ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ನಂಬಿದವರ ಕೈಬಿಡದ ‘ನಿಂಬೆ ನಾಡು’ ಇಂಡಿ

ಶಾಸಕ ಯಶವಂತರಾಯಗೌಡ ಪಾಟೀಲರಿಂದ ಮತಕ್ಷೇತ್ರ ಅಭಿವೃದ್ಧಿ
Last Updated 13 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಇಂಡಿ: ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿರುವ ‘ಭೀಮಾ ತೀರ’ದಿಂದ ಹೊಂಡಿಕೊಂಡಿರುವ ಇಂಡಿ ಮತಕ್ಷೇತ್ರವು ರಾಜಕೀಯವಾಗಿ ಹಲವು ವೈಶಿಷ್ಟ ಹೊಂದಿದೆ.

ಭೀಮಾ ನದಿ ಕರ್ನಾಟಕ, ಮಹಾರಾಷ್ಟ್ರ ಎರಡೂ ರಾಜ್ಯಗಳನ್ನು ವಿಭಾಗಿಸಿದೆ. ಇಂಡಿ ಮತಕ್ಷೇತ್ರದ ಸುಮಾರು 18 ಗ್ರಾಮಗಳು ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಗೆ ಅಂಟಿಕೊಂಡಿವೆ. ಇಲ್ಲಿಯ ನೆಲ ಫಲವತ್ತಾಗಿದ್ದು, ಹಣ್ಣಿನ ಬೆಳೆಗಳಿಗೆ ಪ್ರಸಿದ್ದವಾಗಿದೆ. ಇಲ್ಲಿಯ ಲಿಂಬೆ ಬೆಳೆ ದೇಶ ವಿದೇಶದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಲಿಂಬೆಯ ಜೊತೆಗೆ ದಾಳಿಂಬೆ, ದ್ರಾಕ್ಷಿ, ಬಾಳೆ ಪ್ರಮುಖವಾದ ಹಣ್ಣಿನ ಬೆಳೆಗಳು. ಇವುಗಳ ಜೊತೆಗೆ ಕಬ್ಬು, ತೊಗರಿ, ಹತ್ತಿ, ಜೋಳ, ಮೆಕ್ಕೆಜೋಳ, ಸಜ್ಜೆ ಬೆಳೆಗಳನ್ನು ಬೆಳೆಯಲಾಗುತ್ತದೆ.

ಕಳೆದ 20 ವರ್ಷಗಳ ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಬಂದಿದ್ದು, ಇಂಡಿ ಮತಕ್ಷೇತ್ರದ 16 ಗ್ರಾಮಗಳು ನೀರಾವರಿಗೆ ಒಳಪಟ್ಟಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ 2ನೇ ಮತ್ತು 3ನೇ ಹಂತದ ಕಾಲುವೆಗಳು ಅನುಷ್ಟಾನಗೊಂಡರೆ ಮತಕ್ಷೇತ್ರ ಸಂಪೂರ್ಣ ನೀರಾವರಿಯಾಗುವುದು. ಮತಕ್ಷೇತ್ರದಲ್ಲಿ 3 ಸಕ್ಕರೆ ಕಾರ್ಖಾನೆಗಳಿವೆ. ವ್ಯಾಪಾರ ಉದ್ದಿಮೆಗಾಗಿ ಮಾರುಕಟ್ಟೆಯ ಕೊರತೆಯಿದೆ.

ಈ ಮತಕ್ಷೇತ್ರದಿಂದ ಮೂರು ಜನ ಶಾಸಕರು ಮೂರು ಸಲ ಆಯ್ಕೆಯಾಗಿದ್ದು, ಒಬ್ಬರು ಎರಡು ಸಲ ಆಯ್ಕೆಯಾಗಿದ್ದಾರೆ. ಇನ್ನುಳಿದ ಮೂವರು ಒಂದೊಂದು ಸಲ ಆಯ್ಕೆಯಾಗಿದ್ದು, ಯಾರೋಬ್ಬರಿಗೂ ಮಂತ್ರಿ ಸ್ಥಾನ ಲಬಿಸಿಲ್ಲ.

1957 ರಲ್ಲಿ ರಚನೆಯಾಗಿರುವ ಈ ಮತಕ್ಷೇತ್ರಕ್ಕೆ 2008ರ ವರೆಗೆ ಸಿಂದಗಿ ತಾಲ್ಲೂಕಿನ ಸುಮಾರು 40 ಗ್ರಾಮಗಳು ಈ ಮತಕ್ಷೇತ್ರದಲ್ಲಿ ಸೇರ್ಪಡೆಯಾಗಿದ್ದವು. 2008 ರಲ್ಲಿ ಮತಕ್ಷೇತ್ರದ ಪುನರ್ ವಿಂಗಡನೆಯಾಗಿದ್ದು, ಇಂಡಿ ಮತಕ್ಷೇತ್ರದಲ್ಲಿದ್ದ ಸಿಂದಗಿ ತಾಲ್ಲೂಕಿನ ಗ್ರಾಮಗಳು ತೆಗೆದು ಬಳ್ಳೊಳ್ಳಿ ಮತಕ್ಷೇತ್ರದ ಗ್ರಾಮಗಳನ್ನು ಸೇರಿಸಿ ರಚನೆಯಾಯಿತು.

ಈ ಮತಕ್ಷೇತ್ರದಿಂದ 3 ಬಾರಿ ಆಯ್ಕೆಯಾದ ಆರ್.ಆರ್.ಕಲ್ಲೂರ ಅವರು ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷರಾಗಿ ಮತ್ತು ಯಶವಂತರಾಯಗೌಡ ಪಾಟೀಲರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದನ್ನು ಬಿಟ್ಟರೆ ಯಾರೊಬ್ಬರೂ ಇಲ್ಲಿಯವರೆಗೆ ಸಚಿವ ಸ್ಥಾನಮಾನ ಪಡೆದುಕೊಂಡಿಲ್ಲ.

ಮಹಾರಾಷ್ಟ್ರದ ಗಡಿಯಲ್ಲಿರುವ ಈ ಮತಕ್ಷೇತ್ರ ಅತೀ ಹಿಂದುಳಿದ ಮತಕ್ಷೇತ್ರ ಮತ್ತು ಬರಗಾಲಕ್ಕೆ ತುತ್ತಾಗುವ ಮತಕ್ಷೇತ್ರ ಎಂದೇ ಪರಿಗಣಿಸಲಾಗಿದೆ.

2013 ರಿಂದ ಯಶವಂತರಾಯಗೌಡ ಪಾಟೀಲರು ಶಾಸಕರಾದ ಮೇಲೆ ಮತಕ್ಷೇತ್ರ ಅಭಿವೃದ್ಧಿಕಂಡಿದೆ. ಮಿನಿವಿಧಾನ ಸೌಧ, ಪದವಿ ಕಾಲೇಜು, ಪಿಯು ಕಾಲೇಜು, ಆದರ್ಶ ವಿದ್ಯಾಲಯ, ಡಿಪ್ಲೋಮಾ ಕಾಲೇಜು, ಐಟಿಐ ಕಾಲೇಜು, ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿಗೆ ಕಟ್ಟಡಗಳನ್ನು ಕಂಡಿವೆ. ತಾಲ್ಲೂಕು ಕ್ರೀಡಾಂಗಣ, ಹೆಲಿಪ್ಯಾಡ್, ಇಂಡಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ರಸ್ತೆ ಅಗಲೀಕರಣ, ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿವಿಜ್ಞಾನ ಕೇಂದ್ರ ಮುಂತಾದ ಅಭಿವೃದ್ಧಿ ಕೆಲಸಗಳೊಂದಿಗೆ ಇಂಡಿ ಪಟ್ಟಣದಲ್ಲಿ ಬಸ್ ಡಿಪೋ, ರಸ್ತೆ ಅಗಲೀಕರಣ ಆಗಿದ್ದು, ಮೆಗಾ ಮಾರುಕಟ್ಟೆ ಪ್ರಗತಿಯಲಿದೆ.

2023 ರಲ್ಲಿ 15ನೇ ವಿಧಾನಸಭೆಯ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿಗೆ ಯಶವಂತರಾಯಗೌಡ ಪಾಟೀಲ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಪಕ್ಷದಿಂದ ಬಿ.ಡಿ.ಪಾಟೀಲ ಮತ್ತು ಬಿಜೆಪಿಯಿಂದ ಕಾಸುಗೌಡ ಬಿರಾದಾರ ಕಣದಲ್ಲಿದ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT