ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರಕ್ಕಿಂತ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಬೇಕಿದೆ: ಬಾಬಾ ರಾಮದೇವ್‌

‘ಜಯಘೋಷದಿಂದ ಭಾರತ ಜಗದ್ಗುರುವಾಗಲ್ಲ’
Last Updated 30 ಡಿಸೆಂಬರ್ 2018, 15:52 IST
ಅಕ್ಷರ ಗಾತ್ರ

ವಿಜಯಪುರ: ‘ಭಗವಾನ್‌ ಶ್ರೀರಾಮ, ಹನುಮಂತ, ಪತಂಜಲಿ ಮಹರ್ಷಿಯನ್ನು ಒಂದೊಂದು ಜಾತಿಗೆ ಸೀಮಿತಗೊಳಿಸುವುದು ಒಳ್ಳೆಯದಲ್ಲ. ಮಂದಿರ ನಿರ್ಮಾಣಕ್ಕಿಂತ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಿದೆ’ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದರು.

‘ಶ್ರೀರಾಮ ಮೂರ್ತಿ ಪೂಜಕನಲ್ಲ. ನಿರಾಕಾರ ಪರಮಾತ್ಮನ ಉಪಾಸಕ. ಮಂದಿರಕ್ಕಿಂತ ರಾಮನ ವ್ಯಕ್ತಿತ್ವ ನಮ್ಮೆಲ್ಲರಲ್ಲಿ ರೂಪುಗೊಳ್ಳಬೇಕಿದೆ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶ್ರೀರಾಮನ ಕುರಿತಂತೆ ಕರ್ನಾಟಕದ ಸಂಶೋಧಕರೊಬ್ಬರು ಅವಹೇಳನಕಾರಿಯಾಗಿ ಮಾತನಾಡುವುದಕ್ಕೆ ವಿರೋಧಿಸಿದ ಬಾಬಾ, ನಮ್ಮ ಪೂರ್ವಜರನ್ನು ಈ ರೀತಿ ಅಪಮಾನ ಮಾಡುವುದು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮಹಾಪರಾಧವಾಗಿದೆ’ ಎಂದರು.

‘ಹಿಂದೂ-ಮುಸ್ಲಿಮರು ಈ ರಾಷ್ಟ್ರ ನಿರ್ಮಿಸಿದ್ದಾರೆ, ಅಲ್ಲಾಹು ಹೇಳಲಿ, ಭಗವಾನ ಹೇಳಲಿ ನಮ್ಮ ರಕ್ತ ಒಂದೇ. ನಮ್ಮ ಪೂರ್ವಜರು ಒಂದೇ, ಮಂದಿರ-ಮಸೀದಿ ಹೆಸರಿನಲ್ಲಿ ಯಾರೂ ಹೃದಯವನ್ನು ಕಲ್ಲಾಗಿಸಿಕೊಳ್ಳಬೇಡಿ’ ಎಂದು ಮನವಿ ಮಾಡಿದರು.

ವೈಷಮ್ಯದ ವಿಷಬೀಜ: ‘ಭಾರತ ಮಾತೆಗೆ ಜಯವಾಗಲಿ, ವಂದೇ ಮಾತರಂ ಘೋಷಣೆಯಿಂದ ಭಾರತ ಎಂದೆಂದಿಗೂ ಜಗದ್ಗುರು ಆಗುವುದು ಸಾಧ್ಯವಿಲ್ಲ’ ಎಂದು ಬಾಬಾ ಹೇಳಿದರು.

‘ಇದಕ್ಕೆ ಕರ್ಮಯೋಗಿಯಾಗಬೇಕಿದೆ. ಜಾತಿ ಮುಕ್ತ ಭಾರತ ಎಂಬುದು ಯಾವೊಂದು ರಾಜಕೀಯ ಪಕ್ಷದ ಸಂಕಲ್ಪವಾಗುತ್ತಿಲ್ಲ. ರಾಜಕೀಯ ಪಕ್ಷಗಳು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ವೈಷಮ್ಯದ ವಿಷಬೀಜ ಬಿತ್ತುತ್ತಿವೆ. ಜಾತಿ ಮುಕ್ತ, ವ್ಯಸನಮುಕ್ತ, ರೋಗಮುಕ್ತ ಭಾರತ ಎಲ್ಲ ರಾಜಕೀಯ ಪಕ್ಷಗಳ ಧ್ಯೇಯವಾಗಬೇಕಿದೆ’ ಎಂದರು.

‘ಹಮ್ ತೋ ಫಕೀರ. ಹೈ-ವಜೀರ ಸೇ ಜುಡ್ತೆ ನಹೀ (ನಾನೊಬ್ಬ ಸಂತ. ಪ್ರಧಾನಿಯೊಂದಿಗೆ ಜೋಡಣೆಯಾಗಲು ಸಾಧ್ಯವೇ ?’ ಎಂದು ಬಾಬಾ ರಾಮದೇವ್‌ ನಾಲ್ಕುವರೆ ವರ್ಷಗಳಲ್ಲಿ ಕೇಂದ್ರ ಸರ್ಕಾರ ಜನರ ಆಶಯ ಈಡೇರಿಸಿದೆಯಾ ? ಕಪ್ಪು ಹಣದ ಕುರಿತಂತೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದರು.

‘ವಿದೇಶಗಳಲ್ಲಿರುವ ಕಪ್ಪು ಹಣವನ್ನು ತರುವ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಕಪ್ಪು ಮನಗಳನ್ನು ಶುದ್ಧೀಕರಿಸುವ ಕಾರ್ಯ ನನ್ನದು’ ಎಂದು ಬಾಬಾ ಹೇಳಿದರು.

‘ಆದರ್ಶ ರಾಜನೀತಿ ಅನುಷ್ಠಾನಗೊಳ್ಳಬೇಕಿದೆ. ಗೋ ಹತ್ಯೆ ಹೆಸರಿನಲ್ಲಿ ಹಿಂಸೆ ಸರಿಯಲ್ಲ. ಆದರೆ ಗೋಮಾತೆ ಉಳಿಯಬೇಕು. ಜತೆಯಲ್ಲಿ ಮಾನವೀಯತೆಯೂ ಉಳಿಯಬೇಕು. ಇಂಥ ಕೆಲವೊಂದು ಪ್ರಕರಣ ನಡೆದಾಗ, ಇಡೀ ರಾಷ್ಟ್ರದಲ್ಲಿಯೇ ಈ ವಾತಾವರಣವಿದೆ. ಅಸಹಿಷ್ಣುತೆ ಹೆಚ್ಚಿದೆ ಎಂದು ತಿಳಿಯಬೇಕಿಲ್ಲ’ ಎಂದು ರಾಮದೇವ್‌ ತಿಳಿಸಿದರು.

‘ದೇಶವನ್ನು ಎರಡು ರೀತಿಯ ಬಡತನ ಕಾಡುತ್ತಿವೆ. ವೈಚಾರಿಕ, ಆರ್ಥಿಕ ಬಡತನವನ್ನು ದೂರ ಮಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣಗೊಂಡ ಸಂದರ್ಭ ಮಾತ್ರ ಸಮೃದ್ಧ ಭಾರತ ನಿರ್ಮಾಣಗೊಳ್ಳಲು ಸಾಧ್ಯ’ ಎಂದರು.

‘ಜಾತಿ, ಧರ್ಮ, ರಾಜನೀತಿಕ ಅಸಹಿಷ್ಣುತೆಯಿಂದ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಸ್ಥಿರತೆ ಉಂಟಾಗುತ್ತಿದೆ, ದೇಶದ ಏಕತೆ, ಅಖಂಡತೆಗೆ ಧಕ್ಕೆ ಬರುತ್ತಿದೆ. ರಾಜನೀತಿ ಪಕ್ಷಗಳು ಜಾತಿ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಅಧಿಕಾರದ ರಹಸ್ಯ ಕಾರ್ಯಸೂಚಿಯೊಂದಿಗೆ ಅಧಿಕಾರ ಗಿಟ್ಟಿಸಿಕೊಳ್ಳಲು ಹವಣಿಸುತ್ತಿವೆ. ಇದರಿಂದ ಪತಂಜಲಿ ರಾಜನೀತಿಕ ದೃಷ್ಟಿಯಿಂದ ಆಡಳಿತ ಪಕ್ಷ-–ಪ್ರತಿಪಕ್ಷವನ್ನು ಬೆಂಬಲಿಸದೆ, ನಿಷ್ಪಕ್ಷಪಾತವಾಗಿ ದೇಶಕ್ಕಾಗಿ ದುಡಿಯುವವರಿಗೆ ಸಹಯೋಗ ನೀಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT