ಇಂಡಿ: 'ಹಿರಿಯ ರಾಜಕಾರಣಿ, ಜಿಲ್ಲೆಯ ಅಭಿವೃದ್ಧಿಯ ಹರಿಕಾರ ರಮೇಶ ಜಿಗಜಿಣಗಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನತೆಗೆ ಗೊತ್ತಾಗಬಾರದು ಎಂಬ ದುರುದ್ದೇಶದಿಂದ ಇಂಡಿ ಶಾಸಕರು ಜಿಗಜಿಣಗಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ನಾದ (ಕೆಡಿ) ಗ್ರಾಮದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನಾ ಸಮಾರಂದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಂಸದ ರಮೇಶ ಜಿಗಜಿಣಗಿ ಅವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ. 40 ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದೆ, ವೈಷಮ್ಯ ಇಲ್ಲದೆ ಅಜಾತ ಶತ್ರು ಆಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳು ತಂದಿದ್ದಾರೆ. ಇಂತಹವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ’ ಎಂದರು.
‘ಹಿರಿಯರನ್ನು ಗೌರವಿಸುವ ಗುಣ ನಿಮ್ಮಲ್ಲಿ ಇರದಿದ್ದರೆ ಸಿದ್ಧೇಶ್ವರ ಶ್ರೀ ಹೆಸರು ಪದೇ ಪದೇ ರಾಜಕಾರಣದಲ್ಲಿ ಬೆರೆಸುವುದು ಸರಿಯಲ್ಲ. ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿ ಅವರನ್ನು ಅಗೌರವವಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿಯಲ್ಲಿ ರಾಜ್ಯದಲ್ಲಿನ ಹೆದ್ದಾರಿಗಳಿಗೆ ಸಾಮೂಹಿಕ ಚಾಲನೆ ನೀಡಿದ್ದಾರೆ. ಆದರೆ ಇಂಡಿಯಲ್ಲಿ ನಡೆದಿದ್ದು ಭೂಮಿ ಪೂಜೆ. ಇದನ್ನು ಶಾಸಕರು ತಿಳಿದುಕೊಳ್ಳಬೇಕು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರ ಕಾಲದಲ್ಲಿ ಮಂಜೂರು ಮಾಡಿದ ಅನೇಕ ಕಾಮಗಾರಿಗಳಿಗೆ ನೀವು ಶಾಸಕರಾದ ಮೇಲೆ ಭೂಮಿ ಪೂಜೆ ಮಾಡಿದ್ದೀರಿ ಒಮ್ಮೆಯೂ ಅವರ ಹೆಸರು ಹೇಳಿಲ್ಲ’ಎಂದು ಹೇಳಿದರು.
ಭೂಮಿ ಪೂಜೆಗೆ ಶಿಷ್ಟಾಚಾರ ಪಾಲಿಸಿಲ್ಲ ಎಂದು ಅಪಾದನೆ ಮಾಡಿರುವುದು ಸರಿಯಲ್ಲ. ಎನ್.ಟಿ.ಪಿ.ಸಿ ಸುಶೀಲಕುಮಾರ ಸಿಂಧೆಯವರಿಂದ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್ ಸರ್ಕಾರದ ಅಂದಿನ ಪ್ರಧಾನ ಮಂತ್ರಿ ಮನಮೋಹನಸಿಂಗ್ ಅವರಿಂದ ಆಗಿದೆ ಎಂದು ಸಂಸದರು ಸತ್ಯ ಹೇಳಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿಗೆ ಸಾವಿರಾರು ಕೋಟಿ ಅನುದಾನ ತಂದಿರುವುದು ನಿಮ್ಮ ಹೊಟ್ಟೆ ಉರಿಯಿಂದ ಮಾತನಾಡುತ್ತಿದ್ದೀರಿ. ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ಮುಂದಿನ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಅಧಿಕಾರ ಕಾಂಗ್ರೆಸ್ ಎಂದಿರುವುದು ಹಾಸ್ಯಾಸ್ಪದ. ಜನರ ತೀರ್ಮಾನ ಮುಖ್ಯ. ಪುರಸಭೆ ಚುನಾವಣೆಯಲ್ಲಿ ಹಣ, ಇತರೆ ಆಮಿಷಗಳನ್ನು ಒಡ್ಡಿ ಅಧಿಕಾರ ಪಡೆದಿದ್ದೀರಿ’ ಎಂದು ಆರೋಪಿಸಿದರು.
‘ಈ ಹಿಂದೆ ಬಿಜೆಪಿ ಎರಡು ಬಾರಿ ಪುರಸಭೆಯ ಗದ್ದುಗೆ ಹಿಡಿದ ಉದಾಹರಣೆಗಳಿವೆ, ನೀವು ಮರೆತಿರಬೇಕು. ಎಲ್ಲವೂ ನಾನೇ ಮಾಡಿರುವೆ ಎಂದು ಹೇಳುತ್ತಿರುವುದು ಖೇದಕರ ಸಂಗತಿ. ಸಂಸದ ರಮೇಶ ಜಿಗಜಿಣಗಿಯವರು ಜಿಲ್ಲೆಯಲ್ಲಿ ಹಿರಿಯರು ಇವರ ಬಗ್ಗೆ ನಿಮಗೆ ಗೌರವ ಇರಲಿ’ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಹಣಮಂತರಾಯಗೌಡ ಪಾಟೀಲ, ಅನೀಲ ಜಮಾದಾರ, ದೇವೆಂದ್ರ ಕುಂಬಾರ, ಮಹಾದೇವ ರಜಪೂತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.