ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಗುಳೇ ತಡೆಗೆ ‘ದುಡಿಯೋಣ ಬಾ’ ಅಭಿಯಾನ

ಜಿಲ್ಲಾ ಪಂಚಾಯ್ತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣರ ಕೈಗೆ ಕೆಲಸ
Last Updated 31 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆಯಲ್ಲಿ ಕೆಲಸ ಅರಸಿ ದೂರದ ನಗರ, ಪಟ್ಟಣಗಳಿಗೆ ಗುಳೇ ಹೋಗುವ ಜಿಲ್ಲೆಯ ಕೂಲಿಕಾರರಿಗೆ ಅವರ ಹಳ್ಳಿಯಲ್ಲೇ ಕೂಲಿ ಕೆಲಸ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯ್ತಿಯಿಂದ ‘ದುಡಿಯೋಣ ಬಾ’ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ‘ದುಡಿಯೋಣ ಬಾ’ ವಿಶೇಷ ಅಭಿಯಾನ ಏಪ್ರಿಲ್‌ 1ರಿಂದ ಆರಂಭವಾಗಲಿದೆ.

ದುಡಿಯೋಣ ಬಾ ಅಭಿಯಾನದಡಿ ಒಂದು ಕುಟುಂಬವು ವರ್ಷದಲ್ಲಿ 100 ದಿನಗಳ ಕೆಲಸ ಮಾಡಲು ಅವಕಾಶ ಇರುತ್ತದೆ. ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ಮಾಡಿದಲ್ಲಿ ₹16,500 ಗಳಿಸಬಹುದು ಮತ್ತು ಇದರಿಂದ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ ಖರೀದಿ, ಮಕ್ಕಳ ಶಾಲೆ ಮತ್ತು ಕಾಲೇಜು ಶುಲ್ಕ ಭರಿಸಲು ಅನುಕೂಲವಾಗುತ್ತದೆ ಎಂದುಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿಯಾನದ ಅಂಗವಾಗಿ ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಯೋಜನೆಯ ಮಾಹಿತಿ ಒಳಗೊಂಡ ಕರಪತ್ರ, ಪೋಸ್ಟರ್‌ಗಳನ್ನು ಹಂಚುವ ಮೂಲಕ ಜನ ಜಾಗೃತಿ ಮೂಡಿಸಲಾಗಿದೆ ಹಾಗೂಉದ್ಯೋಗ ಚೀಟಿಗಾಗಿ ಅರ್ಜಿ ಸಲ್ಲಿಸಿದ1255 ಜನರಿಗೆಉದ್ಯೋಗ ಚೀಟಿಯನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಅಭಿಯಾನದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನುಗಳಲ್ಲಿ ಬದು ಅಥವಾ ಕೃಷಿ ಹೊಂಡ ಅಥವಾ ತೆರೆದ ಬಾವಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು ಎಂದರು.

ಪ್ರತಿ ಗ್ರಾಮ ಪಂಚಾಯ್ತಿಗೆ ಕನಿಷ್ಠ 50 ಇಂಗು ಗುಂಡಿ (ಸೋಕ್‌ ಪಿಟ್) ನಿರ್ಮಾಣ, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಸ್ತೆ ಬದಿ ನೆಡುತೋಪು, ಬ್ಲಾಕ್‌ ಪ್ಲಾಂಟೇಶನ್‌, ಕೃಷಿ ಅರಣ್ಯೀಕರ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲ ಮುಂಗಡ ಗುಂಡಿ ತೆಗೆಯುವ ಕಾಮಗಾರಿ ಹಾಗೂ ಕೊಳವೆ ಬಾವಿ ರಿಚಾರ್ಜ್‌ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದರು.

ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ಒದಗಿಸಲು ಈಗಾಗಲೇ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತ ಮಂಜೂರಾತಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಕೆ ಮತ್ತು ಜಿಯೋ ಟ್ಯಾಗ್‌ ಸೇರಿದಂತೆ ಕಾಮಗಾರಿ ಪ್ರಾರಂಭಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಏಪ್ರಿಲ್‌ 1ರಿಂದ ದುಡಿಯೋಣ ಬಾ ಅಭಿಯಾನದ ಅಡಿಯಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು, ಜೂನ್‌ 15ರ ವರೆಗೆ ನಡೆಯಲಿದೆ ಎಂದು ಹೇಳಿದರು.

ಅಭಿಯಾನದ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಅಗತ್ಯವಿರುವೆಡೆ ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

***

ಗ್ರಾಮೀಣ ಪ್ರದೇಶದ ಜನರು ಜೀವನ ನಿರ್ವಹಣೆಗಾಗಿ ಗುಳೇ ಹೋಗುವ ಪ್ರವೃತ್ತಿಯನ್ನು ಅವಲಂಭಿಸಿವೆ. ಈ ಗುಳೇ ಹೋಗುವುದನ್ನು ತಡೆಯಲು ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

- ಗೋವಿಂದ ರೆಡ್ಡಿ, ಸಿಇಒ,ಜಿಲ್ಲಾ ಪಂಚಾಯ್ತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT