ಬುಧವಾರ, ಆಗಸ್ಟ್ 4, 2021
20 °C
ಜಿಲ್ಲಾ ಪಂಚಾಯ್ತಿ ಗಾದಿ; ಕುತೂಹಲ ಮೂಡಿಸಿದ ಜೆಡಿಎಸ್‌ ನಡೆ

ವಿಜಯಪುರ ಜಿ.ಪಂ. ಅಧ್ಯಕ್ಷ ಗಾದಿ: ಕಾಂಗ್ರೆಸ್‌ನ ಒಬ್ಬರು, ಬಿಜೆಪಿಯ ಐವರು ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತೆರವಾಗಿರುವ ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಏರಲು ಕಾಂಗ್ರೆಸ್‌, ಬಿಜೆಪಿ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ.

ಪೂರ್ವ ಒಪ್ಪಂದದಂತೆ ಕಾಂಗ್ರೆಸ್‌ ಮರಳಿ ಅಧಿಕಾರ ಪಡೆಯುವ ವಿಶ್ವಾಸದಲ್ಲಿ ಇದೆ. ಸದ್ಯ ಸುಜಾತಾ ಕಳ್ಳಿಮನಿ ಒಬ್ಬರೇ ಆಕಾಂಕ್ಷಿ ಆಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಜಾತಾ ಕಳ್ಳಿಮನಿ, ಚುನಾವಣಾ ದಿನಾಂಕವನ್ನು ಎದುರು ನೋಡುತ್ತಿದ್ದೇವೆ. ನಾನು ಅಧ್ಯಕ್ಷೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಂ.ಬಿ.ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್‌ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತು ಜೆಡಿಎಸ್‌ ಬೆಂಬಲದೊಂದಿಗೆ ಕಾಂಗ್ರೆಸ್‌ ಮರಳಿ ಅಧಿಕಾರ ಪಡೆಯಲಿದೆ. ಈ ಹಿಂದೆ ಎರಡು ಬಾರಿ ಅಧ್ಯಕ್ಷ ಗಾದಿ ಬದಲಾವಣೆ ವೇಳೆ ಯಾವುದೇ ಗೊಂದಲ ಏರ್ಪಟ್ಟಿಲ್ಲ ಈಗಲೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

ಬಿಜೆಪಿ ಐವರು ಆಕಾಂಕ್ಷಿಗಳು: ಜಿಲ್ಲಾ ಪಂಚಾಯ್ತಿಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಬಿಜೆಪಿ ಹೊಂದಿದ್ದರೂ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ಏರಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಜಿಲ್ಲಾ ಪಂಚಾಯ್ತಿಯ ಚುಕ್ಕಾಣಿಯನ್ನು ಹಿಡಿಯಬೇಕು ಎಂದು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ. ಆದರೆ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿರುವುದು ಮುಖಂಡರ ತಲೆಬಿಸಿಗೆ ಕಾರಣವಾಗಿದೆ.

ಜಿಲ್ಲಾ ‍ಪಂಚಾಯ್ತಿ ಬಿಜೆಪಿ ಸದಸ್ಯರಾದ ಸಾಬು ಮಾಶ್ಯಾಳ, ಭೀಮನಗೌಡ ಬಿರಾದಾರ ಅವರು ಅಧ್ಯಕ್ಷ ಗಾದಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಉಳಿದಂತೆ ನವೀನ ಅರಕೇರಿ, ಕಲ್ಲಪ್ಪ ಮಟ್ಟಿ, ಭುವನೇಶ್ವರಿ ಬಗಲಿ ಅವರೂ ಸಹ ಆಕಾಂಕ್ಷಿಗಳಾಗಿದ್ದು, ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಜೆಡಿಎಸ್‌ ನಡೆ ಕುತೂಹಲ: ಅಧ್ಯಕ್ಷ ಸ್ಥಾನಕ್ಕೆ ಎರಡು ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿಕೊಂಡು ಬಂದಿದ್ದ ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರ ನಡೆ ಈ ಬಾರಿ ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಸಂಬಂಧಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸನಗೌಡ ವನಕ್ಯಾಳ ಅವರು ಜೆಡಿಎಸ್‌ನಿಂದ ರಾಜಕೀಯವಾಗಿ ದೂರವಾಗಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರು ಬಿಜೆಪಿ ಬೆಂಬಲಿಸುವುದರಲ್ಲಿ ಅನುಮಾನ ಇಲ್ಲ ಎಂಬುದು ಬಿಜೆಪಿ ಮುಖಂಡರ ಲೆಕ್ಕಚಾರವಾಗಿದೆ.

ಪಕ್ಷೇತರ ಸದಸ್ಯರು ಯಾರೊಂದಿಗೆ ಹೆಜ್ಜೆ ಹಾಕುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವರಿಬ್ಬರ ನಡೆ ಬಿಜೆಪಿ ಕಡೆಯಾದರೆ ಅಧಿಕಾರದ ಕನಸು ನನಸಾಗುವ ಸಾಧ್ಯತೆ ದಟ್ಟವಾಗಿದೆ.

ಪ್ರಭುಗೌಡ ಜಿ.ಪಂ.ಹಂಗಾಮಿ ಅಧ್ಯಕ್ಷ: ಶಿವಯೋಗಪ್ಪ ನೇದಲಗಿ ಅವರ ರಾಜೀನಾಮೆಯಿಂದ ತೆರವಾದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಹಂಗಾಮಿ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಜುಲೈನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಟ್ಟು 42 ಸ್ಥಾನವನ್ನು ಒಳಗೊಂಡಿರುವ ವಿಜಯಪುರ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಸ್ತುತ ಬಿಜೆಪಿ 20, ಕಾಂಗ್ರೆಸ್‌ 18 ಮತ್ತು ಜೆಡಿಎಸ್‌ 3 ಮತ್ತು ಪಕ್ಷೇತರ 1 ಸದಸ್ಯ ಬಲಾಬಲವನ್ನು ಹೊಂದಿವೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವುದು ನಿಶ್ಚಿತ. ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಖಚಿತ ಎನ್ನುವುದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಅವರ ವಿಶ್ವಾಸ.

ಪೂರ್ವ ಒಪ್ಪಂದದಂತೆ ಸುಜಾತಾ ಅಧ್ಯಕ್ಷರಾಗುವುದು ಖಚಿತ. ಜೆಡಿಎಸ್‌,ಪಕ್ಷೇತರ ಸದಸ್ಯರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಅಭಿಪ್ರಾಯಪಟ್ಟರು.

ನಮ್ಮ ಆದ್ಯತೆ ಕಾಂಗ್ರೆಸ್‌. ಆದರೂ ಬದಲಾದ ಪರಿಸ್ಥಿತಿಯಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಕುರಿತು ಪಕ್ಷದ ಮುಖಂಡರು ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಜೆಡಿಎಸ್‌ ಜಿಲ್ಲಾ ಘಟಕ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು