ವಿಜಯಪುರ: ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ನಗರದ ಮನಗೂಳಿ ರಸ್ತೆಯಲ್ಲಿ ಇಬ್ರಾಹಿಂಪುರ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ ಒಂದು ವರ್ಷವಾದರೂ ಇನ್ನೂ ಮುಗಿಯುವ ಸೂಚನೆಗಳು ಕಂಡುಬರುತ್ತಿಲ್ಲ.
ಇಬ್ರಾಹಿಂಪುರ ರೈಲ್ವೆ ಗೇಟ್ ಮೇಲ್ಸೇತುವೆ(ಆರ್‌ಒಬಿ) ನಿರ್ಮಾಣ ಕಾಮಗಾರಿ ಆರಂಭವಾದ ಬಳಿಕ ಕಳೆದ ನವೆಂಬರ್‌ನಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಜನ, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಈ ಭಾಗದ ಜನರುನಗರಕ್ಕೆ ಬರಬೇಕೆಂದರೆ ಬೈಪಾಸ್ ಮೂಲಕ ಎರಡರಿಂದ ಮೂರು ಕಿ.ಮೀ. ಸುತ್ತುಹಾಕಿ ಬಾಗಲಕೋಟೆ ರಸ್ತೆ ಮೂಲಕವಾಗಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇಬ್ರಾಹಿಂಪುರ ಭಾಗದ ಅಂಗಡಿ, ಹೋಟೆಲ್ ವ್ಯಾಪಾರ, ವಹಿವಾಟು ಇಲ್ಲದೇ ಹಾಗೂಆಟೊ ಚಾಲಕರು ಪ್ರಯಾಣಿಕರಿಲ್ಲದೆ ತೀವ್ರ ನಷ್ಠ ಅನುಭವಿಸುತ್ತಿದ್ದಾರೆ.ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಿಂದ ಬೇಸಿಗೆಯಲ್ಲಿ ಏಳುತ್ತಿರುವ ಧೂಳು, ಮಳೆಗಾಲದಲ್ಲಿ ಉಂಟಾಗುತ್ತಿರುವ ಕೆಸರಿನಿಂದ ಇಲ್ಲಿಯ ಜನ ಜೀವನ, ಆರೋಗ್ಯವೇ ಏರುಪೇರಾಗಿದೆ.
ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ಬಸ್, ಆಟೊ ಸಂಚಾರ ಬಂದ್ ಆಗಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ರಾಧಾಕೃಷ್ಣ ನಗರ, ಶಾಂತವೀರನಗರ, ನಂದಿನಿ ಬಡಾವಣೆ, ಗುರುಪಾದೇಶ್ವರ ನಗರ, ಗಣೇಶನಗರ, ಲಕ್ಷ್ಮಿನಗರ, ತ್ರಿಮೂರ್ತಿ ನಗರದ ಸಾವಿರಾರು ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಇಬ್ರಾಹಿಂಪುರ ರೈಲ್ವೆ ಹಳಿಯಲ್ಲಿ ಜನ, ವಾಹನ ಸಂಚಾರ ತಡೆಗಾಗಿ ಸದ್ಯ ಗೇಟ್ ಸಂಪೂರ್ಣ ಬಂದ್ ಮಾಡಿದ್ದರೂ ಸಹ ಸಾರ್ವಜನಿಕರು ಗೇಟ್‌ನಲ್ಲೆ ನುಸುಳಿಕೊಂಡು ನಗರಕ್ಕೆ ಬರುತ್ತಿದ್ದಾರೆ.
ಇಬ್ರಾಹಿಂಪುರ ಮಾರ್ಗ ಬಂದ್ ಆದ ಬಳಿಕ ಸಾರ್ಜವನಿಕರು ಮತ್ತು ವಾಹನಗಳು ಬಾಗಲಕೋಟೆ ಮಾರ್ಗವಾಗಿ ನಗರಕ್ಕೆ ಬರಬೇಕಾಗಿರುವುದರಿಂದ ಇಲ್ಲಿನ ವಜ್ರಹನುಮಾನ್ ರೈಲ್ವೆ ಗೇಟ್ ಬಳಿ ವಾಹನ ದಟ್ಟಣೆ ಅಧಿಕವಾಗಿದೆ. ರೈಲು ಬರುವ ವೇಳೆ ಗೇಟ್ ಬಂದ್ ಮಾಡುವುದರಿಂದ ಅರ್ಧ ತಾಸು ವಾಹನಗಳು ಎರಡೂ ಕಡೆ ಉದ್ದನೆಯ ಸಾಲಿನಲ್ಲಿ ನಿಲ್ಲುತ್ತವೆ. ರೈಲುಗಳ ಸಂಚಾರ ಅಧಿಕ ಇರುವುದರಿಂದ ಆಗಾಗ ಗೇಟ್ ಬಂದ್ ಮಾಡುವುದರಿಂದ ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ.
***
ಆರ್‌ಒಬಿ ಡಿಸೆಂಬರ್‌ಗೆ ಪೂರ್ಣ ನಿರೀಕ್ಷೆ
ವಿಜಯಪುರ: ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಯ ವೆಚ್ಚ ಹಂಚಿಕೆ ಆಧಾರದ ಮೇಲೆ ನಗರದ ಮನಗೂಳಿ ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಮೇಲ್ಸೇತುವೆ(ಆರ್‌ಒಬಿ)ಯನ್ನು ₹ 23 ಕೋಟಿ ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಈ ರೈಲ್ವೆ ಮೇಲ್ಸೇತುವೆಯನ್ನು ಎಂ.ವಿ.ಕನ್‌ಸ್ಟ್ರಕ್ಷನ್ ನಿರ್ಮಿಸುತ್ತಿದೆ. ಒಟ್ಟು 700 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲ ಇರುವದ್ವಿಪಥವನ್ನು ಒಳಗೊಂಡಿದೆ.
ಆರಂಭದಲ್ಲಿ ಆರ್‌ಇ ಫೆನಲ್ ಅಳವಡಿಸಿ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜಿಸಲಾಗಿತ್ತು. ಬಳಿಕ ವಿನ್ಯಾಸವನ್ನು ಪರಿಷ್ಕರಿಸಿ, ಒಪನ್ ಸ್ಟ್ಯಾನ್ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ವಿನ್ಯಾಸದಲ್ಲಿ ಬದಲಾವಣೆಯಾದ ಕಾರಣ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಜೊತೆಗೆ ರೈಲ್ವೆ ಅಧಿಕಾರಿಗಳು, ಎಂಜಿನಿಯರ್ಸ್, ಜನಪ್ರತಿನಿಧಿಗಳ ಕಮಿಷನ್ ಹಾವಳಿಯಿಂದ ಬೇಸತ್ತ ಗುತ್ತಿಗೆದಾರ ಅರ್ಧದಲ್ಲೇ ಕಾಮಗಾರಿ ಬಿಟ್ಟು ಹೋಗಿದ್ದರು. ಇದೀಗ ಮತ್ತೆ ಕಾಮಗಾರಿ ಭರದಿಂದ ಸಾಗಿದೆ.
***
ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿರುವುದರಿಂದ ಸಾರ್ವಜನಿಕ ಸಂಚಾರಕ್ಕಾಗಿ ಸಮಸ್ಯೆಯಾಗುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು, ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸೂಚಿಸಿದ್ದೇನೆ
ರಮೇಶ ಜಿಗಜಿಣಗಿ,ಸಂಸದ
***
ಕೋವಿಡ್ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಸಮಸ್ಯೆ ಎದುರಾದ ಕಾರಣ ರೈಲ್ವೆ ಮೇಲ್ಸೇತುವೆ ನಿರ್ಮಾಣ ವಿಳಂಬವಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು
ಅನೀಶ್ ಹೆಗಡೆ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈರುತ್ಯ ರೈಲ್ವೆ, ಹುಬ್ಬಳ್ಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.