ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಸಿದ್ಧೇಶ್ವರ ಜಾತ್ರೆಯಲ್ಲಿ ಜಟ್ಟಿಗಳ ಶಕ್ತಿ ಪ್ರದರ್ಶನ

ಆನಂದ ರಾಠೋಡ
Published 18 ಜನವರಿ 2024, 4:41 IST
Last Updated 18 ಜನವರಿ 2024, 4:41 IST
ಅಕ್ಷರ ಗಾತ್ರ

ವಿಜಯಪುರ: ಅಖಾಡಕ್ಕೆ ಇಳಿದವರೆಲ್ಲ ಒಬ್ಬರಿಗಿಂತ ‌ಮತ್ತೊಬ್ಬರು ಬಲಶಾಲಿ, ನೂರಾರು ಕೆ.ಜಿ ಭಾರದ ಕಲ್ಲು ಇವರಿಗೆ ಹೂವು ಎತ್ತುವಷ್ಟೇ ಸುಲಭ. ಚೀಲ ಎತ್ತುವುದು, ಹಲ್ಲಿನಿಂದ ಹಾರಿ ಎತ್ತುವುದು, ಮೀಸೆಯಿಂದ ಭಾರ ಎತ್ತುವುದೆಲ್ಲವೂ ಅವರಿಗೆ ಮಕ್ಕಳಾಟದಷ್ಟೇ ಸಲೀಸು.

ಇಂಥ ನೋಟ ಕಂಡು ಬಂದಿದ್ದು ನಗರದ ಸಿದ್ಧೇಶ್ವರ ಸಂಕ್ರಮಣ ಜಾತ್ರಾಮಹೋತ್ಸವ ಅಂಗವಾಗಿ ಬುಧವಾರ ಸಿದ್ಧೇಶ್ವರ ದೇವಸ್ಥಾನ ಆವರಣದ ಸಿದ್ಧಸಿರಿ ಸೌಹಾರ್ದ ಬ್ಯಾಂಕ್‌ ಎದುರು ಏರ್ಪಡಿಸಿದ್ದ ಭಾರ ಎತ್ತುವ ಸ್ಪರ್ಧೆಯಲ್ಲಿ.

ವಿವಿಧ ವಿಭಾಗದ ಭಾರ ಎತ್ತುವ ಸ್ಪರ್ಧೆಗಳು ಆರಂಭಗೊಂಡ ಕ್ಷಣದಿಂದ ಮುಕ್ತಾಯದ ಹಂತದವರೆಗೂ ಸ್ಪರ್ಧೆ ನಡೆಯುತ್ತಿದ್ದ ಸುತ್ತಮುತ್ತಲಿನ ಸ್ಥಳದಲ್ಲಿ ಕಾಲಿಡಲು ಅವಕಾಶವಿರಲಿಲ್ಲ. ಸ್ಪರ್ಧೆಗಳನ್ನು ವೀಕ್ಷಿಸಲು ನೆರೆದಿದ್ದ ಜನರನ್ನು ನಿಯಂತ್ರಿಸುವಲ್ಲಿ ಸಮಿತಿ ಪದಾಧಿಕಾರಿಗಳು, ಪೊಲೀಸರು ಹೈರಾಣಾದರೂ ನೋಡುಗರ ಉತ್ಸಾಹ ಕಡಿಮೆಯಾಗಲಿಲ್ಲ.

ಹಿಂಭಾಗದಲ್ಲಿ ನಿಂತಿದ್ದವರು ಮುಂದೆ ನಿಂತವರ ಮೇಲೆ ಸಣ್ಣ ಕಲ್ಲುಗಳನ್ನು ಎಸೆದು ಪಕ್ಕಕ್ಕೆ ಸರಿಯುವಂತೆ ತಾಕೀತು ಮಾಡುತ್ತಿದ್ದರು. ಇನ್ನು ಕೆಲವರು ಇಕ್ಕಟ್ಟಾದರು ಪರವಾಗಿಲ್ಲ ಎನ್ನುತ್ತಲೇ ಅಖಾಡಕ್ಕೆ ಇಳಿದ ಜಟ್ಟಿಗಳ ಸಾಹಸಮಯ ದೃಶ್ಯಾವಳಿಗೆ ಸಾಕ್ಷಿಯಾದರು.

ಬಲಭೀಮರು ತಮ್ಮ ಸಾಹಸ ಪ್ರದರ್ಶನಕ್ಕೆ ಅಣಿಯಾದಾಗ ‘ಭೇಷ್’, ‘ಭೇಷ್ ಬಿಡಬ್ಯಾಡ’, ‘ಸಡಿಲ ಬಿಡಬ್ಯಾಡ’, ‘ಕುರಿಹಾಲುಂಡ ಮೈ ಅದು ಬಿಡಬ್ಯಾಡ’, ‘ಚುನಮುರಿ ಚೀಲ ಎತ್ತಿದಂತೆ ಎತ್ತಿದ ನೋಡ್ರಿ’ ಎನ್ನುವ ಮಾತುಗಳಿಂದ ನಿರೂಪಕರು ಸಾಹಸಿಗರನ್ನು ಹುರಿದುಂಬಿಸುತ್ತಿದ್ದರು. ನೆರೆದ ಜನಸ್ತೋಮ ಕೇಕೆ, ಚಪ್ಪಾಳೆ, ಸಿಳ್ಳೆ ಹಾಕಿ ಪ್ರೋತ್ಸಾಹಿಸಿದರು.

18ರ ಹರೆಯ ಯುವ ಸಾಹಸಿ ಬಸನಳ್ಳಿ ಗ್ರಾಮದ ರಿಯಾಜ್‌ ಜಮಾದಾರ 85 ಕೆ.ಜಿಯ ಸಂಗ್ರಾಣಿ ಕಲ್ಲನ್ನು 6 ಬಾರಿ ಎತ್ತಿ ನೆರೆದ ಜನಸ್ತೋಮವನ್ನು ನಿಬ್ಬೆರಗಾಗಿಸಿದರು. ಕನಮಡಿ ಗ್ರಾಮದ ರಫೀಕ್ ಮುಲ್ಲಾ 85 ಕೆ.ಜಿ ಸಂಗ್ರಾಣಿ ಕಲ್ಲನ್ನು 8 ಭಾರಿ ಎತ್ತಿದರೆ, ಇನ್ನು ಮಹಾರಾಷ್ಟ್ರ ಜತ್ತ ತಾಲ್ಲೂಕಿನ ಅಬ್ಜಲಖಾನ್ ಮುಜಾವಾರ ನಾನು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ 85 ಕೆ.ಜಿ ಕಲ್ಲನ್ನು 8 ಬಾರಿ ಹಾಗೂ 96 ಕೆ.ಜಿ ಕಲ್ಲನ್ನು 6 ಬಾರಿ ಎತ್ತುವ ಮೂಲಕ ಭೇಷ್ ಎನಿಸಿಕೊಂಡರು.

ಚಿಕ್ಕ ಮಕ್ಕಳ ಮೆಟ್ನಾದಿ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪೂರ ಗ್ರಾಮದ 10 ವರ್ಷದ ಬಾಲಕ ಆಕಾಶ ಪೂಜಾರಿ 50 ಕೆ.ಜಿ ಮೆಟ್ನಾದಿ ಮೇಲೆ ನಿಂತು 5 ಭಾರಿ ಎತ್ತಿ ಗಮನಸೆಳೆದರು. ವೃತ್ತಿಯಲ್ಲಿ ಶಿಕ್ಷಕರಾದ ಆಕಾಶ ಪೂಜಾರಿ ಅವರು ಹಲ್ಲಿನಲ್ಲಿಯೇ 50 ಕೆ.ಜಿ ತೂಕದ ಕಬ್ಬಿಣದ ಹಾರಿಯನ್ನು ಎತ್ತಿ ಹಿಂಬದಿಗೆ ಎಸೆದ ಪರಿಗೆ ಪ್ರೇಕ್ಷಕರು ನಿಬ್ಬೆರಗಾದರು.

ಭಾರ ಎತ್ತುವ ಸ್ಪರ್ಧೆ ವಿಜೇತರು

ಸಂಗ್ರಾಣಿ ಕಲ್ಲು: ಆಸಂಗಿ ಗ್ರಾಮದ ಅಬ್ಜಲಖಾನ ಮುಜಾವಾರ (95ಕೆ.ಜಿ–ಪ್ರಥಮ) ಕನಮಡಿ ಗ್ರಾಮದ ರಫೀಕ ಮುಲ್ಲಾ (85 ಕೆ.ಜಿ–ದ್ವಿತೀಯ) 

ಒತ್ತಕಲ್ಲು: ಗುಳೇದಗುಡ್ಡದ ವಿಠ್ಠಲ ಮನ್ನಿಕಟ್ಟಿ (ಪ್ರಥಮ) ಗೋಕಾಕನ ಶಿವಾನಂದ ಮಳವಂತಿ (ದ್ವಿತೀಯ) ಮುತ್ತು ಬಳಬಟ್ಟಿ (ತೃತೀಯ).

ಗುಂಡ ಕಲ್ಲು: ನಾಗಠಾಣದ ಭೀರಪ್ಪ ಪೂಜಾರಿ (ಪ್ರಥಮ) ಯಡ್ರಾಮಿಯ ಕರೇಪ್ಪ ಪೂಜಾರಿ (ದ್ವಿತೀಯ) ಶಾಡ್ಯಾಳದ ಭೀರಪ್ಪ ಪೂಜಾರಿ (ತೃತೀಯ).

ಚಿಕ್ಕ ಮಕ್ಕಳ ಮೆಟ್ನಾದಿ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆ: ಗುನ್ನಾಪೂರದ ಆಕಾಶ ಪೂಜಾರಿ (50 ಕೆ.ಜಿ–ಪ್ರಥಮ) ಗುನ್ನಾಪೂರದ ಭೀರಪ್ಪ ಪೂಜಾರಿ (100 ಕೆ.ಜಿ–ಪ್ರಥಮ)

ಇಳಿ ಮೆಟ್ನಾದಿ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆ: ಬುರಾಣಪೂರದ ಸಿದ್ದಪ್ಪ ಶಿವಪ್ಪ ಹಳ್ಳಿ (140 ಕೆ.ಜಿ–ಪ್ರಥಮ)

ಮೀಸೆಯಿಂದ 50 ಕೆ.ಜಿ ಭಾರ ಎತ್ತುವ ಸ್ಫರ್ಧೆ: ರಾಮಣ್ಣ ಯಮನಪ್ಪ ಚೌಧರಿ (ಪ್ರಥಮ) ರಂಗಪ್ಪ ಕೀರಶ್ಯಾಳ (ದ್ವಿತೀಯ).

ತೆಕ್ಕಿ ಬಡಿದು ಚೀಲ ಭಾರ ಎತ್ತುವ ಸ್ಪರ್ಧೆ: ಕುಂಟೋಜಿಯ ಶ್ರೀಕಾಂತ ನಾಯಕ (220 ಕೆ.ಜಿ ಪ್ರಥಮ) ಸೋಮನಾಳದ ಭೀಮಣ್ಣ ಬಳಬಟ್ಟಿ (200 ಕೆ.ಜಿ ದ್ವಿತೀಯ) ಯಡ್ರಾಮಿಯ ದರೇಪ್ಪ ಪೂಜಾರಿ (185 ಕೆ.ಜಿ ತೃತೀಯ)

ಹಲ್ಲಿನಿಂದ ಹಾರಿ ಎತ್ತುವ ಸ್ಪರ್ಧೆ: ಮುಳಸಾವಳಗಿಯ ರಮೇಶ ಪಾಟೀಲ (50 ಕೆ.ಜಿ ವಿಭಾಗ–ಪ್ರಥಮ)

ಉಸಿಕಿನ ಚೀಲ ಭಾರ ಎತ್ತುವ ಸ್ಫರ್ಧೆ: ಬಿದರಿಯ ಮಲ್ಲಿಕಾರ್ಜುನ ಹಣಮಸಾಗರ (350 ಕೆ.ಜಿ–ಪ್ರಥಮ) ಗುನ್ನಾಪೂರದ ಪ್ರವೀಣ ಗುನ್ನಾಪೂರ (350 ಕೆ.ಜಿ–ದ್ವಿತೀಯ)

ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರರ ಸಂಕ್ರಮಣ ಶತಮಾನೋತ್ಸವ ಜಾತ್ರೆ ಅಂಗವಾಗಿ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ195 ಕೆ.ಜಿ ಗುಂಡು  ಕಲ್ಲನ್ನು ಎತ್ತಿದ ನಾಗಠಾಣದ ಭೀರಪ್ಪ ಪೂಜಾರಿ 
ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರರ ಸಂಕ್ರಮಣ ಶತಮಾನೋತ್ಸವ ಜಾತ್ರೆ ಅಂಗವಾಗಿ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ195 ಕೆ.ಜಿ ಗುಂಡು  ಕಲ್ಲನ್ನು ಎತ್ತಿದ ನಾಗಠಾಣದ ಭೀರಪ್ಪ ಪೂಜಾರಿ 
ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರರ ಸಂಕ್ರಮಣ ಶತಮಾನೋತ್ಸವ ಜಾತ್ರೆ ಅಂಗವಾಗಿ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ 50 ಕೆ.ಜಿ ಭಾರದ ಹಾರಿಯನ್ನು ಮೀಸೆಯಿಂದ ಎತ್ತಿದ ಜಟ್ಟಿ
ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರರ ಸಂಕ್ರಮಣ ಶತಮಾನೋತ್ಸವ ಜಾತ್ರೆ ಅಂಗವಾಗಿ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ 50 ಕೆ.ಜಿ ಭಾರದ ಹಾರಿಯನ್ನು ಮೀಸೆಯಿಂದ ಎತ್ತಿದ ಜಟ್ಟಿ
ಚಿಕ್ಕ ಮಕ್ಕಳ ಮೆಟ್ನಾದಿ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆ 50 ಕೆ.ಜಿ ಭಾರ ಎತ್ತಿದ 10 ವರ್ಷದ ಆಕಾಶ ಪೂಜಾರಿ 
ಚಿಕ್ಕ ಮಕ್ಕಳ ಮೆಟ್ನಾದಿ ಮೇಲೆ ನಿಂತು ಭಾರ ಎತ್ತುವ ಸ್ಪರ್ಧೆ 50 ಕೆ.ಜಿ ಭಾರ ಎತ್ತಿದ 10 ವರ್ಷದ ಆಕಾಶ ಪೂಜಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT