ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಹೆದ್ದಾರಿಯಲ್ಲಿ ದರೋಡೆ: ಆರೋಪಿಗಳ ಬಂಧನ

ವಿಜಯಪುರ ಜಿಲ್ಲಾ ಪೊಲೀಸರ ಬಲೆಗೆ ಬಿದ್ದ ಸೈಬರ್ ವಂಚಕರು
Published 22 ಮೇ 2024, 16:03 IST
Last Updated 22 ಮೇ 2024, 16:03 IST
ಅಕ್ಷರ ಗಾತ್ರ

ವಿಜಯಪುರ: ಕೊಲ್ಹಾರ ಪಟ್ಟಣದ ಉಪ್ಪಲದಿನ್ನಿ ಕ್ರಾಸ್‌ ಹತ್ತಿರ ಕ್ಯಾಂಟರ್‌ ಅಡ್ಡಗಟ್ಟಿ ಅದರಲ್ಲಿದ್ದವರಿಗೆ ಹಲ್ಲೆ ಮಾಡಿ, ₹ 32,29,364 ದೋಚಿಕೊಂಡು ಹೋಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೃತ್ಯದಲ್ಲಿ ಶಾಮೀಲಾಗಿದ್ದ ಕ್ಯಾಂಟರ್ ಚಾಲಕ, ಆಲಮೇಲ ತಾಲ್ಲೂಕಿನ ಕೊರಳ್ಳಿಯ ಮಹಾಂತೇಶ ತಳವಾರ (35), ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರದ ಧರೇಶ ದಳವಾಯಿ (21), ಸುನೀಲ ವಡ್ಡರ (21), ಶಿವಾನಂದ ದಳವಾಯಿ (21) ಹಾಗೂ ಸಿಂದಗಿ ತಾಲ್ಲೂಕಿನ ವಿಭೂತಿಹಳ್ಳಿಯ ಶಿವಪ್ಪ ಮಾಶ್ಯಾಳ (39) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ ₹ 31,04,364 ವಶಪಡಿಸಿಕೊಳ್ಳಲಾಗಿದೆ ಎಂದರು.

ಜೇವರ್ಗಿಯ ಚಂದ್ರಕಾಂತ ಕುಂಬಾರ ಅವರಿಗೆ ಸಂಬಂಧಿಸಿದ ಹತ್ತಿಯನ್ನು ಧಾರವಾಡ ಜಿಲ್ಲೆಯ ಅಮೀನಬಾವಿಯಲ್ಲಿರುವ ಅನಿಲಕುಮಾರ ಅಂಡ್‌ ಕಂಪನಿಗೆ ಮಾರಾಟ ಮಾಡಿ, ₹ 32,29,364 ಅನ್ನು ಮೇ 17 ರಂದು ರಾತ್ರಿ ಕ್ಯಾಂಟರ್‌ನಲ್ಲಿ ಜೇವರ್ಗಿಗೆ ತಗೆದುಕೊಂಡು ಹೋಗುವಾಗ, ದುಷ್ಕರ್ಮಿಗಳು ಬುಲೆರೊ ಪಿಕ್ಅಪ್ ಗೂಡ್ಸ್‌ ವಾಹನದಲ್ಲಿ ಬಂದು ಕ್ಯಾಂಟರ್ ಅಡ್ಡಗಟ್ಟಿ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ಹೇಳಿದರು.

ಕೃತ್ಯದಲ್ಲಿ ಕ್ಯಾಂಟರ್ ಚಾಲಕ ಮಹಾಂತೇಶ ತಳವಾರನ ಕೈವಾಡ ಇರುವುದು ಸ್ಪಷ್ಟವಾದ ಬಳಿಕ ಆತನ ಮಾಹಿತಿಯ ಮೇರೆಗೆ ಇನ್ನುಳಿದ 4 ಆರೋಪಿಗಳನ್ನು ಬಂಧಿಸಲಾಯಿತು ಎಂದು ತಿಳಿಸಿದರು.

ಅಂತರ ರಾಜ್ಯ ಸೈಬರ್ ವಂಚಕರ ಬಂಧನ

ವಿಜಯಪುರ ನಗರದ ಡಾ.ಅನಿರುದ್ಧ ಉಮರ್ಜಿ ಅವರಿಗೆ ಆನ್‌ಲೈನ್ ಮೂಲಕ ಮೋಸ ಮಾಡಿ ₹ 54 ಲಕ್ಷ ವಂಚಿಸಿದ ಪ್ರಕರಣ ಹಾಗೂ ಮಕಣಾಪುರ ಎಲ್.ಟಿ ನಂ- 1ರ ನಿವಾಸಿ ಬಬನ್ ಚವ್ಹಾಣಗೆ ಪಾರ್ಟ್‌ ಟೈಮ್‌ ಕೆಲಸ ಕೊಡಿಸುವುದಾಗಿ ಹೇಳಿ ₹ 1477135 ಹಣವನ್ನು ತಮ್ಮ ಅಕೌಂಟ್‌ಗೆ ಹಾಕಿಸಿಕೊಂಡು ಆನ್‌ಲೈನ್ ಮೂಲಕ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಂತರರಾಜ್ಯ ಸೈಬರ್‌ ವಂಚಕರನ್ನು ವಿಜಯಪುರ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿರುವುದಾಗಿ ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದರು. ಹರಿಯಾಣದ ರಾಜೀವ್‌ ವಾಲಿಯಾ ರಾಜಸ್ಥಾನದ ರಾಕೇಶ್‌ ಕುಮಾರ್‌ ಟೈಲರ್‌ ಕರಣ್‌ ಯಾದವ್‌ ಮತ್ತು ಸುರೇಂದ್ರ ಸಿಂಗ್‌ ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಿಸಿದ ವಿವಿಧ ಕಂಪನಿಯ 9 ಮೊಬೈಲ್‌ 7 ಸಿಮ್ ಕಾರ್ಡ್‌ 1 ಟ್ಯಾಬ್ ವಶಪಡಿಸಿಕೊಂಡು ಆಪಾದಿತರ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಲಾಗಿದೆ ಎಂದರು. ಈ ಎರಡು ಪ್ರಕರಣದಲ್ಲಿ ಒಟ್ಟು ₹ 6877135 ವಂಚನೆ ಆಗಿದ್ದು ಈ ಪೈಕಿ ಈಗಾಗಲೇ ₹ 40 ಲಕ್ಷವನ್ನು ಸಂಬಂಧಿಸಿದವರಿಗೆ ಪಾವತಿಸಲಾಗಿದೆ ಎಂದರು. ಈ ಆರೋಪಿಗಳು ದೇಶಾದ್ಯಂತ ಒಟ್ಟು 502 ಜನರಿಗೆ ವಂಚನೆ ಮಾಡಿದ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ ಎಂದರು. ಆರೋಪಿತರು ಅನಾಮಧೇಯ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು 170 ಖಾತೆಗಳನ್ನು ತೆರೆದು ಜನರಿಗೆ ವಂಚನೆ ಮಾಡಿದ ಬಗ್ಗೆ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ತಿಳಿಸಿದರು. ಆರೋಪಿತರು ಅನಾಮಧೇಯರ ಹೆಸರಿನಲ್ಲಿ ವಿವಿಧ ಕಂಪನಿಯ 120 ಸಿಮ್‌ಗಳನ್ನು ಉಪಯೋಗ ಮಾಡಿದ ಬಗ್ಗೆ ತನಿಖೆಯಲ್ಲಿ ಕಂಡುಬಂದಿದೆ ಎಂದರು. 

50 ಮೊಬೈಲ್‌ಗಳು ಪತ್ತೆ

ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಆಕಸ್ಮಿಕವಾಗಿ ಕಳೆದುಕೊಂಡ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ವೈಬ್‌ಸೈಟ್‌ ಮುಖಾಂತರ ಪತ್ತೆ ಹಚ್ಚಲಾಗಿದೆ ಎಂದು ಎಸ್‌ಪಿ ಸೋನಾವಣೆ ತಿಳಿಸಿದರು. 23 ವಿವೋ 5 ರೆಡ್‌ಮಿ 5 ಸ್ಯಾಮ್‌ಸಾಂಗ್‌ 5 ಒನ್ ಪ್ಲಸ್ 1 ಎಲ್‌ಜಿ 8 ಓಪೋ 1 ರಿಯಲ್‌ಮಿ 1 ಪೋಕೋ 1 ಐಪೋನ್ ಕಂಪನಿಗೆ ಸೇರಿದ ₹ 10.73 ಲಕ್ಷ ಮೌಲ್ಯದ ಒಟ್ಟು 50 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ ಎಂದರು.

ಭೂ ಹಗರಣ: ಆರೋಪಿಗಳ ಬಂಧನ

ವಿಜಯಪುರ ಜಿಲ್ಲೆಯ ಬಾಬಾನಗರ ಗ್ರಾಮದ ನಿವಾಸಿ ಸಾಹೇಬಗೌಡ ರುದ್ರಗೌಡಗೆ ಭೂಮಿ ಕೊಡಿಸುವ ನೆಪದಲ್ಲಿ ಜಮೀನಿನ ಖೊಟ್ಟಿ ಕಾಗದ ಪತ್ರ ನೀಡಿ ₹46.50 ಲಕ್ಷ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಿಇಎನ್‌ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್‌ಪಿ ಋಷಿಕೇಶ ತಿಳಿಸಿದರು. ಆರೋಪಿಗಳಾದ ರಾಜು ಮಾನೆ ದಯಾನಂದ ಸಂಗಮ ಕಿರಣ ಬೇಡೆಕರ ದಶರಥ ಹೊಸಮನಿ ದತ್ತಾತ್ರೇಯ ಶಿವಶರಣ ಶಾಕೀಫ್ ನಂದವಾಡಗಿ ಹಾಗೂ ಇಬ್ಬರು ಮಹಿಳೆಯರು ಸೇರಿಕೊಂಡು ತಿಕೋಟಾ ತಾಲ್ಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ವೆಯಲ್ಲಿ ಬರುವ ರಿ.ಸ.ನಂಬರ್‌ 48/1ರಲ್ಲಿ 20 ಎಕರೆ ಜಮೀನನ್ನು ಮಾಲೀಕನಾದ ಅರ್ಗನ್ ಅಲಿಯಾಸ್‌ ಅಗನು ಕಾಳೆ ಈತನ ಹೆಸರಿನಲ್ಲಿ ಖೊಟ್ಟಿ ಆಧಾರ್‌ ಮತ್ತು ಪಾನ್ ಕಾರ್ಡ ಅನ್ನು ಸೃಷ್ಟಿ ಮಾಡಿಕೊಂಡು ಅವುಗಳನ್ನು ಖರೀದಿ ಪತ್ರದಲ್ಲಿ ಖೊಟ್ಟಿ ರೀತಿಯಿಂದ ನಮೂದು ಮಾಡಿ ಖರೀದಿ ಪತ್ರ ತಯಾರು ಮಾಡಿಕೊಂಡು ರುದ್ರಗೌಡರ ಕಡೆಯಿಂದ ₹ 46.50 ಲಕ್ಷ ಪಡೆದುಕೊಂಡು ವಂಚನೆ ಮಾಡಿ ಮೋಸದಿಂದ ಜಮೀನು ಖರೀದಿ ಹಾಕಿಕೊಟ್ಟಿದ್ದರು ಎಂದು ಹೇಳಿದರು. ಈ ಸಂಬಂಧ ನೇಮಿಸಲಾದ ತನಿಖಾ ತಂಡವು ಭೂ ಹಗರಣ ಮಾಡಿದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಕೊಂಡು ವಂಚನೆ ಮಾಡಿದ ₹ 4650 ಲಕ್ಷ ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಕರಣದಲ್ಲಿ ನಕಲಿ ಆಧಾರ್‌ ಕಾರ್ಡ್‌ ಮತ್ತು  ಪಾನ್ ಕಾರ್ಡ್‌ ಸೃಷ್ಟಿ ಮಾಡಿದವರಿಗೆ ಪತ್ತೆ ಮಾಡಿ ವಿಚಾರಣೆ ಮಾಡುವ ಕೆಲಸ ನಡೆದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT