ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: ಅಧಿಕ ಆದಾಯ ತಂದ ಲಿಂಬೆ, ದಾಳಿಂಬೆ

ಅರ್ಜನಾಳದ ಪ್ರಗತಿಪರ ರೈತ ಶಿವಯೋಗಿ ಬಿರಾದಾರ ಕೃಷಿ ಯಶೋಗಾಧೆ
Published 29 ಸೆಪ್ಟೆಂಬರ್ 2023, 7:45 IST
Last Updated 29 ಸೆಪ್ಟೆಂಬರ್ 2023, 7:45 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಅರ್ಜನಾಳ ಗ್ರಾಮದ ಶಿವಯೋಗಿ ಬಿರಾದಾರ ಅವರ 20 ಎಕರೆ ಜಮೀನಿನಲ್ಲಿ 4 ಎಕರೆಯಲ್ಲಿ 350 ಲಿಂಬೆ ಗಿಡ, 10 ಎಕರೆಯಲ್ಲಿ ದಾಳಿಂಬೆ, 2 ಎಕರೆಯಲ್ಲಿ ಕೃಷಿ ಹೊಂಡ, ಇನ್ನೆರಡು ಎಕರೆಯಲ್ಲಿ ಮನೆಗೆ ಅಗತ್ಯವಿರುವ ಜೋಳ, ಗೋಧಿ, ಶೇಂಗಾ ಮತ್ತು ತೊಗರಿ ಬೆಳೆ ಬೆಳೆಯುತ್ತಾರೆ. ಕೃಷಿಗೆ ಆದ ಖರ್ಚು, ವೆಚ್ಚ ತೆಗೆದು ಪ್ರತಿ ತಿಂಗಳಿಗೆ ಕನಿಷ್ಠ ₹3 ಲಕ್ಷ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಸ್ವಂತ ಜಮೀನಿನಲ್ಲಿ ಒಂದು ಹನಿ ನೀರಿಲ್ಲ. ಎಲ್ಲವೂ ಎರಡು ಎಕರೆಯಲ್ಲಿ ಮಾಡಿರುವ ಕೃಷಿ ಹೊಂಡದಿಂದಲೇ ನೀರುಣಿಸಲಾಗುತ್ತದೆ. ಅವರ ಕೃಷಿ ಹೊಂಡದಲ್ಲಿ 1.75 ಕೋಟಿ ಲೀಟರ್ ನೀರು ಸಂಗ್ರಹವಾಗುತ್ತದೆ. ಪ್ರತಿ ವರ್ಷ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಜಮೀನಿನ ಸಮೀಪ ಹರಿದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ನೀರು ತುಂಬಿಕೊಳ್ಳುತ್ತಾರೆ. ಈ ನೀರು ಬೇಸಿಗೆ ಮುಗಿಯುವವರೆಗೆ ಸಾಕಾಗುತ್ತದೆ.

‘ಕಳೆದ 30 ವರ್ಷಗಳಿಂದ ದಾಳಿಂಬೆ ಬೆಳೆ ಬೆಳೆಯುತ್ತಿದ್ದು, ದಾಳಿಂಬೆಗೆ ಸಾಮಾನ್ಯವಾಗಿ ತಗಲುವ ಕ್ಯಾರ್ ರೋಗ ಬರದಂತೆ ತಡೆಯುವುದೇ ಜಾಣತನವಾಗಿದ್ದು, ಆ ಕೆಲಸ ಚಾಚೂ ತಪ್ಪದೇ ಮಾಡುತ್ತೇವೆ. ಅದಕ್ಕಾಗಿಯೇ ಅಂದಾಜಿಸಿದಷ್ಟು ಆದಾಯ ಬರುತ್ತದೆ’ ಎನ್ನುತ್ತಾರೆ ರೈತ ಶಿವಯೋಗಿ ಬಿರಾದಾರ.

‘ಬೆಳೆಗಳಿಗೆ ಅಗತ್ಯವಾಗಿರುವ ಸಾವಯವ ಗೊಬ್ಬರ ತಯಾರಿಕೆಗಾಗಿ 12 ಜಾನುವಾರು, 20 ಆಡುಗಳನ್ನು ಸಾಕಿದ್ದೇವೆ. 4 ಗೊಬ್ಬರ ಟ್ಯಾಂಕ್‌ಗಳನ್ನು ಸಿದ್ದಗೊಳಿಸಿದ್ದು, ಅದರಲ್ಲಿ 16 ಪೋಷಕಾಂಶಗಳಿರುವ ಸಾವಯವ ಗೊಬ್ಬರ ಸಿದ್ದಗೊಳಿಸುತ್ತೇವೆ. ಈ ಗೊಬ್ಬರ ಮತ್ತು ಔಷಧವನ್ನು ಲಿಂಬೆ ಮತ್ತು ದಾಳಿಂಬೆ ಬೆಳೆಗಳಿಗೆ ನೇರವಾಗಿ ಡ್ರಿಪ್ ಮೂಲಕ ಹರಿಸಲಾಗುವುದು’ ಎಂದು ತಿಳಿಸಿದರು.

‘ದಾಳಿಂಬೆ ಕಟಾವಿಗೆ ಬಂದಾಗ ಮಾತ್ರ ಅಗತ್ಯಕ್ಕೆ ತಕ್ಕಂತೆ ಕೆಲಸಗಾರರನ್ನು ತೆಗೆದುಕೊಳ್ಳಲಾಗುವುದು. ಕಾಟಾವು ಮಾಡಿದ ದಾಳಿಂಬೆಯನ್ನು ಪುಣೆ ಮಾರುಕಟ್ಟೆಗೆ ಕಳಿಸುತ್ತೇವೆ. ಅಲ್ಲಿ ಒಂದು ಕೆ.ಜಿಗೆ ₹ 110 ರಿಂದ ₹350ರಂತe ಮಾರಾಟವಾಗುತ್ತದೆ. ನಿಂಬೆ ಬೆಳೆಯೂ ಕೂಡಾ ಲಾಭದಲ್ಲಿದೆ. ಅವುಗಳಿಗೆ ಎರೆಹುಳು ಗೊಬ್ಬರ ನೀಡಿದರೆ ಚನ್ನಾಗಿ ಇಳುವರಿ ಬರುತ್ತದೆ’ ಎಂದು ಬಿರಾದಾರ ವಿವರಿಸಿದರು.

ರೈತ ಶಿವಯೋಗಿ ಬಿರಾದಾರ ಅವರು ಆಗಾಗ ಧಾರವಾಡ, ಕಲಬುರಗಿ ಆಕಾಶವಾಣಿಯಲ್ಲಿ ತಮ್ಮ ಕೃಷಿಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪ್ರಶಸ್ತಿಯೂ ಲಭಿಸಿದೆ.

ನಿಂಬೆ, ದಾಳಿಂಬೆ ಬೆಳೆಗಳ ನಿರ್ವಹಣೆಗೆ ಸಲಹೆಗಳನ್ನು ಅರಸಿ ತಮ್ಮ ಜಮೀನಿಗೆ ಬರುವ ರೈತರಿಗೆ ಉಚಿತವಾಗಿ ಸಲಹೆಗಳನ್ನು ನೀಡುವುದಲ್ಲದೇ ಮಾರಾಟದ ತಂತ್ರಗಾರಿಕೆಯನ್ನು ತಿಳಿಸಿಕೊಡುತ್ತಾರೆ.

ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ತೋಟದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳು
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ತೋಟದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳು
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ಹೊಲದಲ್ಲಿರುವ ಬೃಹತ್‌ ಕೃಷಿ ಹೊಂಡ
ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದ  ರೈತ ಶಿವಯೋಗಿ ಬಿರಾದಾರ ಅವರ ಹೊಲದಲ್ಲಿರುವ ಬೃಹತ್‌ ಕೃಷಿ ಹೊಂಡ
ಹಣ್ಣಿನ ಬೆಳೆ ಬೆಳೆಯಲು ರೈತರಿಗೆ ಜೀವಶಾಸ್ತ್ರ ರಸಾಯನಶಾಸ್ತ್ರಗಳ ಕನಿಷ್ಠ ತಿಳಿವಳಿಕೆ ಬೇಕು ಸಾವಯವ ಗೊಬ್ಬರಕ್ಕಾಗಿ ಜಾನುವಾರು ಮತ್ತು ಕುರಿಗಳ ಸಾಕಾಣಿಕೆ ಅಗತ್ಯವಿದೆ
-ಶಿವಯೋಗಿ ಬಿರಾದಾರ ಪ್ರಗತಿಪರ ರೈತ
ದಾಳಿಂಬೆ ಮತ್ತು ನಿಂಬೆ ಬೆಳೆಗಳ ಬಗ್ಗೆ ಒಬ್ಬ ವಿಜ್ಞಾನಿಗೆ ತಿಳಿದಿರುವಷ್ಟು ಜ್ಞಾನ ಶಿವಯೋಗಿ ಬಿರಾದಾರ ಅವರಿಗೆ ತಿಳಿದಿದೆ. ಅವರು ಲಿಂಬೆ ದಾಳಿಂಬೆ ಬೆಳೆಯುವ ರೈತರಿಗೆ ಮಾದರಿಯಾಗಿದ್ದಾರೆ
-ಮಹಾದೇವಪ್ಪ ಏವೂರ ಸಹಾಯಕ ಕೃಷಿ ನಿರ್ದೇಶಕ ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT