ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್ಐವಿ: ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ’

Last Updated 18 ಜೂನ್ 2020, 14:34 IST
ಅಕ್ಷರ ಗಾತ್ರ

ವಿಜಯಪುರ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಹಕಾರದೊಂದಿಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಎಚ್.ಐ.ವಿ ಕುರಿತು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಚ್.ಐ.ವಿ ಹಾಗೂ ಟಿ.ಬಿ ಕುರಿತ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಎಚ್.ಐ.ವಿ ಸಂಬಂಧಿತ ಕಳಂಕ ಮತ್ತು ತಾರತಮ್ಯ ದೂರ ಮಾಡುವ ನಿಟ್ಟಿನಲ್ಲಿ ಎಲ್ಲರು ಕಾರ್ಯ ನಿರ್ವಹಿಸಬೇಕು ಎಂದರು.

ಎಚ್.ಐ.ವಿ ಸೋಂಕಿತ ಹಾಗೂ ಬಾದಿತ ಮಕ್ಕಳಿಗೆ ವಿಶೇಷ ಪಾಲನಾ (ಕಾಬಾ) ಯೋಜನೆಯಡಿಯಲ್ಲಿ 18 ವರ್ಷ ವಯಸ್ಸಿನ ಮಕ್ಕಳಿಗೆ ವಿದ್ಯಾಬ್ಯಾಸ ಮತ್ತು ಪೌಷ್ಟಿಕ ಆಹಾರದ ನೆರವಿಗಾಗಿ ₹1 ಸಾವಿರ ಧನಸಹಾಯ ಎಲ್ಲರಿಗೂ ಸಿಗುವಂತಾಗಬೇಕು. ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆಯಿಂದ ಸ್ವಂತ ಸೂರಿಲ್ಲದ ಸೋಂಕಿತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುವಂತಾಗಬೇಕು ಎಂದರು.

ವಿವಿಧ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆಕೈಗಾರಿಕೆ ಇಲಾಖೆಯಿಂದ ಎಚ್.ಐ.ವಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಬೇಕು ಹಾಗೂ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಸೋಂಕಿಗೆ ಬಲಿಯಾಗದಂತೆ ಜಾಗೃತಿಗೊಳಿಸುವಂತಾಗಬೇಕು ಎಂದು ಹೇಳಿದರು.

ಕ್ಷಯ ರೋಗ ನಿರ್ಮೂಲನೆಗೆ ಶ್ರಮಿಸಿ

2025 ರೊಳಗೆ ದೇಶದಲ್ಲಿ ಕ್ಷಯರೋಗ ನಿರ್ಮುಲನೆ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಅವರು ‘ಟಿ.ಬಿ ಹಾರೇಗಾ ದೇಶ ಬಚೆಗಾ’ ಎಂಬ ಯೋಜನೆ ರೂಪಿಸಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕ್ಷಯ ರೋಗ ನಿರ್ಮೂಲನೆಗೆ ನಾವೆಲ್ಲರು ಶ್ರಮಿಸಬೇಕು ಹಾಗೂ ಜಿಲ್ಲೆಯನ್ನು ಕ್ಷಯ ಮುಕ್ತವನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಕ್ಷಯರೋಗಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ಕ್ಷ-ಕಿರಣ ಘಟಕವನ್ನು ಉಪಯೋಗ ಮಾಡಿಕೊಳ್ಳಲು ನಗರದ ಮುನೀರ ಭಾಂಗಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಲಾಗಿದ್ದು, ನಗರ ಪ್ರದೇಶದ ವೈದ್ಯಾಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪಸೆ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ.ಬಿರಾದಾರ, ಇದ್ದರು. ಜಿಲ್ಲಾ ಎಡ್ಸ್ ನಿಯಂತ್ರಣಾಧಿಕಾರಿ ಡಾ. ಧಾರವಾಡಕರ ಅವಶ್ಯಕ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT