್ರಶಸ್ತಿ ಪ್ರದಾನ:
ಲೇಖಕರಿಗೆ ಪುಸ್ತಕ ಪ್ರಶಸ್ತಿ, ಸಾಧಕರಿಗೆ ಬೆಳ್ಳಿ ಸಂಭ್ರಮ ಪ್ರಶಸ್ತಿ ಹಾಗೂ ದಲಿತ ಸಾಹಿತ್ಯ ಪರಿಷತ್ ಅತ್ತುತ್ತಮ ಸಂಘಟಕ ಸಾಧಕಶ್ರೀ ಪ್ರಶಸ್ತಿಯನ್ನು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಪ್ರದಾನ ಮಾಡಿದರು.
ದಲಿತ ಸಾಹಿತ್ಯ ಜಗತ್ತಿನ ಇತರೆ ಭಾಷೆಗಳಿಗೆ ಹೆಚ್ಚೆಚ್ಚು ಭಾಷಾಂತರವಾಗಬೇಕಿದೆ. ದಲಿತ ಸಾಹಿತ್ಯ ಹೇಗಿದೆಯೋ ಹಾಗೇ ಅನ್ಯ ಭಾಷೆಗಳಿಗೆ ಅನುವಾದ ಮಾಡಲು ಅನ್ಯರಿಗಿಂತ ದಲಿತ ಭಾಷಾಂತರಕಾರರೇ ಹೆಚ್ಚು ಸೂಕ್ತ. ಆಗ ಮಾತ್ರ ಯಥಾಪ್ರಕಾರ ಅನುವಾದ ಸಾಧ್ಯ ಎಂದು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ದಲಿತ ಬರಹಗಾರರಿಗೆ ಅಳವಾದ ಮತ್ತು ವಿಸ್ತಾರವಾದ ಅಧ್ಯಯನ ಅಗತ್ಯ ಇದೆ. ದಲಿತ ಬರಹಗಾರರು, ಲೇಖಕರು ಅಧ್ಯಯನ, ಸಂಶೋಧನೆಯಲ್ಲಿ ಹೆಚ್ಚೆಚ್ಚು ತೊಡಗಿದಾಗ ಹೆಚ್ಚೆಚ್ಚು ಬರೆಯಬಹುದು, ದಲಿತರು ವಿಶ್ವ ಸಾಹಿತ್ಯ ಓದಿ, ವಿಶ್ವ ಸಾಹಿತ್ಯ ರಚಿಸುವಂತಾಗಬೇಕು ಎಂದರು.