ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಪಂ; ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಿ- ನೌಕರರ ಸಂಘ ಒತ್ತಾಯ

Published 3 ನವೆಂಬರ್ 2023, 14:00 IST
Last Updated 3 ನವೆಂಬರ್ 2023, 14:00 IST
ಅಕ್ಷರ ಗಾತ್ರ

ವಿಜಯಪುರ: ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಸಿಐಟಿಯು ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ. ನಾಡಗೌಡ ಮಾತನಾಡಿ, ‘ಗ್ರಾಮ ಪಂಚಾಯಿತಿ ನೌಕರರು ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನರಿಗೆ ಅನುಕೂಲಕರವಾದ ಯೋಜನೆಗಳನ್ನು ತಲುಪಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ ಅವರ ಬದುಕು ಹಸನಾಗಿಲ್ಲ. ಅನೇಕ ಸೌಲಭ್ಯಗಳು ದೊರಕುತ್ತಿಲ್ಲ’ ಎಂದರು.

‘ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಕನಿಷ್ಠ ₹31,000 ವೇತನ ನಿಗದಿಗೊಳಿಸಬೇಕು. ನಿವೃತ್ತಿ ಅಥವಾ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ ₹6 ಸಾವಿರ ಪಿಂಚಣಿ ವ್ಯವಸ್ಥೆ ಜಾರಿಗೆಯಾಗಬೇಕು’ ಎಂದು ಆಗ್ರಹಿಸಿದರು.

‘ಗ್ರಾಮ ಪಂಚಾಯಿತಿಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತರ್ಹ. ಆದರೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು, ಮುಂದುವರಿಸಬೇಕು’ ಎಂಬ ಬೇಡಿಕೆಗಳನ್ನು ಮಂಡಿಸಿದರು.

ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ‘ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು ನಿರ್ದಿಷ್ಟ ಕೆಲಸಗಳನ್ನು ನಿಗದಿಪಡಿಸಬೇಕು. ನೀರುಗಂಟಿ, ಅಟೆಂಡರ್, ಸ್ವೀಪರ್ಸ್‍ಗಳಲ್ಲಿ ವಿದ್ಯಾರ್ಹತೆ ಇರುವವರಿಗೆ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಚಂದ್ರಶೇಖರ ವಾಲಿಕಾರ, ಅಯ್ಯನಗೌಡ ಬಾಗೇವಾಡಿ, ಸಂಗಣ್ಣ ಗಂಗಶೆಟ್ಟಿ, ಲಾಲಅಹ್ಮದ ಶೇಖ, ಶಿವನಗೌಡ ಬಿರದಾರ, ಎಸ್.ಡಿ. ಹಳ್ಳಿ, ಕೆ.ಆಯ್. ಮಡಿವಾಳರ, ಎಸ್.ಬಿ. ಹೂಗಾರ, ತುಕಾರಾಮ ಮರನೂರ, ಮುರುಗೇಂದ್ರ ಮುತ್ತು ಕೊಂಡಗೂಳಿ, ಎಸ್.ಡಿ. ಮಠ, ಮಲ್ಲಿಕಾರ್ಜುನ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT