ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ: ಹಬ್ಬದ ವಾತಾವರಣ
Last Updated 1 ಅಕ್ಟೋಬರ್ 2021, 3:51 IST
ಅಕ್ಷರ ಗಾತ್ರ

ಆಲಮಟ್ಟಿ: ಇಡೀ ಗ್ರಾಮದ ತುಂಬಾ ಹಬ್ಬದ ವಾತಾವರಣ, ಪ್ರತಿ ಮನೆ ಹಾಗೂ ರಸ್ತೆಯುದ್ದಕ್ಕೂ ಮೂಡಿದ ರಂಗೋಲಿ ಚಿತ್ತಾರ, ಸಹಸ್ರಾರು ಜನರ ಹರ್ಷೋದ್ಘಾರ, ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಪೂರ್ಣ ಕುಂಭದೊಂದಿಗೆ ಪುರ ಪ್ರವೇಶ...

ಸಮೀಪದ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಅರಳೆಲೆ ಕಟ್ಟಿಮನಿ ಹಿರೇಮಠದ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಮುನ್ನಾ ದಿನ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳಿವು. ರಂಭಾಪುರಿಯ ಪ್ರಸನ್ನ ರೇಣುಕ ವೀರಸೋಮೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿಯಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಗ್ರಾಮದ ಹೊರವಲಯದಿಂದ ಶ್ರೀಗಳನ್ನು ಅಡ್ಡಪಲ್ಲಕ್ಕಿಯ ಮೂಲಕ ಬರಮಾಡಿಕೊಳ್ಳಲಾಯಿತು.

ಸಹಸ್ರ ದರ್ಶನ ಕಾರ್ಯಕ್ರಮ: ಬೃಹತ್ ವೇದಿಕೆಯ ಮೇಲೆ ನಾಡಿನ 20 ಕ್ಕೂ ಅಧಿಕ ಮಠಾಧೀಶರ ಉಪಸ್ಥಿತಿಯಲ್ಲಿ ಚಿಮ್ಮಲಗಿಯ ಅರಳೆಲೆ ಕಟ್ಟಿಮನಿ ಹಿರೇಮಠದ ಸದ್ಯದ ಪೀಠಾಧಿಪತಿ ನೀಲಕಂಠ ಸ್ವಾಮೀಜಿಗಳಿಗೆ 88 ವರ್ಷ ತುಂಬಿದ ಪ್ರಯುಕ್ತ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮ ನಡೆಯಿತು.

ರಂಭಾಪುರಿ ಶ್ರೀಗಳು, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಜಾಲಹಳ್ಳಿಯ ಡಾ. ಜಯಶಾಂತಲಿಂಗ ಸ್ವಾಮೀಜಿ, ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಸ್ವಾಮೀಜಿ, ಮುರಘೇಂದ್ರ ಸ್ವಾಮೀಜಿ, ಶಿವಪ್ರಕಾಶ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಮಸೂತಿಯ ಪ್ರಭುಕುಮಾರ ಸ್ವಾಮೀಜಿ, ಜೈನಾಪುರದ ರೇಣುಕ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ಧಲಿಂಗ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಸಾಸನೂರಿನ ಶಂಕರಲಿಂಗ ದೇವರು, ಬಾಡಗಂಡಿಯ ಶಿವಯೋಗಿಣಿ ಬಸಮ್ಮ ತಾಯಿ, ಕೊಟ್ಟೂರಿನ ಡಾ. ಸಿದ್ದಲಿಂಗ ಸ್ವಾಮೀಜಿ, ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪುತ್ರ ದಾನ: ಸನ್ಯಾಸತ್ವ ಈಗಾಗಲೇ ಸ್ವೀಕರಿಸಿರುವ ನೂತನ ಪಟ್ಟಾಧಿಕಾರಿ ಸಿದ್ಧ ರೇಣುಕ ದೇವರನ್ನು ಅವರ ಪೂರ್ವಾಶ್ರಮದ ತಂದೆ, ತಾಯಿ ತಾಳಿಕೋಟೆ ತಾಲ್ಲೂಕಿನ ಗುಂಡಕನಾಳದ ಬಸಲಿಂಗಯ್ಯ ಹಿರೇಮಠ ಹಾಗೂ ಗುರುಬಸಮ್ಮ ದಂಪತಿ, ತಮ್ಮ ಮಗ ಸಿದ್ಧ ರೇಣುಕ ದೇವರನ್ನು ಸಂಸಾರ ಬಿಟ್ಟು ಸನ್ಯಾಸತ್ವ ಜತೆಗೆ ಮಠಕ್ಕೆ ಪೀಠಾಧಿಪತಿ ಬಿಡುವ ಪುತ್ರ ದಾನದ ಭಾವಪೂರ್ಣ ಕಾರ್ಯಕ್ರಮ ಜರುಗಿತು. ಬಸಲಿಂಗಯ್ಯ ದಂಪತಿಗಳ ಕಣ್ಣಾಲಿಗಳು ತೇವಗೊಂಡವು.

ಗ್ರಾಮದ ಮುಖಂಡರಾದ ಬಸನಗೌಡ ನರಸನಗೌಡರ, ಮಲ್ಲನಗೌಡ ನರಸನಗೌಡರ, ಗುರುಸಿದ್ಧ ಕಾಮನಕೇರಿ, ರಾಮು ಜಗತಾಪ, ಲಕ್ಷ್ಮಣ ಚನಗೊಂಡ, ಎಂ.ಎಸ್. ಮುಕಾರ್ತಿಹಾಳ, ಶೇಖರ ಪಟ್ಟಣಶೆಟ್ಟಿ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮುತ್ತಗಿ, ಬಸವರಾಜ ಬಾದರದಿನ್ನಿ, ಶಿವು ಗದಿಗೆಪ್ಪಗೋಳ ಇದ್ದರು. ನಿರಂತರ ದಾಸೋಹವೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT