ಶುಕ್ರವಾರ, ಮೇ 20, 2022
26 °C
ಸಾಮಾಜಿಕ ಹೋರಾಟಗಾರರ ಎಸ್.ಆರ್. ಹಿರೇಮಠ

ಕೃಷಿ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ:  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಜನಜಾಗೃತಿ ಜಾಥಾ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರರ ಎಸ್.ಆರ್. ಹಿರೇಮಠ ಒತ್ತಾಯಿಸಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನವಿರೋಧಿ ಕಾಯ್ದೆಗಳ ವಿರುದ್ಧ ಜನಾಂದೋಲನ ಮಹಾಮೈತ್ರಿ ಹಾಗೂ ಪ್ರಗತಿಪರ ಸಂಘಟನೆಗಳ ವೇದಿಕೆಯಿಂದ ಫೆಬ್ರುವರಿ ಕೊನೆಯ ವಾರದಲ್ಲಿ ಬೀದರ್‌ನ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು ಎಂದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಗಳು ರೈತರ ಪಾಲಿಗೆ ಕರಾಳವಾಗಿವೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಈ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಮಾಜ ಸುಧಾರಕರ ಸ್ತಬ್ಧಚಿತ್ರಗಳನ್ನೊಳಗೊಂಡ ವಾಹನದಲ್ಲಿ ಜನ ಜಾಗೃತಿ ಜಾಥಾ ನಡೆಯಲಿದೆ. ಮಾರ್ಗದುದ್ದಕ್ಕೂ ಸ್ಥಳೀಯರ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬೆಂಗಳೂರು ತಲುಪಿ, ಧರಣಿ ನಡೆಸಲಾಗುವುದು. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಮುಖ್ಯಮಂತ್ರಿ ನಿವಾಸದ ಎದುರು ಮೌನ ಪ್ರತಿಭಟನೆ ನಡೆಸಲಾಗುವುದು  ಎಂದರು.

ಇಂದಿನ ಸರ್ಕಾರಗಳು ನಿರಂತರವಾಗಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ ಮತ್ತು ವ್ಯವಸ್ಥಿತವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇವುಗಳ ವಿರುದ್ಧ ಪ್ರತಿ ಜಿಲ್ಲೆಯಲ್ಲಿ ನಾಗರಿಕರ ವೇದಿಕೆಗಳನ್ನು ಮಾಡಿಕೊಂಡು ಪ್ರತಿಭಟನೆ ಮತ್ತು ಚಳವಳಿಗಳನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.

ಪ್ರಗತಿಪರ ಸಂಘಟನೆಯ ಮುಖಂಡರಾದ ಶ್ರೀನಾಥ ಪೂಜಾರಿ, ಅಕ್ರಂ ಮಾಶ್ಯಾಳಕರ್, ಸದಾನಂದ ಮೋದಿ, ಸಿದ್ಧಲಿಂಗ ಬಾಗೇವಾಡಿ, ಇರ್ಫಾನ್ ಶೇಖ್, ನಿರ್ಮಲಾ ಹೊಸಮನಿ, ರಿಜ್ವಾನ್, ಅಕ್ಷಯಕುಮಾರ, ಅಬೂಬಕರ್, ಅಬ್ದುಲ್ ಹಮೀದ್ ಇನಾಂಮದಾರ ಮುಂತಾದವರು ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.