ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ದರೋಡೆಕೋರರ ಬಂಧನ; ₹ 8.35 ಲಕ್ಷ ವಶ

ಕಡಿಮೆ ಬೆಲೆಗೆ ಬಂಗಾರ ಮಾರಾಟ ಮಾಡುವುದಾಗಿ ನಂಬಿಸಿ ದಂಪತಿಗೆ ಮೋಸ
Last Updated 17 ಜೂನ್ 2020, 14:17 IST
ಅಕ್ಷರ ಗಾತ್ರ

ವಿಜಯಪುರ: ಬಂಗಾರವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಮಹಾರಾಷ್ಟ್ರ ಮೂಲದ ದಂಪತಿಯಿಂದ ₹ 9.89 ಲಕ್ಷ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದರೋಡೆಕೋರರಾದ ಹಿರೇಬೇವನೂರಿನ ಸಾಯಬಣ್ಣ ಹರಣಶಿಕಾರಿ (42), ಪರಮಾನಂದ ಹರಣಶಿಕಾರಿ(23) ಮತ್ತು ಕಿಟ್ಟ್ಯಾ ಹರಣಶಿಕಾರಿಯನ್ನು ಬಂಧಿಸಿ ಅವರಿಂದ ₹ 8.35 ಲಕ್ಷವನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌ ತಿಳಿಸಿದ್ದಾರೆ.

ಪ್ರಕರಣದ ವಿವರ: ಸದ್ಯ ಹೈದರಾಬಾದ್‌ನಲ್ಲಿ ನೆಲೆಸಿರುವ, ಮಹಾರಾಷ್ಟ್ರ ರಾಜ್ಯದ ತುರೋಲಿ ಗ್ರಾಮದ ಸುನೀಲ ಜಾಧವ ಮತ್ತು ರಾಜಶ್ರೀ ದಂಪತಿಗೆ ಆಲಮೇಲ ತಾಲ್ಲೂಕಿನ ದೇವಣಗಾಂವದ ಬಾಗಮ್ಮ ಎಂಬಾಕೆ ತನ್ನ ಬಳಿ ಏಳೆಂಟು ಕೆ.ಜಿ.ಬಂಗಾರವಿದ್ದು, ಕಡಿಮೆ ಬೆಲೆಗೆ ಕೊಡುವುದಾಗಿ ಮೊಬೈಲ್‌ ಫೋನ್‌ ಮೂಲಕ ಕರೆ ಮಾಡಿ ನಂಬಿಸಿದ್ದಳು.

ಮಹಿಳೆಯ ಮಾತನ್ನು ನಂಬಿದ ದಂಪತಿ ಜೂನ್‌ 12 ರಂದು ಹೈದರಾಬಾದ್‌ನಿಂದ ಬಾಡಿಗೆ ಕಾರಿನಲ್ಲಿ ಜಿಲ್ಲೆಗೆ ಬಂದಿದ್ದಾರೆ. ಆಲಮೇಲ ಸಮೀಪದ ಕರಬತ್ತಳ್ಳಿ ಸಮೀಪ ದಂಪತಿಯನ್ನು ಅಡ್ಡಗಟ್ಟಿದ 10 ರಿಂದ 12 ಜನ ದರೋಡೆಕೋರರು ಹಿಗ್ಗಾಮುಗ್ಗಾ ಥಳಿಸಿ, ಅವರ ಬಳಿ ಇದ್ದ ₹ 9 ಲಕ್ಷ ನಗದು ಹಾಗೂ ರಾಜಶ್ರೀ ಅವರ ಸುಮಾರು ₹ 80 ಸಾವಿರ ಮೌಲ್ಯದ ಒಡವೆಯನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ, ಅವರ ಬಳಿ ಇದ್ದ ಮೊಬೈಲ್‌ ಮತ್ತು ಕಾರಿನ ಚಾಲಕ ಶ್ರೀನಿವಾಸ ಬಳಿ ಇದ್ದ ಎರಡು ಮೊಬೈಲ್‌ ಸೇರಿದಂತೆ ಒಟ್ಟು ₹ 9.89 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಎಲ್. ಅರಸಿದ್ದಿ ನೇತೃತ್ವದಲ್ಲಿ ಡಿವೈಎಸ್‌ಪಿ ಎಂ.ಬಿ.ಸಂಕದ, ಸಿಂದಗಿ ಸಿಪಿಐ ಸತೀಶಕುಮಾರ ಎಸ್‌.ಕಾಂಬಳೆ, ಚಡಚಣ ಸಿಪಿಐ ಚಿದಂಬರ, ಇಂಡಿ ಸಿಪಿಐ ಆರ್‌.ಎಸ್‌.ಬಡದೇಸಾರ, ಇಂಡಿ ಗ್ರಾಮೀಣ ಪಿಎಸ್ಐ ಎಸ್‌.ಎನ್.ಶಿರಗುಪ್ಪಿ, ಆಲಮೇಲ ಪಿಎಸ್‌ಐ ಎನ್‌.ಎಚ್.ಪೂಜೇರಿ, ಹೊರ್ತಿ ಪಿಎಸ್‌ಐ ಎಂ.ಬಿ.ಬಿರಾದಾರ ಮತ್ತು ಸಿಬ್ಬಂದಿ ಒಳಗೊಂಡ ತನಿಖಾ ತಂಡ ಹಿರೇಬೇವನೂರ ಗ್ರಾಮದ ಹತ್ತಿರ ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಇನ್ನೂ ಆರು ಜನ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಎಸ್‌.ಪಿ ಅನುಮಪ್‌ ಅಗರವಾಲ್‌ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT