ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪದಿಂದ ಗ್ರಾಮಕ್ಕೊಂದು ವಾಚನಾಲಯ: ಸಿ.ಕೆ.ರಾಮೇಗೌಡ ಭರವಸೆ

ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ.ಕೆ.ರಾಮೇಗೌಡ ಭರವಸೆ
Last Updated 15 ಮಾರ್ಚ್ 2021, 14:28 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್‌ನಿಂದ ಗ್ರಾಮಕ್ಕೊಂದು ವಾಚನಾಲಯ, ಪಂಚಾಯ್ತಿಗೊಂದು ಗ್ರಂಥಾಲಯ ಸ್ಥಾಪಿಸುವ ಯೋಜನೆ ಇದೆ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ.ರಾಮೇಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ತಾಲ್ಲೂಕಿಗೊಂದು ಸಾಹಿತ್ಯ ಭವನ, ಜನಪದ ಕಲಾ ಪ್ರದರ್ಶನ ಏರ್ಪಡಿಸಲು ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಯುವ ಬರಹಗಾರರಿಗೆ ಉತ್ತೇಜನ ನೀಡುವುದು, ಅವರ ಕೃತಿಗಳನ್ನು ಪ್ರಕಟಿಸುವುದು, ಹೊಸ ಬರಹಗಾರರಲ್ಲಿ ಬರವಣಿಗೆ ಬಗ್ಗೆ ಅರಿವು ಮೂಡಿಸಲು ವಿಶೇಷ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸುವುದು, ವರ್ಷಕ್ಕೊಮ್ಮೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪುಸ್ತಕ ಮಹಾಮೇಳ ಏರ್ಪಡಿಸಲಾಗುವುದು ಎಂದರು.

ಗ್ರಾಮೀಣ ಪ್ರದೇಶ ಹಾಗೂ ಗಡಿಭಾಗಗಳಲ್ಲಿನ ಕನ್ನಡ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಸಬಲೀಕರಣಗೊಳಿಸುವುದು. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರ, ಪಟ್ಟಣಗಳ ಪ್ರಮುಖ ರಸ್ತೆಗಳಿಗೆ, ಬಡಾವಣೆಗಳಿಗೆ ಸಾಹಿತಿಗಳು, ಕವಿಗಳು, ಕನ್ನಡ ಹಾಗೂ ಜನಪರ ಹೋರಾಟಗಾರರು ಮತ್ತು ನಾಡು ನುಡಿಗಾಗಿ ಅನುಪಮ ಸೇವೆ ಸಲ್ಲಿಸಿದ ಪ್ರಬುದ್ಧ ರಾಜಕಾರಣಿಗಳ ಹೆಸರನ್ನು ನಾಮಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಕಸಾಪ ಆವರಣದಲ್ಲಿ ಮೂರು ಸಭಾಂಗಣಗಳನ್ನು ಆಧುನಿಕರಣಗೊಳಿಸುವುದು, ಕನ್ನಡದ ಮಹತ್ತರ ಕೃತಿಗಳನ್ನು ಮರು ಮುದ್ರಣ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲ ಕನ್ನಡಿಗರ ಧ್ವನಿಯಾಗಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿದೆ. ಪರಿಷತ್ತಿನಲ್ಲಿ ಜಾತಿ, ಹಣ, ಪ್ರಾದೇಶಿಕತೆ ಎಂಬ ಭಿನ್ನತೆ ಹೋಗಲಾಡಿಸುವ ಸಂಕಲ್ಪದೊಂದಿಗೆ ಅಖಂಡ ಕರ್ನಾಟಕದ ಕಲ್ಪನೆ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿರುವುದಾಗಿ ಹೇಳಿದರು.

ಕನ್ನಡ ಶಾಸ್ತ್ರೀಯ ಭಾಷೆ ಅಭಿವೃದ್ಧಿಗಾಗಿ ಇದುವರೆಗೂ ಕೇಂದ್ರ ಸರ್ಕಾರದಿಂದ ನಯಾ ಪೈಸೆ ಅನುದಾನ ಪಡೆದಿಲ್ಲ. ಈ ವಿಷಯದಲ್ಲಿ ನಾವು ವಿಫಲವಾಗಿದ್ದು, ಕೇಂದ್ರದಿಂದ ಅನುದಾನ ಪಡೆಯಲು ಅಗತ್ಯ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

ಸಮಾನ ಶಿಕ್ಷಣ ನೀತಿ, ಮಾತೃ ಭಾಷಾ ಶಿಕ್ಷಣ ನೀತಿ ಜಾರಿ ಸಂಬಂಧ ಸಂಸದರ ಮೇಲೆ ಒತ್ತಡ ತಂದು ಕೇಂದ್ರ ಸರ್ಕಾರದ ಮೂಲಕ ಕಾಯ್ದೆ ರೂಪಿಸಲು ಆದ್ಯತೆ ನೀಡಲಾಗುವುದು ಎಂದರು.

ಮೇ 9ರಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತ ಹಾಕಿ, ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಸಾಹಿತಿಗಳಾದ ಶಂಕರ ಹೂಗಾರ‌, ಗಿರಿಜಾ ಮಾಲಿ ಪಾಟೀಲ, ನಮ್ಮ ವಿಜಯಕುಮಾರ್‌, ನಾನಾಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅರ್ಹರಿಗೆ ಪ್ರಾದೇಶಿಕ ನ್ಯಾಯ, ಪ್ರತಿಭಾ ನ್ಯಾಯ ಹಾಗೂ ಸಾಮಾಜಿಕ ನ್ಯಾಯ ಒದಗಿಸಲಾಗುವುದು, ಯುವ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು

ಸಿ.ಕೆ.ರಾಮೇಗೌಡ

ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT