ಭಾನುವಾರ, ನವೆಂಬರ್ 29, 2020
25 °C
ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಗಂಭೀರ ಆರೋಪ

ಅಭಿವೃದ್ಧಿ ಕಾರ್ಯಗಳಿಗೆ ಕಾರಜೋಳ ತಡೆ: ಶಾಸಕ ದೇವಾನಂದ ಚವ್ಹಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಾಗಠಾಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಡೆವೊಡ್ಡಿದ್ದಾರೆ. ಸ್ಥಳೀಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶಾಸಕ ದೇವಾನಂದ ಚವ್ಹಾಣ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುತ್ತಿರುವ ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ತಡೆಹಿಡಿದಿದ್ದಾರೆ ಎಂದು ದೂರಿದರು.

ಭೀಮಾ, ಡೋಣಿ ನದಿಗಳ ಪ್ರವಾಹದಿಂದ ತಾಲ್ಲೂಕಿನ 19 ಗ್ರಾಮಗಳ ಜನರು ಸಂತ್ರಸ್ತರಾಗಿದ್ದಾರೆ. ಬೆಳೆಹಾನಿಯಿಂದ ಕೃಷಿಕರು ತತ್ತರಿಸಿ ಹೋಗಿದ್ದರೂ ರಾಜ್ಯ ಸರ್ಕಾರ ಅತಿವೃಷ್ಟಿ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡದಂತೆ ಕಾರಜೋಳ ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.

ನಾಗಠಾಣ–ಇಂಚಿಗೇರಿ ರಸ್ತೆ, ದೇವರ ನಿಂಬರಗಿ–ಚಡಚಣ ರಸ್ತೆ ಕಾಮಗಾರಿ ಟೆಂಡರ್‌ ಆಗಿದ್ದರೂ ತಡೆಹಿಡಿದ್ದಿದ್ದಾರೆ ಎಂದು ದೂರಿದರು.

ಕ್ಷೇತ್ರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದರೂ ಲೋಕೋಪಯೋಗಿ ಇಲಾಖೆಯಿಂದ ದುರಸ್ತಿಗೆ ನಯಾ ಪೈಸೆ ಅನುದಾನ ನೀಡಿಲ್ಲ. ಇಲಾಖೆಯಿಂದ ಬಜೆಟ್‌ನಲ್ಲಿ ನಿಗದಿಯಾಗಿರುವ ಅನುದಾನವನ್ನೂ ನೀಡಿಲ್ಲ ಎಂದು ದೂರಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರು ನನ್ನ ವಿರುದ್ಧ ಸೋತಿರುವುದರಿಂದ ನನ್ನ ಮತ್ತು ಕ್ಷೇತ್ರದ ಜನತೆ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

ಪ್ರವಾಹಪೀಡಿತ ನಾಗಠಾಣ ಕ್ಷೇತ್ರವನ್ನು ಅತಿವೃಷ್ಟಿ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು, ಯಾವುದೇ ತಾರತಮ್ಯ ಮಾಡದೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ನಾಗಠಾಣ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಎಚ್‌.ಡಿ.ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ಪ್ರಸ್ತುತ ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿದರು.

‘ಕ್ಷೇತ್ರದಲ್ಲಿ ಸುಮ್ಮನೆ ಕೂರು ನಾವೇ ಅಭಿವೃದ್ಧಿ ಮಾಡುತ್ತೇವೆ ಎಂದರೆ ಕೂರಲು ಸಿದ್ಧವಾಗಿದ್ದೇನೆ. ಆದರೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಉಪಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಕ್ಷೇತ್ರಕ್ಕೆ ಬಂದಿರುವ ಅಧಿಕಾರಿಗಳು ಹಗಲು ದರೋಡೆಯಲ್ಲಿ ತೊಡಗಿದ್ದಾರೆ. ಯಾರೊಬ್ಬರೂ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.

ನಾಗಠಾಣ ಮತ ಕ್ಷೇತ್ರದ ರಸ್ತೆಗಳಲ್ಲಿ ಕೇವಲ ಜೆಡಿಎಸ್‌ ಕಾರ್ಯಕರ್ತರು ಮಾತ್ರ ಸಂಚರಿಸುವುದಿಲ್ಲ. ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು, ಮತದಾರರು ಇದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ನಾಗಠಾಣ ಕ್ಷೇತ್ರದ ಜೆಡಿಎಸ್‌ ಘಟಕದ ಅಧ್ಯಕ್ಷ ಸದಾಶಿವ ಜಿತ್ತಿ ಮಾತನಾಡಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಹಾಗೂ ಸ್ವತಃ ಲೋಕೋಪಯೋಗಿ ಸಚಿವರಾಗಿರುವುದರಿಂದ ಜಿಲ್ಲೆಯ ಎಲ್ಲ ರಸ್ತೆಗಳ ಸಂಪೂರ್ಣ ಅಭಿವೃದ್ಧಿ ಆಗಬೇಕಿತ್ತು. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಆರೋಪಿಸಿದರು.

ಪ್ರಭಾವಿಗಳಿಂದ ಅಕ್ರಮ ಮರಳು ದಂಧೆ 

ವಿಜಯಪುರ: ಅಕ್ರಮ ಮರಳು ದಂಧೆಯಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪ್ರಭಾವಿ ರಾಜಕಾರಣಿಗಳು ತೊಡಗಿಕೊಂಡಿದ್ದಾರೆ ಎಂದು ಶಾಸಕ ದೇವಾನಂದ ಚವ್ಹಾಣ ಆರೋಪಿಸಿದರು. 

‘ಅಕ್ರಮ ಮರಳು ಮಾಫಿಯಾ ಲಾರಿಗಳನ್ನು ಸ್ವತಃ ನಾನೇ ಹಿಡಿದುಕೊಟ್ಟರೂ ಕೇಸ್‌ ದಾಖಲಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಭೀಮಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಮೇಲೆ ಇಂಡಿ ಉಪವಿಭಾಗಾಧಿಕಾರಿ ದಾಳಿ ಮಾಡಿದಾಗ ಕೇಸು ದಾಖಲಿಸದಂತೆ ಅವರಿಗೆ ಯಾರೆಲ್ಲ ಫೋನ್‌ ಮಾಡಿ ಪ್ರಭಾವ ಬೀರಿದ್ದಾರೆ ಎಂಬುದು ತಿಳಿದಿದೆ ಎಂದರು.

ನೂರಾರು ಲೋಡ್‌ ಅಕ್ರಮ ಮರಳು ಸಂಗ್ರಹವಾಗಿದ್ದರೂ ಅದನ್ನು ಮನೆ ಕಟ್ಟಲು ಎಂದು ಹೇಳಿ ಪ್ರಕರಣವನ್ನೇ ತಿರುಚಲಾಗಿದೆ ಎಂದು ದೂರಿದರು.

ಜಿಲ್ಲೆಯ ಗಣಿ, ಕಂದಾಯ, ಪೊಲೀಸ್‌ ಇಲಾಖೆ ವೈಫಲ್ಯದ ಪರಿಣಾಮ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲಾ ಟಾಸ್ಕ್‌ ಪೋರ್ಸ್‌ ಲೆಕ್ಕಕ್ಕಿಲ್ಲದಂತಾಗಿದೆ ಎಂದು ಆರೋಪಿಸಿದರು.

ನೆರೆ ಸಂತ್ರಸ್ತರಿಗೆ ಆಹಾರ ಕಿಟ್ 

ವಿಜಯಪುರ: ನಾಗರಾಠ ಮತಕ್ಷೇತ್ರದಲ್ಲಿ ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಆಹಾರ ಕಿಟ್‌ ವಿತರಿಸುತ್ತಿರುವುದಾಗಿ ಶಾಸಕ ದೇವಾನಂದ ಚವ್ಹಾಣ ಹೇಳಿದರು.

ಕ್ಷೇತ್ರದಲ್ಲಿ ಪ್ರವಾಹ ಸಂತ್ರಸ್ತ ಒಟ್ಟು 434 ಜನರನ್ನು ಗುರುತಿಸಿ, ಅವರಿಗೆ ತಲುಪಿಸುತ್ತಿರುವುದಾಗಿ ತಿಳಿಸಿದರು. 

ಆಹಾರ ಕಿಟ್‌ ಜೊತೆ ಬೆಡ್‌ಸೀಟ್‌ ಮತ್ತಿತರರ ವಸ್ತ್ರಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. 

***********

ಚಡಚಣವನ್ನು ಅತಿವೃಷ್ಠಿ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಬೇಕು. ಮೂಲಸೌಕರ್ಯ ಕಲ್ಪಿಸಲು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು
-ದೇವಾನಂದ ಚವ್ಹಾಣ
ಶಾಸಕ, ನಾಗಠಾಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು