ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿವಿ ಸ್ಥಾಪನೆ, ನಾಮಕರಣ: ಕಾಂಗ್ರೆಸ್‌ ಸಾಧನೆ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ಸಮರ್ಥನೆ
Last Updated 27 ಜನವರಿ 2022, 15:26 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ‘ಅಕ್ಕಮಹಾದೇವಿ’ ಹೆಸರನ್ನು ನಾಮಕರಣ ಮಾಡಿರುವ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂಬ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರನ್ನು ನಾಮಕರಣ ಮಾಡಿರುವುದು ಕಾಂಗ್ರೆಸ್ ಎಂಬುದು ಇಡೀ ಜಗತ್ತಿಗೆ ತಿಳಿದ ವಿಷಯ ಎಂದು ತಿಳಿಸಿದರು.

ಈ ಸತ್ಯ ಗೊತ್ತಿದ್ದರೂ ಸಹ ಕಾರಜೋಳ ಅವರು ಇದು ಬಿಜೆಪಿ ಸರ್ಕಾರದ ಶ್ರೇಯಸ್ಸು ಎಂದು ಇತ್ತೀಚೆಗೆ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

1999 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಹಿಳಾ ವಿಶ್ವ ವಿದ್ಯಾಲಯ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ವಿಶ್ವವಿದ್ಯಾಲಯವನ್ನು ಲೋಕಾರ್ಪಣೆ ಮಾಡಿಸಿದ್ದರು. ಅಂದಿನ ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ್‌ ಅಗತ್ಯ ಭೂಮಿ, ಮೂಲ ಸೌಕರ್ಯ ಒದಗಿಸಿದರು. ಹೀಗೆ ಮಹಿಳಾ ವಿವಿಗೆ ಅನೇಕ ಕೊಡುಗೆ ನೀಡಿರುವ ಶ್ರೇಯಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆಯೇ ಹೊರತು ಬಿಜೆಪಿಗೆ ಇಲ್ಲ ಎಂದರು.

201 6ರಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಡಲು ಆಗ್ರಹಿಸಿದ್ದರು. ಆಗ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರು ಅಕ್ಕಮಹಾದೇವಿ ಹೆಸರಿಡುವ ವಾಗ್ದಾನ ಮಾಡಿದ್ದರು. ಅಂತೆಯೇ ಸಿದ್ದರಾಮಯ್ಯ ಅವರ ಮನವೊಲಿಸಿ ಒಪ್ಪಿಸಿದರು. ನಂತರ ಅಧಿಸೂಚನೆ ಹೊರಡಿಸಲಾಯಿತು. 2017ರಲ್ಲಿ ಮಹಿಳಾ ವಿವಿಗೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅಕ್ಕಮಹಾದೇವಿ ಹೆಸರಿಡಲಾಯಿತು ಎಂದು ಹೇಳಿದರು.

ಹಿರಿಯರಾದ ಕಾರಜೋಳ ಅವರು ಕಾಂಗ್ರೆಸ್‌ ಸಾಧನಗೆ ಅವರ ಲೇಬಲ್ ಅಂಟಿಸಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ವಿಜಯಪುರದಲ್ಲಿ ವಿಮಾನ ನಿಲ್ದಾಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆಯೇ ಹೊರತು, ವಿಮಾನ ನಿಲ್ದಾಣ ನಮ್ಮ ಅವಧಿಯಲ್ಲಿ ಆಗಿದೆ ಎಂದು ನಾವು ಹೇಳುವುದಿಲ್ಲ. ಆ ರೀತಿ ಹೇಳಿದರೆ ಅದು ಮೂರ್ಖತನವಾಗುತ್ತದೆ ಎಂದರು.

ಮಹಿಳಾ ವಿವಿಯನ್ನು ಮತ್ತಷ್ಟು ಉನ್ನತೀಕರಿಸಲು ಹೆಚ್ಚು ಅನುದಾನ ನೀಡಬೇಕು ಹಾಗೂ ಬೋಧಕೇತರ ಸಿಬ್ಬಂದಿ ಕಾಯಂಗೊಳಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಮುಚ್ಚುವುದಾಗಲಿ ಅಥವಾ ವ್ಯಾಪ್ತಿಯನ್ನು ಕಡಿತಗೊಳಿಸುವ ಕಾರ್ಯಕ್ಕೆ ಕೈಹಾಕಬಾರದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಡಾ.ಗಂಗಾಧರ ಸಂಬಣ್ಣಿ, ಸುರೇಶ ಗೊಣಸಗಿ, ಸುಭಾಶ್‌ ಕಾಲೇಭಾಗ, ತಮ್ಮಣ್ಣ ಮೇಲಿನಕೇರಿ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT