ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನದ ದಾಖಲೆ ಬಿಡುಗಡೆ ಮಾಡಲಿ: ಮನಗೂಳಿಗೆ ಭೂಸನೂರ ಸವಾಲು

Published 28 ಫೆಬ್ರುವರಿ 2024, 16:15 IST
Last Updated 28 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಸಿಂದಗಿ: 'ಶಾಸಕ ಅಶೋಕ ಮನಗೂಳಿ ಸರ್ಕಾರದಿಂದ ₹125 ಕೋಟಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಸಿಂದಗಿ ಮತಕ್ಷೇತ್ರಕ್ಕೆ ಬಿಡುಗಡೆಗೊಳಿಸಿದ ಅನುದಾನ ಕೇವಲ ₹8 ಕೋಟಿ ಮಾತ್ರ. ಹಾಗಿದ್ದರೆ ₹125 ಕೋಟಿ ರೂಪಾಯಿ ಅನುದಾನದ ಕುರಿತಾಗಿ ದಾಖಲೆ ಬಿಡುಗಡೆ ಮಾಡಲಿ’ ಎಂದು ಮಾಜಿ ಶಾಸಕ ರಮೇಶ ಭೂಸನೂರ ಸವಾಲು ಹಾಕಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗುತ್ತಿದ್ದು, ಯಾವುದಾದರೂ ಹೊಸ ಕಾಮಗಾರಿ ಪ್ರಾರಂಭಿಸಿದ್ದೀರಾ? ಎಂಬುದನ್ನು ಹೇಳಲಿ.

2022-23 ನೇ ಸಾಲಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ₹8 ಕೋಟಿ ಕ್ರಿಯಾ ಯೋಜನೆ ಸಲ್ಲಿಸಿ ಟೆಂಡರ್ ಕೂಡ ಕರೆಯಲಾಗಿತ್ತು. ಈ ಯೋಜನೆಯಲ್ಲಿ ಒಟ್ಟು 64 ಫಲಾನುಭವಿಗಳಲ್ಲಿ 49 ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡದ ಫಲಾನುಭವಿಗಳ ಪಟ್ಟಿಗೆ ಮಂಜೂರಾತಿಯೂ ದೊರಕಿತ್ತು. ಆದರೆ ಶಾಸಕ ಮನಗೂಳಿ ದ್ವೇಷ ರಾಜಕಾರಣದಿಂದಾಗಿ ಫಲಾನುಭವಿಗಳನ್ನು ಮರು ಹಂಚಿಕೆ ಮಾಡುವಂತೆ ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖಾ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ 2024 ಫೆಬ್ರುವರಿ 3 ರಂದು ಪತ್ರ ನೀಡಿದ್ದಾರೆ ಎಂದು ಮಾಜಿ ಶಾಸಕ ಭೂಸನೂರ ದಾಖಲೆಯನ್ನು ಪ್ರದರ್ಶಿಸಿದರು. ಈ ಕುರಿತು ಮೂರು ದಿನಗಳ ನಂತರ ಕೃಷ್ಣಾ ಭಾಗ್ಯ ಜಲ ನಿಗಮ ಮುಖ್ಯ ಎಂಜಿನಿಯರ್ ಕಚೇರಿಗೆ ಎದುರು ಉಗ್ರ ಪ್ರತಿಭಟನೆ ಪ್ರಾರಂಭಿಸಲಾಗುವುದು ಎಂದು ಗಡುವು ನೀಡಿದರು.

‘ನನ್ನ ಅಧಿಕಾರ ಅವಧಿಯಲ್ಲಿ ಚಾಲನೆ ನೀಡಿದ್ದ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರ ಕಟ್ಟಡ, ಶಿಕ್ಷಕ ಭವನ ಕಟ್ಟಡ ಕಾಮಗಾರಿಗಳನ್ನು ಬೇರೆ ಕಾಮಗಾರಿಗೆ ಬದಲಾಯಿಸಿಕೊಂಡು ದ್ವೇಷ ರಾಜಕೀಯ ಮುಂದುವರೆಸಿಕೊಂಡು ಹೊರಟಿದ್ದಾರೆ‘ ಎಂದು ತಿಳಿಸಿದರು.

ಸಿಂದಗಿ ಪುರಸಭೆ ಕ್ರಿಯಾ ಯೋಜನೆಯನ್ನು ಶಾಸಕರು ಮಾಡುತ್ತಿದ್ದಾರೆ. ಪುರಸಭೆಯಡಿ 5 ಸಾವಿರ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಈಗ ಅದನ್ನೂ ರದ್ದುಪಡಿಸಿ ಬೇರೆ ಫಲಾನುಭವಿಗಳ ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ರೀತಿ ಆಲಮೇಲ ಪಟ್ಟಣ ಪಂಚಾಯ್ತಿಯಲ್ಲೂ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದರು.

ಚಟ್ಟರಕಿ ಗ್ರಾಮ ಪಂಚಾಯ್ತಿಯಡಿ 100 ಆಶ್ರಯ ಮನೆಗಳಿಗಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಇದನ್ನು ರದ್ದುಗೊಳಿಸಿ ತಮ್ಮ ಬಂಧು ಇರುವ ಹೊನ್ನಳ್ಳಿ ಗ್ರಾಮ ಪಂಚಾಯ್ತಿಗೆ ವರ್ಗಾಯಿಸಿದ್ದಾರೆ. ಹೊಸದೇನು ಅಭಿವೃದ್ದಿ ಮಾಡುತ್ತಿಲ್ಲ. ಬರೀ ತಿಪ್ಪೆ ಕೆದರುವ ಕೆಲಸ ಮಾತ್ರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರು ಆರೋಪಿಸಿದರು.

ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಸಿಂದಗಿ ಪುರಸಭೆ ಭ್ರಷ್ಟಾಚಾರಿಗಳ ಕೈಗೆ ಸಿಕ್ಕುಕೊಂಡಿದೆ. ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ಪಟ್ಟಣದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸಾಗಿ ಬಂದ ಒಳಚರಂಡಿ ಕಾಮಗಾರಿ ಇನ್ನೂ ಕುಂಟುತ್ತ ನಡೆದಿದೆ ಎಂದು ದೂರಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಮತಕ್ಷೇತ್ರದ ಶಾಸಕರ ಕುಮ್ಮಕ್ಕಿನಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಲಿವೆ ಎಂದು ಆಪಾದಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಗ್ಯಾರಂಟಿಗೆ ವಾರಂಟಿ ಮುಗಿಯುತ್ತದೆ ಎಂದು ಟೀಕಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಮುಖ ಪೀರು ಕೆರೂರ ಮಾತನಾಡಿ, ಮತಕ್ಷೇತ್ರದ ಶಾಸಕರ ಚಿಲ್ಲರೆ ರಾಜಕೀಯ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪ್ರಮುಖರಾದ ಶ್ರೀಮಂತ ನಾಗೂರ, ಗುರು ತಳವಾರ, ಬಿ.ಎಚ್.ಬಿರಾದಾರ, ಶ್ರೀಕಾಂತ ಬಿಜಾಪೂರ, ಪ್ರದಾನಿ ಮೂಲಿಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT