ಭಾನುವಾರ, ಸೆಪ್ಟೆಂಬರ್ 19, 2021
31 °C
ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯಿಂದ ಪ್ರತಿಭಟನೆ

ವಿಜಯಪುರ: ಕೆಪಿಎಸ್‌ಸಿ ಅಧ್ಯಕ್ಷರ ವಜಾಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೆ.ಪಿ.ಎಸ್.ಸಿ. ಅಧ್ಯಕ್ಷರನ್ನು ವಜಾಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಮಿತಿಯ ರಾಜ್ಯ ಘಟಕದ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುವುದನ್ನು ತಪ್ಪಿಸಬೇಕು. ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಕೆಪಿಎಸ್‍ಸಿ ಅಧ್ಯಕ್ಷರ ನೇಮಕಾತಿಯಲ್ಲೇ ನಿಯಮ ಉಲ್ಲಂಘನೆ ಆಗಿರುವುದು ಕೆಪಿಎಸ್‍ಸಿ ಬಗ್ಗೆ ಇದ್ದ ಅಲ್ಪಸ್ವಲ್ಪ ನಂಬಿಕೆಯು ಕುಸಿದುಹೋಗಿದೆ. ಈ ರೀತಿ ನಿಯಮ ಉಲ್ಲಂಘನೆ ಮಾಡಿ ನೇಮಿಸಿರುವುದು ಮತ್ತಷ್ಟು ಅಕ್ರಮಗಳು ನಡೆಯಲು ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.

ಈಗಾಗಲೇ 2011ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕದಲ್ಲಿ ಆಗಿರುವ ಅಕ್ರಮ, ಎಫ್.ಡಿ.ಸಿ ಮತ್ತು ಎಸ್.ಡಿ.ಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆ, ಒಂದೇ ಪರೀಕ್ಷಾ ಕೇಂದ್ರದ 70 ಅಭ್ಯರ್ಥಿಗಳ ಆಯ್ಕೆ  ಮುಂತಾದ ಅಕ್ರಮಗಳಿಂದಾಗಿ ಕೆಪಿಎಸ್‍ಸಿ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ. ಈಗ ಇದೂ ಒಂದು ಸೇರಿಕೊಂಡಿದೆ. ಇದರ ಪರಿಣಾಮವನ್ನು ನಿರುದ್ಯೋಗಿ ಯುವಜನರು ಅನುಭವಿಸಬೇಕಾಗಿದೆ ಎಂದರು.

ಉದ್ಯೋಗಾಕಾಂಕ್ಷಿಗಳಾದ ಸೋಮು ಮಡ್ಡಿ ಮಾತನಾಡಿ, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಗಲು ರಾತ್ರಿ ಅಧ್ಯಯನ ನಡೆಸಿ, ತರಬೇತಿ ಪಡೆದು ಉದ್ಯೋಗ ಪಡೆಯಲು ಹರಸಾಹಸ ಪಡುತ್ತಾರೆ ಎಂದರು.

ಸರ್ಕಾರ ಕೂಡಲೇ ಕ್ರಮಕೈಗೊಂಡು ಹಾಲಿ ಅಧ್ಯಕ್ಷರ ಮೇಲಿನ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಸಾಬೀತಾದರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಕೆಪಿಎಸ್‍ಸಿಯಲ್ಲಿನ ಎಲ್ಲ ರೀತಿಯ ಅಕ್ರಮಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಪ್ರಮುಖರಾದ ಶೋಭಾ, ಶರಣಗೌಡ ಬಾಡಗಿ, ರವಿ ಬಿರಾದಾರ, ರವಿ ಹೊಸಮನಿ, ಆದಿತ್ಯ ಬಿರಾದಾರ, ಶೃತಿ, ಲಾಯಪ್ಪ ಸುಣಗಾರ ಮತ್ತಿತರರು ಹೋರಾಟದಲ್ಲಿ ಭಾಗವಹಿಸಿದ್ದರು.

* ಕೆಪಿಎಸ್‍ಸಿಯಲ್ಲಿನ ಅಕ್ರಮಗಳಿಂದಾಗಿ ಪ್ರಾಮಾಣಿಕರು ಮತ್ತು ಪ್ರತಿಭಾವಂತರು ನೇಮಕಾತಿಯಿಂದ ವಂಚಿತರಾಗುತ್ತಾರೆ 

-ಶ್ರೀಕಾಂತ ಕೊಂಡಗೂಳಿ, ನಿರುದ್ಯೋಗಿ ಯುವಜನರ ಹೋರಾಟ ಸಮಿತಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು