ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರ ಸ್ವಾಮೀಜಿ ಉದಾತ್ತ ತತ್ವಗಳ ಪ್ರತಿರೂಪ.. ಕಾರಜೋಳ

Last Updated 3 ಜನವರಿ 2023, 5:49 IST
ಅಕ್ಷರ ಗಾತ್ರ

ಜೀವನ ಮೌಲ್ಯ, ಸಂಸ್ಕಾರ, ಸದ್ಗುಣ, ಆದರ್ಶಗಳನ್ನೇ ಜೀವನದ ಉಸಿರಾಗಿಸಿಕೊಂಡು, ನುಡಿದಂತೆ ನಡೆದ ಸಿದ್ಧೇಶ್ವರ ಸ್ವಾಮೀಜಿಗಳ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಲು ಪದಗಳೇ ಸಾಲದು, ಅವರ ಬಗ್ಗೆ ಹೇಳಲು ಕುಳಿತರೇ ದಿನಗಳೇ ಸಾಲದು, ಅಷ್ಟೊಂದು ಮೇರು ವ್ಯಕ್ತಿತ್ವದ ಶ್ರೀಗಳ ಬಗ್ಗೆ ಪದಗಳಲ್ಲಿ ಬರೆದಿಡಲು ಹೇಗೆ ಸಾಧ್ಯ?

ಅಧ್ಯಾತ್ಮ, ತತ್ವಜ್ಞಾನ, ಝೆನ್ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಅನುಭಾವ ಹೀಗೆ ಎಲ್ಲ ವಿಷಯಗಳಲ್ಲೂ ಮೇರು ಜ್ಞಾನ ಹೊಂದಿದ ಜ್ಞಾನ ಪರ್ವತ ಶ್ರೀಗಳು. ಶುಭ್ರ ಉಡುಪು, ಮನಸ್ಸು ಕೂಡಾ ಅಷ್ಟೇ ಶುಭ್ರ, ಪರಿಶುದ್ಧ, ವಿಚಾರದಲ್ಲಿ ಪರಿಶುದ್ಧ, ಅವರನ್ನು ನೋಡಿದರೆ ಸಾಕು ‘ಸಂತ'ನ ದರ್ಶನ, ಅಷ್ಟೇ ಏಕೆ ನಡೆದಾಡುವ ದೇವರ ಸಾಕ್ಷಾತ್ ದರ್ಶನ ಎಂದರೂ ತಪ್ಪಾಗಲಾರದು.

ಸಿದ್ಧೇಶ್ವರ ಶ್ರೀಗಳ ದರ್ಶನಾಶೀರ್ವಾದ ಪಡೆದುಕೊಂಡು, ಅವರನ್ನು ಒಂದು ಕ್ಷಣ ನೋಡಿದರೆ ಸಾಕು ‘ಸಾತ್ವಿಕತೆ' ಏನು ಎಂಬುದರ ಅರಿವಾಗುತ್ತದೆ, ಮನದಲ್ಲಿ ವಿಚಾರ ಜ್ಯೋತಿ, ಸರಳತೆಯ ಜ್ಯೋತಿ ತಾನಾಗಿಯೇ ಬೆಳಗುತ್ತದೆ. ಅಷ್ಟೊಂದು ದಿವ್ಯತೆಯ ಚಿಂತನೆಯುಳ್ಳ ಸಂತರವರು.

ಸಂತನೆಂದರೆ ಯಾರು? ಧನ್ಯತೆ ಅರಿತವರು. ಎಂಬಂತೆ ಧನ್ಯತೆಯ ಜೊತೆಗೆ ಸಾತ್ವಿಕತೆಯ ಪ್ರತಿರೂಪದಂತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನಗಳನ್ನು ಆಲಿಸಿದರೆ ಜೀವನ ಪರಿವರ್ತನೆಗೆ ದಾರಿಯಾಗುವುದಂತೂ ಸತ್ಯ.

ಮೌಲ್ಯಗಳ ದಿಗ್ದರ್ಶನ: ಪ್ರವಚನ ಎಂಬ ಪದ ಕೇಳಿದಾಗ ನೆನಪಾಗುವುದು ಸಿದ್ದೇಶ್ವರ ಶ್ರೀಗಳು. ಮಿತವಾದ, ಮನಸ್ಸಿಗೆ ಮುಟ್ಟುವ ಹಾಗೆ ‘ಆದರ್ಶಗಳನ್ನು’ ಮನದಲ್ಲಿ ಬಿತ್ತುವಂತೆ ಮಾಡುವ ಶಕ್ತಿ ಶ್ರೀಗಳ ಪ್ರವಚನದಲ್ಲಿದೆ.

ಹೇಗೆ ಬದುಕಬೇಕು, ತಂದೆ-ತಾಯಿಗಳನ್ನು ಗೌರವಿಸುವುದು, ದಯೆ ಬೆಳೆಸಿಕೊಳ್ಳುವುದು, ಪರೋಪಕಾರ ಮೈಗೂಡಿಸಿಕೊಳ್ಳುವುದು, ಸಾತ್ವಿಕತೆಯಿಂದ ಬದುಕು ನಡೆಸುವುದು, ಗುರುಗಳನ್ನು ಗೌರವಿಸುವುದು ಹೀಗೆ ಬದುಕು ಉದಾತ್ತ ಪಥದತ್ತ ಸಾಗಲು ಅವಶ್ಯವಿರುವ ಜೀವನ ದೀಪ ದೊರಕುವುದು ಶ್ರೀಗಳ ಪ್ರವಚನದಿಂದ.

ಪ್ರವಚನಗಳ ದೀಪ್ತಿಯನ್ನು ಜಗತ್ತಿನಾದ್ಯಂತ ಬೆಳಗಿಸಿರುವ ಸಿದ್ದೇಶ್ವರ ಸ್ವಾಮೀಜಿ ಜಪಾನ್, ಅಮೇರಿಕಾ ಸೇರಿದಂತೆ ಅನೇಕ ಹೊರದೇಶಗಳಲ್ಲಿಯೂ ಪ್ರವಚನ ದೀಪವನ್ನು ಬೆಳಗಿಸಿ ಅಲ್ಲಿಯೂ ಅರಿವಿನ ಜ್ಯೋತಿ ಮೂಡಿಸಿದ್ದಾರೆ.

ಭಗವಾನ್ ಬುದ್ಧ, ಮಹಾವೀರ, ಅಣ್ಣ ಬಸವಣ್ಣ, ಪುರಂದರದಾಸರು, ಜೆನ್ ಜ್ಞಾನಿಗಳು, ಪ್ರವಾದಿ ಮೊಹ್ಮದ್ ಪೈಗಂಬರರು, ಸಾಕ್ರೆಟಿಸ್, ಅರಿಸ್ಟಾಟಲ್, ಪ್ಲೇಟೋ, ಹೀಗೆ ಜಗತ್ತಿನ ಎಲ್ಲ ಮಹಾನ್ ದಾರ್ಶನಿಕರ ಜೀವನ ದರ್ಶನವನ್ನು ಪ್ರವಚನದಲ್ಲೇ ಕಾಣಬಹುದು.

ಚತುರ್ವೇದಗಳು, ಉಪನಿಷತ್, ಭಗವದ್ಗೀತೆ, ಪುರಾಣ, ಮಹಾಭಾರತ, ರಾಮಾಯಣ, ವಚನ ಸಾಹಿತ್ಯ, ಬೌದ್ಧ ಸಾಹಿತ್ಯ, ತ್ರಿಪಿಟಕಗಳು, ಜೈನ ಪವಿತ್ರ ಗ್ರಂಥಗಳು ಹೀಗೆ ಸಕಲ ಧರ್ಮಗಳ ತತ್ವಗಳನ್ನು ಓದಿ, ಅಧ್ಯಯನ, ಅದನ್ನು ಅಳವಡಿಸಿಕೊಳ್ಳಲು ಶ್ರೀಗಳು ಸದಾ ಪ್ರೇರಣೆ ನೀಡುತ್ತಾ ಬಂದವರು.

ಧರ್ಮದ ಚೌಕಟ್ಟು ಮೀರಿ ‘ಮಾನವೀಯತೆ’ ಚೌಕಟ್ಟು ಅಳವಡಿಸಿ ಬದುಕಲು ಪ್ರೇರೇಪಿಸಿದವರು. ಸದಾ ಮಾನವೀಯತೆ, ಸರಳತೆಯನ್ನೇ ಉಸಿರಾಗಿಸಿಕೊಳ್ಳಿ ಎಂದು ಸಾರಿದವರು.

ಸೌಮ್ಯ ಸ್ವಭಾವ, ಹೃದಯಕ್ಕೆ ಮುಟ್ಟುವ ಸೌಮ್ಯ ಭಾಷೆ, ಅಚಲ ಗುರುಭಕ್ತಿ, ದೇವಭಕ್ತಿ, ದೇಶಭಕ್ತಿಯ ಗುಣಗಳ ಸಾಕಾರರೂಪ ಸಹ ಹೌದು. ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳ ಅಪ್ಪಟ ಶಿಷ್ಯವಾಗಿ ಅವರ ಜ್ಞಾನ ಪರಂಪರೆಯನ್ನು ಮುಂದುವರೆಸುತ್ತಾ ಸಾಗಿದ ಮಹಾನ್ ಚೇತನ ಸ್ವಾಮೀಜಿಗಳು.

ಅಧ್ಯಾತ್ಮಿಕತೆಯ ದಿವ್ಯ ಪ್ರತಿರೂಪವಾಗಿರುವ ಸ್ವಾಮೀಜಿ ವೇದಿಕೆ ಏರುವುದೇ ಅಪರೂಪ, ಪದ್ಮಶ್ರೀಯಂತಹ ಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬರ ಜೀವನದ ಕನಸು, ಈ ಕನಸು ನನಸಾಗಿಸಿಕೊಳ್ಳಲು ಜೀವನವನ್ನೇ ಸಾಧನೆಯ ಪಥದಲ್ಲಿ ಅನೇಕರು ಸಾಗಿಸಿದ್ದಾರೆ. ಆದರೆ ಇಂತಹ ಪ್ರತಿಷ್ಠಿತ ಪದ್ಮಶ್ರೀ ಸಿದ್ದೇಶ್ವರ ಸ್ವಾಮೀಜಿಗಳನ್ನು ಅರಸಿ ಬಂದಾಗಲೂ ಅದನ್ನು ನಯವಾಗಿ ನಿರಾಕರಿಸಿದ ಮಹಾನ್ ದೈವಿಪುರುಷ ಸಿದ್ದೇಶ್ವರ ಸ್ವಾಮೀಜಿ.

ಇಂತಹ ವ್ಯಕ್ತಿ ಈ ಸಹಸ್ರಮಾನದ ಅದ್ಭುತ ಸಂತ, ಒಂದು ರೀತಿ ಆಧುನಿಕ ಕಾಲಘಟ್ಟದಲ್ಲಿ ಮೌಲ್ಯಗಳು, ಆದರ್ಶಗಳು ಎಲ್ಲಿಯಾದರೂ ಕಾಣುವುದು ‘ಶ್ರೀ ಸಿದ್ದೇಶ್ವರ’ ಮಹಾಸ್ವಾಮೀಜಿಗಳಲ್ಲೇ.

–ಗೋವಿಂದ ಎಂ. ಕಾರಜೋಳ, ಜಲಸಂಪನ್ಮೂಲ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT