ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪನ ನೈಜ ಕಾರಣ ಪತ್ತೆ ಹಚ್ಚಿ; ಆತಂಕ ನಿವಾರಿಸಿ

ವಿಜಯಪುರ ಜಿಲ್ಲಾಡಳಿತಕ್ಕೆ ಯುವ ಭಾರತ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ ಒತ್ತಾಯ
Last Updated 24 ಆಗಸ್ಟ್ 2022, 11:45 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಆಗಾಗ ಸಂಭವಿಸುತ್ತಿರುವ ಲಘು ಭೂಕಂಪನ ಜನರಲ್ಲಿ ಆತಂಕ, ಭಯ ಸೃಷ್ಟಿಸಿದೆ. ಭೂಗರ್ಭ ಶಾಸ್ತ್ರಜ್ಞರಿಂದ ಅಧ್ಯಯನ ನಡೆಸಿ ನಿಖರ ಕಾರಣ ಪತ್ತೆ ಹಚ್ಚಿ ತಿಳಿಸುವ ಮೂಲಕ ಜನರ ಆತಂಕ, ಭಯ ನಿವಾರಣೆಗೆ ಜಿಲ್ಲಾಡಳಿತ ಆದ್ಯತೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ, ಯುವ ಭಾರತ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಜಿಲ್ಲೆಯಲ್ಲಿ ಜರುಗುತ್ತಿರುವ ವಿದ್ಯಮಾನ ತಿಳಿಸಿ, ಭೂಗರ್ಭ ಶಾಸ್ತ್ರಜ್ಞರ ತಂಡವನ್ನು ಕರೆಯಿಸಿ, ವೈಜ್ಞಾನಿಕ ಅಧ್ಯಯನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಭೂಗರ್ಭ ಶಾಸ್ತ್ರಜ್ಞರಾದ ಎಚ್‌.ಎಸ್‌.ಪ್ರಕಾಶ ಎಂಬುವವರು ವಿಜಯಪುರದಲ್ಲಿ ಒಂದು ವಾರದ ಈಚೆಗೆ ನಾಲ್ಕೈದು ಬಾರಿ ಲಘು ಭೂಕಂಪನ ಸಂಭವಿಸಿರುವ ಕುರಿತು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದು, ಭವಿಷ್ಯದಲ್ಲಿ ತೀವ್ರತರದ ಭೂಕಂಪನವಾಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜಿಲ್ಲೆಯ ಜನತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಭೂಮಿಯಲ್ಲಿ ಕಲ್ಲುಗಳ ರಚನೆ, ಸಂಘರ್ಷ ಮೊದಲಾದ ವಿಷಯದ ಬಗ್ಗೆ ಪ್ರಸ್ತಾಪಿಸಿರುವ ಅವರು ಒಂದು ವೇಳೆ ತೀವ್ರತರ ಭೂಕಂಪನ ಸಂಭವಿಸಿದರೆ ಜನರು ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಲಘು ಭೂಕಂಪನದಿಂದ ಅಪಾಯವಿಲ್ಲ, ಜನ ಭಯ ಪಡುವ ಅಗತ್ಯವಿಲ್ಲ ಎಂದಷ್ಟೇ ಜಿಲ್ಲಾಡಳಿತ ಹೇಳಿದರೆ ಸಾಲದು. ಮುಂಜಾಗೃತ ಕ್ರಮಗಳ ಕುರಿತು ವಿವರಣೆ ನೀಡಬೇಕು. ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಲಘು ಭೂಕಂಪನಕ್ಕೆನೈಜ ಕಾರಣಗಳನ್ನು ಜನತೆಯ ಮುಂದಿಡಬೇಕು ಎಂದು ಒತ್ತಾಯಿಸಿದರು.

ಭೂಕಂಪನದ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಹಾಯವಾಣಿ, ಪ್ರತಿ ಹಳ್ಳಿ, ಬಡಾವಣೆ, ಕಾಲೊನಿಗಳಲ್ಲಿ ಒಂದು ಅಥವಾ ಎರಡು ಹೆಲ್ಫ್‌ ಡೆಸ್ಕ್‌ಗಳನ್ನು ಸ್ಥಾಪಿಸಬೇಕು. ಭೂಕಂಪನ ಸಂಭವಿಸಿದಾಗ ಪಾರಾಗಬಹುದಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಬೇಕು. ವಿವಿಧ ಸಂಘ, ಸಂಸ್ಥೆಗಳ ಜೊತೆಗೆ ಅರಿವು ಮೂಡಿಸುವ ಕಾರ್ಯ ತ್ವರಿತ ಗತಿಯಲ್ಲಿ ಆಗಬೇಕು ಎಂದು ಸಲಹೆ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲಘು ಭೂಕಂಪನ ಸಂಭವಿಸುತ್ತಿರುವುದಕ್ಕೆಆಲಮಟ್ಟಿ ಜಲಾಶಯ ಅಥವಾ ಎನ್ ಟಿಪಿಸಿ ಕಾರಣವಲ್ಲ ಎಂದುಸರ್ಕಾರಕ್ಕೆ ಈಗಾಗಲೇ ವರದಿ ನೀಡಿದೆ ಎಂದು ಹೇಳಿದರು.

ಕೊಲ್ಹಾರದಿಂದ ಸೋಲಾಪುರದ ವರೆಗೆ ವಿಸ್ತಾರವಾದ ಬಂಡೆ ಇದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.‌ ಈ ಬಂಡೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆಬಾವಿ ಕೊರೆಯುತ್ತಿರುವುದರಿಂದ ಈ ಬಂಡೆ ಶಿಥಿಲವಾಗುತ್ತಿರುವ ಸಾಧ್ಯತೆ ಇರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ನೀಡಬೇಕಿದೆ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತರ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಬಹಳ ಕಡಿಮೆಯಾಗಿದೆ. ಮಾನವನಿಂದಾಗಿ ನೈಸರ್ಗಿಕ ಸಂಪನ್ಮೂಲ ನಶಿಸಿ ಹೋಗುತ್ತಿದೆ. ಪರಿಣಾಮ ಭೂಕಂಪನದಂತಹ ವಿಕೋಪಗಳು ನಡೆಯುತ್ತಿವೆ. ನಿಸರ್ಗದ ವಿರುದ್ಧದ ನಡೆಯಿಂದ ಪ್ರಕೃತಿ ಮುನಿಸಿಕೊಂಡಿದೆ ಎಂದರು.

ಬಸವನ ಬಾಗೇವಾಡಿಯಲ್ಲಿ ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಭೂಕಂಪನವಾಗುತ್ತಿತ್ತು. ಈಗ ವಿಜಯಪುರ, ತಿಕೋಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಸಂಭವಿಸುತ್ತಿದೆ. ಇದಕ್ಕೆ ತಜ್ಞರು ವೈಜ್ಞಾನಿಕ ಕಾರಣ ಪತ್ತೆ ಹಚ್ಚಬೇಕಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಮುನ್ನಾ ಭಕ್ಷಿ, ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

****

ಭವಿಷ್ಯದಲ್ಲಿ ತೀವ್ರತರ ಭೂಕಂಪನವೇನಾದರೂ ಸಂಭವಿಸಿದರೆ ಆ ಸಂದರ್ಭದಲ್ಲಿ ಅಪಾಯದಿಂದ ಪಾರಾಗಲು ಜನರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಯುವ ಭಾರತ ಸಮಿತಿ ಮಾಡಲಿದೆ

–ಉಮೇಶ ಕಾರಜೋಳ,ಅಧ್ಯಕ್ಷ, ಯುವ ಭಾರತ ಸಮಿತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT