ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಎಂ.ಬಿ. ಪಾಟೀಲ 

Last Updated 9 ಜುಲೈ 2022, 13:18 IST
ಅಕ್ಷರ ಗಾತ್ರ

ವಿಜಯಪುರ: ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜನಹಿತ ಮರೆತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದು ದೂರಿದರು.

ಪ್ರವಾಹ ಉಂಟಾದ ವೇಳೆ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಿ ಜನರ ಸಹಾಯಕ್ಕೆ ಬರಬೇಕಿತ್ತು. ಈ ರೀತಿಯ ಜನ ವಿರೋಧಿ ನೀತಿ ಅನುಸರಿಸುವ ಕೆಟ್ಟ ಸರ್ಕಾರ ಎಂದೂ ಕಂಡಿಲ್ಲ ಎಂದು ಹೇಳಿದರು.

ಸಿದ್ಧರಾಮಯ್ಯ ಕೊಡುಗೆ ಅನನ್ಯ:

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಬ್ಬ ರೈತನಾಯಕ, ಜನನಾಯಕ. ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಅವರ ಜನ್ಮದಿನೋತ್ಸವ ಅರ್ಥಪೂರ್ಣವಾಗಿ ಆಚರಣೆ ಮಾಡಲು ಅಭಿಮಾನಿಗಳು ನಿಶ್ಚಯಿಸಿದ್ದಾರೆ, ಇದರಲ್ಲಿ ತಪ್ಪೇನು ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದರು.

ರಾಹುಲ್ ಗಾಂಧಿ ಸೇರಿದಂತೆ ಅನೇಕ ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ಇದಕ್ಕೆ ಪರ್ಯಾಯ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ನಾವೆಲ್ಲಾ ಕೂಡಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಮಾಡುತ್ತೇವೆ, ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರ ಯಾವುದೇ ಅಸಮಧಾನವಿಲ್ಲ ಎಂದರು.

ನಮ್ಮ ಆಡಳಿತದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಅಕ್ರಮದ ಮೂಲಕ ನೇಮಕಾತಿ ಮಾಡಿಲ್ಲ, ಆಗ ಒಂದೇ ಒಂದು ದೂರು ಸಹ ಬಂದಿರಲಿಲ್ಲ. ಇಲಾಖೆಯಲ್ಲಿ ಒಳ್ಳೆಯ ಆಧಿಕಾರಿಗಳಿದ್ದಾರೆ, ಅಂತಹ ಅಧಿಕಾರಿಗಳ ನೇತೃತ್ವದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬೇಕಿತ್ತು ಎಂದು ಹೇಳಿದರು.

ಹಿಂದಿನ ಸರ್ಕಾರಗಳಲ್ಲಿ ಪೊಲೀಸ್ ನೇಮಕದಲ್ಲಿ ಅಕ್ರಮವಾಗಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಸವಾಲು ಹಾಕಿದರು.

ನೇಮಕಾತಿ ಆದವರಲ್ಲಿ ಪ್ರಾಮಾಣಿಕರೂ ಇದ್ದಾರೆ. ಅವರಿಗೆ ನ್ಯಾಯ ನೀಡಿ. ಅಕ್ರಮದ ಹಿಂದೆ ಯಾರೇ ಇದ್ದರೂ ಅವರ ಮೇಲೆ ಕ್ರಮ ತೆಗದುಕೊಳ್ಳಬೇಕೆಂದು ಒತ್ತಾಯಿಸಿದರು.

ವೈಜ್ಞಾನಿಕ ಪರಿಶೀಲನೆ ಅಗತ್ಯ:

ಜಿಲ್ಲೆಯಲ್ಲಿ ಭೂಕಂಪನದ ಬಗ್ಗೆ ಜನತೆ ಆತಂಕಗೊಂಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ವೈಜ್ಞಾನಿಕ ಪರಿಶೀಲನೆಯಾಗಬೇಕು ಎಂದು ಎಂ.ಬಿ. ಪಾಟೀಲ ಒತ್ತಾಯಿಸಿದರು.

ಭೂಕಂಪನ ಅನುಭವ ನನಗೂ ಆಗಿದೆ, ಜನತೆ ಭೂಕಂಪನದಿಂದ ಭಯಗೊಂಡಿದ್ದಾರೆ, ಬಹಳ ವರ್ಷಗಳಿಂದ ತಿಕೋಟಾ ಹಾಗೂ ಸುತ್ತಮುತ್ತಲ ಭಾಗದಲ್ಲಿ ಆಗುತ್ತಿದ್ದು, ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಪಾಪದ ಕೂಸು, 2023 ರಲ್ಲಿ ಈ ಸರ್ಕಾರವನ್ನು ಜನತೆಯೇ ಕಿತ್ತು ಹಾಕಲು ಜನರು ಕಾಯುತ್ತಿದ್ದಾರೆ

– ಎಂ.ಬಿ. ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT