ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ದೇವರಹಿಪ್ಪರಗಿಯಿಂದ ಎಸ್‌.ಆರ್‌.ಪಾಟೀಲ ಸ್ಪರ್ಧೆ?

ವಿಜಯಪುರ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಕಾಂಗ್ರೆಸ್‌ ಮುಖಂಡರಿಂದ ಆಹ್ವಾನ; ಹೆಚ್ಚಿದ ರಾಜಕೀಯ ಕುತೂಹಲ!
Last Updated 2 ನವೆಂಬರ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಉತ್ತರ ಕರ್ನಾಟಕ ಭಾಗದ ಹಿರಿಯ ಕಾಂಗ್ರೆಸ್‌ ಕಟ್ಟಾಳು, ಪ್ರಬಲ ಲಿಂಗಾಯತ ಮುಖಂಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಆರ್‌.ಪಾಟೀಲ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧಿಸಲು ಭೂಮಿಕೆ ಸಿದ್ಧವಾಗತೊಡಗಿದೆ.

ಹೌದು, ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಈಗಾಗಲೇ ಕ್ಷೇತ್ರದ ಕಾಂಗ್ರೆಸ್‌ನ ಹಾಲಿ–ಮಾಜಿ ಶಾಸಕರು,ಅನೇಕ ಮುಖಂಡರು, ಕಾರ್ಯಕರ್ತರು, ಎಸ್‌.ಆರ್‌.ಪಾಟೀಲ ಅವರನ್ನು ಭೇಟಿಯಾಗಿ ಸಭೆ ನಡೆಸಿ, ಆಹ್ವಾನ ನೀಡಿದ್ದಾರೆ.

ಈ ಸಂಬಂಧ ಶೀಘ್ರದಲ್ಲೇ ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ ಸಿಂಗ್‌ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಎಸ್‌.ಆರ್‌.ಪಾಟೀಲ ಬೆಂಬಲಿಗರು ಭೇಟಿಯಾಗಿ ಬೇಡಿಕೆ ಮುಂದಿಡಲಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಎಸ್‌.ಆರ್‌.ಪಾಟೀಲ ಅವರಿಗೆ ಪಕ್ಷದಲ್ಲಿ ಆನೆಬಲ ಸಿಕ್ಕಂತಾಗಿದೆ.ಈ ಹಿನ್ನೆಲೆಯಲ್ಲಿ ಎಸ್‌.ಆರ್‌.ಪಾಟೀಲ ಅವರು ದೇವರಹಿಪ್ಪರಗಿ ಮೂಲಕ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಲಿದ್ದಾರೆಯೇ ಎಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇಎಸ್‌.ಆರ್‌.ಪಾಟೀಲ ಅಗತ್ಯ ಸಿದ್ಧತೆ ನಡೆಸಿದ್ದಾರೆ. ಆದರೆ, ದೇವರಹಿಪ್ಪರಗಿ ಅಥವಾ ಬೀಳಗಿ ಈ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದರಿಂದ ಸ್ಪರ್ಧಿಸುತ್ತಾರೆ ಎಂಬುದು ಕುತುಹೂಲ ಮೂಡಿಸಿದೆ.

ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮೊದಲಿನಿಂದಲೂ ರಡ್ಡಿ ಸಮುದಾಯ ರಾಜಕೀಯವಾಗಿ ಪ್ರಾಬಲ್ಯ, ಹಿಡಿತ ಸಾಧಿಸಿದೆ. ಅಂದಾಜು 40 ಸಾವಿರಕ್ಕೂ ಅಧಿಕ ಮತದಾರರು ಕ್ಷೇತ್ರದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ರಡ್ಡಿ ಸಮುದಾಯದವರಿಗೆ ಈ ಕ್ಷೇತ್ರ ಅತ್ಯಂತ ಸುರಕ್ಷಿತ ಎನ್ನಲಾಗುತ್ತಿದೆ.

ತಡೆವೊಡ್ಡಲು ಪ್ರಯತ್ನ:

ಎಸ್‌.ಆರ್‌.ಪಾಟೀಲ ಅವರು ದೇವರಹಿಪ್ಪರಗಿ ಕ್ಷೇತ್ರಕ್ಕೆ ಬಂದರೆ ವಿಜಯಪುರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಈಗಾಗಲೇ ಇರುವ ಎರಡು ಬಣಗಳ ನಡುವಿನ ರಾಜಕೀಯ ಮತ್ತು ಅಧಿಕಾರ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್‌.ಆರ್.ಪಾಟೀಲ ಅವರು ವಿಜಯಪುರ ಜಿಲ್ಲಾ ರಾಜಕೀಯ ಪ್ರವೇಶಿಸದಂತೆ ತಡೆಯುವ ಪ್ರಯತ್ನಗಳು ಉನ್ನತಮಟ್ಟದಲ್ಲಿ ಈಗಾಗಲೇ ನಡೆದಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪೈಪೋಟಿ
ವಿಜಯಪುರ:
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಲು ಎಸ್‌.ಆರ್‌.ಪಾಟೀಲ ಅವರೊಂದಿಗೆ ಅನೇಕರು ಪೈಪೋಟಿ ನಡೆಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ನೇತ್ರತಜ್ಞ, ವಿಜಯಪುರದ ‘ಅನುಗ್ರಹ’ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಪಾಟೀಲ ಅವರ ಹೆಸರೂ ಕಾಂಗ್ರೆಸ್‌ನಲ್ಲಿ ಮುಂಚೂಣಿಯಲ್ಲಿದೆ. ಇವರು ಸಹ ರಡ್ಡಿ ಸಮುದಾಯಕ್ಕೆ ಸೇರಿದವರು. ಅಲ್ಲದೇ, ಕ್ಷೇತ್ರದಲ್ಲಿ ಸಾಕಷ್ಟು ಜನ ಸಂಪರ್ಕ ಹೊಂದಿದ್ಧಾರೆ. ಕ್ಷೇತ್ರದಲ್ಲಿ ಅವರು ‘ನಮ್ಮ ನಡೆದ ಆರೋಗ್ಯದ ಕಡೆ’ ಎಂಬ ಕಾರ್ಯಕ್ರಮ, ಆರೋಗ್ಯ ಶಿಬಿರಗಳ ಮೂಲಕ ಹಳ್ಳಿ, ಹಳ್ಳಿಗಳನ್ನು ತಲುಪಿ, ಮತದಾರರನ್ನು ಸಂಪರ್ಕಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ.

ಇವರ ಜೊತೆಗೆಕುರುಬ ಸಮುದಾಯಕ್ಕೆ ಸೇರಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮತ್ತುಗೌರಮ್ಮ ಮುತ್ತತ್ತಿ ಹಾಗೂ ರಡ್ಡಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ಮುಖಂಡರಾದ ಆನಂದಗೌಡ ದೊಡ್ಡಮನಿ, ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಬಿ.ಎಸ್‌.ಪಾಟೀಲ ಯಾಳಗಿ, ಸುಭಾಶ ಛಾಯಗೋಳ ಅವರು ಸಹ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

***

ದೇವರಹಿಪ್ಪರಗಿಯಿಂದ ಸ್ಪರ್ಧಿಸುವಂತೆ ಕಾಂಗ್ರೆಸ್‌ ಮುಖಂಡರು ಆಹ್ವಾನಿಸಿದ್ದಾರೆ. ಆದರೆ, ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೇ? ಬೇಡವೇ? ಸ್ಪರ್ಧಿಸುವುದಾದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ನಿರ್ಧರಿಸಿಲ್ಲ. ಕಾದು ನೋಡೋಣ.
–ಎಸ್‌.ಆರ್‌.ಪಾಟೀಲ, ವಿಧಾನ ಪರಿಷತ್‌ ಮಾಜಿ ಸದಸ್ಯ

***

ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕ್ಷೇತ್ರದಲ್ಲಿ ಆರೋಗ್ಯ, ಸಮಾಜಸೇವೆ, ಜನಪರ ಕೆಲಸ ಮಾಡಿ ಗುರುತಿಸಿಕೊಂಡಿದ್ದೇನೆ. ಜನಾಭಿಪ್ರಾಯ ಆಧರಿಸಿ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
–ಡಾ.ಪ್ರಭುಗೌಡ ಪಾಟೀಲ, ನೇತ್ರತಜ್ಞ, ವಿಜಯಪುರ

***

ವಿಜಯಪುರ ಜಿಲ್ಲೆಯಲ್ಲಿಕುರುಬ ಸಮಾಜಕ್ಕೆ ಅವಕಾಶ ಸಿಕ್ಕಿಲ್ಲ. ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವರಹಿಪ್ಪರಗಿಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
–ಸುಜಾತಾ ಕಳ್ಳಿಮನಿ, ಜಿ.ಪಂ.ಮಾಜಿ ಅಧ್ಯಕ್ಷೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT