ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಮಳೆ ಅಬ್ಬರ; ನಷ್ಟ ಅಪಾರ

ಸಾಸಾಬಾಳದಲ್ಲಿ 10 ಸೆಂ.ಮೀ ಮಳೆ; 315 ಮನೆಗಳಿಗೆ ಹಾನಿ
Last Updated 14 ಅಕ್ಟೋಬರ್ 2020, 15:32 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಬುಧವಾರ ಗಾಳಿ, ಮಳೆ ಅಬ್ಬರ ಜೋರಾಗಿತ್ತು. ಮಂಗಳವಾರ ರಾತ್ರಿಯಿಂದ ಬಿರುಸುಗೊಂಡ ಮಳೆ ದಿನಪೂರ್ತಿ ಬಿಡುವು ನೀಡದೆ ಸುರಿದ ಪ‍ರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು.

ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಶೇ 409 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಭೀಮಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.ಡೋಣಿ ನದಿ ಪ್ರವಾಹದಿಂದ ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಮುಳುಗಿದೆ. ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಬಬಲೇಶ್ವರ ತಾಲ್ಲೂಕಿನ ಸಾರವಾಡ ಗ್ರಾಮದ ಮಲ್ಲಪ್ಪನ ಕೆರೆ ಏರಿ ಒಡೆದು, 1 ಎಕರೆ 10 ಗುಂಟೆ ಜಮೀನು ಜಲಾವೃತವಾಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಡೋಣಿ ನದಿ ಪ್ರವಾಹದಿಂದ ತಾಳಿಕೋಟೆ–ಹಡಗಿನಾಳ ನೆಲಮಟ್ಟದ ಸೇತುವೆ ಮುಳುಗಿದೆ, ದೇವರ ಹಿಪ್ಪರಗಿ–ಬಸವನ ಬಾಗೇವಾಡಿ ಸಂಪರ್ಕ ರಸ್ತೆಯ ಸಾತಿಹಾಳ ಸಂಪರ್ಕ ಸೇತುವೆ ಡೋಣಿ ನದಿ ಪ್ರವಾಹದಲ್ಲಿ ಮುಳುಗಿದ್ದು, ಸಂಚಾರ ಕಡಿತವಾಗಿದೆ.

315 ಮನೆಗಳಿಗೆ ಹಾನಿ:

ನಿರಂತರವಾಗಿ ಮಳೆ ಸುರಿದ ಪರಿಣಾಮ ಜಿಲ್ಲೆಯಲ್ಲಿ ಎರಡು ಮನೆ ಪೂರ್ಣವಾಗಿ ಹಾನಿಗೊಳಗಾಗಿದೆ. ಉಳಿದಂತೆ ವಿಜಯಪುರ 2, ಬಬಲೇಶ್ವರ 6, ತಿಕೋಟಾ 12, ಬಸವನ ಬಾಗೇವಾಡಿ 19, ಕೊಲ್ಹಾರ 17, ನಿಡಗುಂದಿ 20, ಮುದ್ದೇಬಿಹಾಳ 25, ತಾಳಿಕೋಟೆ 10, ಇಂಡಿ 21, ಚಡಚಣ 7, ಸಿಂದಗಿ 40, ದೇವರ ಹಿಪ್ಪರಗಿ 8 ಸೇರಿದಂತೆ ಒಟ್ಟು 303 ಮನೆಗಳಿಗೆ ಹಾನಿಯಾಗಿದೆ. ಚಡಚಣ ತಾಲ್ಲೂಕಿನಲ್ಲಿ ಭಾರೀ ಮಳೆಗೆ ಒಂದು ಜಾನುವಾರು ಸಾವಿಗೀಡಾಗಿದೆ.

ಸಿಂದಗಿ ಮೋರಟಗಿ ಜನತಾ ಕಾಲೊನಿಯಲ್ಲಿ ವಾಸವಾಗಿರುವ ಐದು ಗೊಂದಳಿ ಕುಟುಂಬದ ಮನೆಗಳಿಗೆ ಮಂಗಳವಾರ ರಾತ್ರಿ ನೀರು ನುಗ್ಗಿ, 25ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಅಕ್ಕಿ, ಗೋದಿ, ದಿನಸಿಗಳೆಲ್ಲ ನೀರು ಪಾಲಾಗಿ ಕುಟುಂಬ ಸಂಕಷ್ಟದಲ್ಲಿದೆ. ಇಡೀ ರಾತ್ರಿ ನೀರಲ್ಲೆ ಕಾಲ ಕಳೆದಿದ್ದು ಬುಧವಾರ ಬೆಳಿಗ್ಗೆ ತಹಶೀಲ್ದಾರ್‌ ಸಂಜೀವಕುಮಾರ ದಾಸರ ಗ್ರಾಮಕ್ಕೆ ಭೇಟಿ ನೀಡಿ ಕಾಲೊನಿಯಲ್ಲಿರುವ ಶಾಲೆಯಲ್ಲಿ ತಾತ್ಪೂರ್ತಿಕ ಕಾಳಜಿ ಕೇಂದ್ರವನ್ನು ತೆರೆದು ವಾಸ್ತವ್ಯ, ಊಟದ ವ್ಯವಸ್ಥೆ ಮಾಡಿದ್ದಾರೆ.

ಮಳೆ ವಿವರ:

ಸಾಸಾಬಾಳ ಅತೀ ಹೆಚ್ಚು ಅಂದರೆ, 10 ಸೆಂ.ಮೀ ಮಳೆಯಾಗಿದೆ. ಉಳಿದಂತೆಕೊಂಡಗೂಳಿ 8.8, ವಿಜಯಪುರ 2, ಭೂತನಾಳ 2.6, ಹಿಟ್ನಳ್ಳಿ 2.1, ತಿಕೋಟಾ 1.3,ಮಮದಾಪೂರ 1.7, ಕುಮಟಗಿ 1, ಕನ್ನೂರ 2.7, ಬಬಲೇಶ್ವರ 2.9,ಇಂಡಿ 4.8, ನಾದ ಬಿ.ಕೆ 2.4, ಅಗರಖೇಡ 4.5, ಹೊರ್ತಿ1.4, ಹಲಸಂಗಿ 3.4, ಚಡಚಣ 2.4,ಝಳಕಿ 3.4, ಸಿಂದಗಿ 1.6, ಆಲಮೇಲ 4.4, ರಾಮನಹಳ್ಳಿ 1.8, ಕಡ್ಲೆವಾಡ 1.7, ದೇವರಹಿಪ್ಪರಗಿ 2.2, ಮನಗೂಳಿ 1.3, ಆಲಮಟ್ಟಿ 1 ಮಳೆಯಾಗಿದೆ.

‘ಯೆಲ್ಲೊ‘ ಆಲರ್ಟ್‌ ಘೋಷಣೆ

ವಿಜಯಪುರ: ಜಿಲ್ಲೆಯಾದ್ಯಂತ 17 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್‌ ಸೂಚಿಸಿದ್ದಾರೆ.

ಕೇಂದ್ರ ಹವಾಮಾನ ಮುನ್ಸೂಚನೆಯಂತೆ ಅ.15 ರಂದು ಅತಿ ಹೆಚ್ಚು ಮಳೆಯಾಗುವುದರಿಂದ ‘ಯಲ್ಲೋ ಅಲರ್ಟ್ ಮತ್ತು 16 ಮತ್ತು 17ರಂದು ಹೆಚ್ಚು ಮಳೆಯಾಗುವುದರಿಂದ ಗ್ರೀನ್ ಅಲರ್ಟ್ ಘೋಷಿಸಲಾಗಿದೆ.

ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ನೇಮಿಸಲಾದ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಕೇಂದ್ರ ಸ್ಥಾನದಲ್ಲಿದ್ದು, ಅತೀವೃಷ್ಠಿ, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳವರ ಕಚೇರಿಯಲ್ಲಿ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಟೋಲ್ ಫ್ರೀ ನಂ: 1077 (08352-221261) ಪ್ರಾರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

10 ತಾಲ್ಲೂಕು ಅತಿವೃಷ್ಟಿ ಪೀಡಿತ

ವಿಜಯಪುರ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ತಾಳಿಕೋಟಿ, ಬಸವನ ಬಾಗೇವಾಡಿ, ದೇ.ಹಿಪ್ಪರಗಿ, ಇಂಡಿ ಮತ್ತು ಸಿಂದಗಿ ಸೇರಿದಂತೆಜಿಲ್ಲೆಯ ಒಟ್ಟು 10 ತಾಲ್ಲೂಕುಗಳನ್ನು ಅತಿವೃಷ್ಟಿ, ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಅತೀವೃಷ್ಠಿ ಪೀಡಿತ ತಾಲ್ಲೂಕುಗಳಲ್ಲಿ ಬಿದ್ದ ಮನೆಗಳ ಸಮೀಕ್ಷೆ ಕಾರ್ಯಕ್ಕಾಗಿ ತಾಂತ್ರಿಕ ತಂಡಗಳನ್ನು ರಚಿಸಲಾಗಿದ್ದು, ಅವರ ವರದಿಯ ಮೇರೆಗೆ ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT