ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ: ಹೊಸ ಮಾದರಿ ಮಡಕೆಗೆ ಬಾರಿ ಬೇಡಿಕೆ

ಹೆಚ್ಚುತ್ತಿರುವ ಬಿಸಿಲು; ನೀರು ತಂಪಿಗೆ ಮಡಕೆ ಮೊರೆ
Last Updated 14 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ತಿಕೋಟಾ: ದಿನೆ ದಿನೆ ಹೆಚ್ಚುತ್ತಿರುವ ಬಿಸಿಲ ಧಗೆಗೆ ಜನರ ದಾಹ ನೀಗಿಸಲು ಪಟ್ಟಣಕ್ಕೆ ‘ಬಡವರ ಪ್ರೀಡ್ಜ್‌’ ಎಂದೇ ಹೆಸರಾದ ನೂತನ ಮಾದರಿಯ ಮಣ್ಣಿನ ಮಡಕೆಗಳು ಬಂದಿವೆ.

ಪಟ್ಟಣದ ಸುತ್ತಲಿನ ಗ್ರಾಮೀಣ ಭಾಗದ ಜನರು ಹಾಗೂ ಪ್ರಯಾಣಿಕರು ಮಡಕೆ ಖರೀದಿಸುತ್ತಿದ್ದಾರೆ. ಜತ್‌ ರಸ್ತೆಯಲ್ಲಿರುವ ಕುಂಬಾರ ಕುಟುಂಬಗಳು ವಿಶಿಷ್ಟ ಮಾದರಿಯ ಗಡಿಗೆ, ಹರಿಬೆಗಳು, ಮಣ್ಣಿನ ಬಾಟಲಿಗಳು, ಮಣ್ಣಿನ ಲೋಟಗಳು ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಸಾಮಾನ್ಯ ಮಾದರಿಯ ಮಡಕೆಗಳನ್ನು ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಈ ಬಾರಿ ರಾಜಸ್ಥಾನದಿಂದ ಬಣ್ಣ ಲೇಪಿತ ಹರಿವೆ ಹಾಗೂ ನೀರಿನ ಬಾಟಲಿಗಳನ್ನು ತಂದಿದ್ದಾರೆ. ಈ ಹರಿವೆಗಳಿಗೆ ನಳ ಅಳವಡಿಕೆ ಮಾಡಿದ್ದು, ನೀರನ್ನು ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ.

ಬೇಸಿಗೆಯಲ್ಲಿ ತಂಪಾದ ನೀರಿನ ಸಂಗ್ರಹಕ್ಕೆ ನೈಸರ್ಗಿಕ ಪರಿಹಾರವಾದ ಮಡಕೆ ಬಳಸಲು ಜನ ಆಸಕ್ತಿ ತೋರುತ್ತಿದ್ದಾರೆ. ಜೀವನ ಶೈಲಿಗೆ ತಕ್ಕಂತೆ ಮಡಕೆಗಳ ವಿನ್ಯಾಸ ಕೂಡಾ ಬದಲಾವಣೆಯಾಗಿದ್ದು, ನೋಡಲು ಆಕರ್ಷಣೆಯವಾಗಿ ಕಾಣುತ್ತಿವೆ. ಮೇಲ್ಭಾಗದಲ್ಲಿ ಮುಚ್ಚಳವಿದ್ದು, ದರಕ್ಕೆ ಅನುಗುಣವಾಗಿ ಗಾತ್ರಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿರುವ ಜನ ನೈಸರ್ಗಿಕ ಪರಿಹಾರಕ್ಕಾಗಿಯೂ ಮಡಕೆ ಮೊರೆ ಹೋಗುವದು ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆ.

ಕೊರೊನಾ ಸಂದರ್ಭಗಳಲ್ಲಿ ವ್ಯಾಪಾರ ಕುಂಠಿತವಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಈ ಕುಟುಂಬಗಳು ಈ ಬಾರಿ ಹೆಚ್ಚಿನ ಆದಾಯದ ನೀರಿಕ್ಷೆಯಲ್ಲಿ ಇದ್ದಾರೆ. ಸದ್ಯ ಬೀಸಿಲ ಧಗೆ ಹೆಚ್ಚುತ್ತಾ ಸಾಗಿ, ವ್ಯಾಪಾರ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ವರ್ಷ ವ್ಯಾಪಾರ ಕುಂಠಿತವಾಗಿದ್ದು ಈ ವರ್ಷ ಹೆಚ್ಚಿನ ಆದಾಯ‌ ಬಂದರೆ ನಷ್ಟ ಸರಿದೂಗಿಸಬಹುದು ಎಂದು ಸಾವಿತ್ರಿ ಬಸವರಾಜ ಕುಂಬಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬೇಸಿಗೆಯಲ್ಲಿ ಮಣ್ಣಿನ ಮಡಕೆ ವ್ಯಾಪಾರ ಇದ್ದು, ಉಳಿದಿರುವ ದಿನಗಳಲ್ಲಿ ಮಣ್ಣಿನಿಂದ ಮಾಡಿದ ಒಲೆ, ತವಾ, ಭರಣಿ, ಕಡಾಯಿ, ಕುಳ್ಳಿಗಳನ್ನು ಮಾರಾಟ ಮಾಡುತ್ತೇವೆ ಎಂದು ನಂದು, ಶಿವಪ್ಪ, ಪಾರ್ವತಿ, ಮಹಾದೇವ, ಸುರೇಶ, ಪರಮಾನಂದ ತಿಳಿಸಿದರು.

ಬೇಸಿಗೆ ಬಂದ ಕೂಡಲೆ ಆರೋಗ್ಯ ಸರಿದೂಗಿಸಿಕೊಳ್ಳಲು ಹಾಗೂ ಧಗೆ ನಿವಾರಣೆಗೆ ಮಣ್ಣಿನ ಮಡಕೆಗಳನ್ನೇ ಉಪಯೋಗಿಸುತ್ತೇವೆ ಎಂದು ಮುಚ್ಚಂಡಿ ಗ್ರಾಮಸ್ಥ ಸದಾಶಿವ ಹೇಳಿದರು.

***

ಹಿರಿಯರು ಮೊದಲು ಇಲ್ಲಿಯೇ ಮಣ್ಣಿನ ಮಡಕೆ ತಯಾರಿಸುತ್ತಿದ್ದರು. ನಾವು ಈಗ ತಯಾರಿಸಲ್ಲ, ಅಧುನಿಕತೆಗೆ ತಕ್ಕಂತೆ ಬೇರೆ ರಾಜ್ಯಗಳಿಂದ ವಿಭಿನ್ನ ಮಾದರಿಯ ಮಡಕೆ ತಂದು ಮಾರಾಟ ಮಾಡುತ್ತಿದ್ದೇವೆ.
-ಚಿದಾನಂದ ಸಿದ್ದಪ್ಪ ಕುಂಬಾರ, ಮಡಕೆ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT