ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಂಸ್ಕೃತಿ ಅನಾವರಣಕ್ಕೆ ವಿಧ್ಯುಕ್ತ ಚಾಲನೆ

ವಿಜಯಪುರದ ಸೈನಿಕ ಶಾಲೆಯಲ್ಲಿ ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ಅಭಿಯಾನ
Last Updated 29 ಜನವರಿ 2019, 14:32 IST
ಅಕ್ಷರ ಗಾತ್ರ

ವಿಜಯಪುರ:ಸೈನಿಕ ಶಾಲೆಗಳ ನೇತೃತ್ವದಲ್ಲಿ ನಡೆದ ‘ಏಕ್‌ ಭಾರತ್‌, ಶ್ರೇಷ್ಠ ಭಾರತ್’ ಅಭಿಯಾನದ ಸಮಾರೋಪ, ಇಲ್ಲಿನ ಸೈನಿಕ ಶಾಲೆಯಲ್ಲಿ ಮಂಗಳವಾರದಿಂದ ವಿಧ್ಯುಕ್ತ ಚಾಲನೆ ಪಡೆದಿದೆ.

ಮೂರು ದಿನ ‘ಕೇಂದ್ರ ಸೈನಿಕ ಶಾಲೆಗಳ ಮಹೋತ್ಸವ’ ನಡೆಯಲಿದ್ದು, ದೇಶದ ಸಂಸ್ಕೃತಿ, ಕಲೆಯ ಅನಾವರಣಕ್ಕೆ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು.

ಸೈನಿಕ ಶಾಲೆಯ ಎಸ್‌.ಆರ್‌.ಕಂಠಿ ಸಭಾಂಗಣದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿರುವ ಸೈನಿಕ ಶಾಲೆಯ ಕೆಡೆಟ್‌ಗಳು, ತಾವು ಪ್ರತಿನಿಧಿಸುವ ಆಯಾ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುವ ಮೂಲಕ ವಿವಿಧತೆಯಲ್ಲಿ ಏಕತೆ ಬಿಂಬಿಸಿದರು.

ಛತ್ತೀಸ್‌ಘಡದ ಅಂಬಿಕಾಪುರ ಸೈನಿಕ ಶಾಲೆಯ ಕೆಡೆಟ್‌ಗಳು ತಮ್ಮ ರಾಜ್ಯದ ಆದಿವಾಸಿ ನೃತ್ಯ ‘ಸಾತನಾಮಿ’ ಹಾಗೂ ‘ಕರ್ಮಾ’ ಕಲಾ ಪ್ರಕಾರ ಪ್ರದರ್ಶಿಸಿದರು. ನೃತ್ಯಕ್ಕೆ ತಕ್ಕಂತೆ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸಿದರು.

ಗುಜರಾತ್‌ ಖ್ಯಾತಿಕ ‘ದಾಂಡಿಯಾ’ ‘ಢೋಲಿರಾ...ಢೋಲರೇ...’ ಎಂಬ ಸಂಗೀತದ ಹಿಮ್ಮೇಳನದಲ್ಲಿ ಕೋಲಾಟದ ಪ್ರದರ್ಶನ ಗಮನ ಸೆಳೆಯಿತು, ಓಡಿಶಾದ ಭುವನೇಶ್ವರ ಸೈನಿಕ ಶಾಲೆಯ ವಿದ್ಯಾರ್ಥಿಗಳು ಸಂಬಪುರಿ ನೃತ್ಯ ಪ್ರದರ್ಶಿಸಿದರು.

ಆತಿಥೇಯ ವಿಜಯಪುರದ ಸೈನಿಕ ಶಾಲೆಯ ಮಕ್ಕಳು, ಈ ಭಾಗದ ಸಾಂಪ್ರದಾಯಿಕ ಉಡುಗೆ ತೊಟ್ಟು ‘ಮಾಯದಂತಹ ಮಳೆ ಬಂತಮ್ಮ...’ ಎಂಬ ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು. ’ಚನ್ನಪ್ಪ ಚನ್ನಗೌಡ... ಕುಂಬಾರ ಮಾಡಿದ ಕೊಡನವ್ವ...’ ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ‘ಏಕಲವ್ಯ’ ನಾಟಕವೂ ಪ್ರದರ್ಶನಗೊಂಡಿತು.

‘ಬಾಲ್ಯದಲ್ಲಿಯೇ ನಮ್ಮ ಸಂಸ್ಕೃತಿ ಅಳವಡಿಸಿ’

ಮಹೋತ್ಸವಕ್ಕೆ ಚಾಲನೆ ನೀಡಿದ ನಿರ್ಭಯಾನಂದ ಸ್ವಾಮೀಜಿ, ‘ಮಕ್ಕಳಿಗೆ ಬಾಲ್ಯದಲ್ಲಿಯೇ ಭಾರತೀಯ ಸಂಸ್ಕೃತಿಯ ಮನೋಭಾವವನ್ನು ಬಿತ್ತಬೇಕು. ಒಂದು ಸಸಿ ನೆಟ್ಟಗೆ ಬೆಳೆಯಲು ಕಟ್ಟಿಗೆಯೊಂದನ್ನು ಆಧಾರವಾಗಿ ಇಡುತ್ತೇವೆ, ಮರವಾಗಿ ಬೆಳೆದಾಗ ಕಟ್ಟಿಗೆ ಇಟ್ಟರೆ, ಅದು ನೆಟ್ಟಗೆ ಬೆಳೆಯಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿ ಬಾಲ್ಯದಲ್ಲಿಯೇ ಅದ್ಭುತವಾದ, ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯನ್ನು ಮಕ್ಕಳ ಮನದಲ್ಲಿ ಬಿತ್ತಬೇಕು’ ಎಂದು ಕಿವಿಮಾತು ಹೇಳಿದರು.

ಸೈನಿಕ ಶಾಲೆಯ ಪ್ರಾಚಾರ್ಯ ಕ್ಯಾಪ್ಟನ್ ವಿನಯ್ ತಿವಾರಿ, ಉಪ ಪ್ರಾಚಾರ್ಯ ರಾಜೀವ್ ಶುಕ್ಲಾ, ಸೈನಿಕ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT