ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ | ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ: ಸ್ಥಳದ ಸಮಸ್ಯೆ

ಚೀಲಗಳಲ್ಲಿ ಪುಸ್ತಕಗಳ ಸಂಗ್ರಹ, ನೂತನ ಕಟ್ಟಡ ನಿರ್ಮಾಣಕ್ಕೆ ಓದುಗರ ಮನವಿ
ಶಂಕರ ಈ.ಹೆಬ್ಬಾಳ
Published 8 ಜನವರಿ 2024, 5:45 IST
Last Updated 8 ಜನವರಿ 2024, 5:45 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆಯ ಕಚೇರಿಯನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ಓದುಗರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸ್ಥಳಾವಕಾಶದ ಸಮಸ್ಯೆ ಇದೆ. ಬಹುತೇಕ ಓದುಗರು ನೆಲದ ಮೇಲೆ ಹಾಗೂ ಪುಸ್ತಕಗಳ ರ್‍ಯಾಕ್‌ಗಳ ಮಧ್ಯದಲ್ಲಿ ಕುಳಿತು ಓದುತ್ತಾರೆ. 

ಗ್ರಂಥಾಲಯಕ್ಕೆ ಸರಬರಾಜಾಗುತ್ತಿರುವ ಪುಸ್ತಕಗಳನ್ನು ಜೋಡಿಸಿಡಲೂ ಸೌಲಭ್ಯಗಳಿಲ್ಲ. ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿ ಟೇಬಲ್‌ಗಳ ಅಡಿಯಲ್ಲಿ ಇಡಲಾಗಿದೆ. 

ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ ಈ ಗ್ರಂಥಾಲಯದಲ್ಲಿ ಒಟ್ಟು 34,430 ಪುಸ್ತಕಗಳ ಸಂಗ್ರಹ ಇದೆ. 1,370 ಕಾರ್ಡ್‌ ಹೊಂದಿರುವ ಸದಸ್ಯರಿದ್ದಾರೆ. ನಿತ್ಯವೂ 80ರಿಂದ 100 ಜನರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಇವರಲ್ಲಿ ವಿದ್ಯಾರ್ಥಿಗಳೇ ಅಧಿಕ.

ಸ್ಥಳಾವಕಾಶ ಸಮಸ್ಯೆ: 

ಪುಸ್ತಕಗಳನ್ನು ಇಡಲು ಆರು ರ‍್ಯಾಕುಗಳಿವೆ. ಆದರೆ ಇಷ್ಟು ಸ್ಥಳಾವಕಾಶದಲ್ಲಿ ಪುಸ್ತಕಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಇಡಲು ಸಾಧ್ಯವಾಗಿಲ್ಲ. ಮೂವರು ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗ್ರಂಥಾಲಯಕ್ಕೆ ಬರುವ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕುಳಿತುಕೊಂಡು ಓದಲು ಸ್ಥಳದ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಓದುಗರು ಬಂದಲ್ಲಿ ಗ್ರಂಥಾಲಯದ ನೆಲದ ಮೇಲೆಯೇ ಕುಳಿತುಕೊಂಡು ಓದುವ ಪರಿಸ್ಥಿತಿ ಇದೆ.

ಅನೇಕ ಕವಿ, ಲೇಖಕರ, ಸಾಹಿತಿಗಳು ಬರೆದಿರುವ ಗ್ರಂಥಗಳು, ಪುಸ್ತಕಗಳು, ಕವನ ಸಂಕಲನಗಳ ಬಹುತೇಕ ಕೃತಿಗಳನ್ನು ಚೀಲಗಳಲ್ಲಿ ತುಂಬಿಡಲಾಗಿದೆ. 

‘ನಾವು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಹಲವು ಪುಸ್ತಕಗಳನ್ನು ಓದಲು ಈ ಗ್ರಂಥಾಲಯಕ್ಕೆ ಬರುತ್ತೇವೆ.ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದಲು ಬಂದಾಗ ಇನ್ನುಳಿದವರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇರುವುದಿಲ್ಲ. ಹೀಗಾಗಿ ನಿತ್ಯದ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಲು ಸಾಧ್ಯವಾಗುತ್ತಿಲ್ಲ. ಬೇರೆಡೆ ಗ್ರಂಥಾಲಯ ಸ್ಥಳಾಂತರವಾದರೆ ಒಳ್ಳೆಯದು‘ ಎಂದು ಓದುಗರಾದ ನಾಗರಾಜ ಬಡಿಗೇರ, ನಿಂಗಪ್ಪ ಡೊಳ್ಳಿ ಎನ್ನುತ್ತಾರೆ.

ಆಲಮಟ್ಟಿ ರಸ್ತೆಯಲ್ಲಿಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಿಹಂತ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಕಾಲೇಜು ಇದ್ದು ವಿದ್ಯಾರ್ಥಿಗಳಿಗೆ ಇಲ್ಲಿನ ಗ್ರಂಥಾಲಯದಲ್ಲಿ ಓದಲು ಅನುಕೂಲವಾಗಿದೆ. ಇದನ್ನು ಇಲ್ಲಿಂದ ಸ್ಥಳಾಂತರ ಮಾಡಬಾರದು ಎಂಬ ಒತ್ತಾಯವೂ ಇದೆ. 

‘ಹೊರಗಿನಿಂದ ಬರುವವರಿಗೆ ಇಲ್ಲಿ ಗ್ರಂಥಾಲಯ ಎಲ್ಲಿದೆ ಎಂದು ಹುಡುಕಾಡಿಕೊಂಡು ಬರಬೇಕು. ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸ್ಥೆ ಇದೆ. ಆದರೆ, ವಿದ್ಯಾರ್ಥಿಗಳಿಗೆ, ಪುರುಷರಿಗೆ ಶೌಚಾಲಯದ ಸೌಲಭ್ಯವಿಲ್ಲ. ವಿಶಾಲ ಜಾಗದಲ್ಲಿ ಗ್ರಂಥಾಲಯ ಸ್ಥಳಾಂತರಿಸಿದರೆ ಓದಲು ಅನುಕೂಲವಾಗುತ್ತದೆ’ ಎಂದು ಓದುಗ ಮಹೇಶ ದೊಡ್ಡಮನಿ ಹೇಳುತ್ತಾರೆ. 

ಮುದ್ದೇಬಿಹಾಳದ ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶ ಸಾಲದ್ದರಿಂದ ಪುಸ್ತಕಗಳನ್ನು ಮೂಟೆಗಳಲ್ಲಿಯೇ ಸಂಗ್ರಹಿಸಿರುವುದು
ಮುದ್ದೇಬಿಹಾಳದ ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶ ಸಾಲದ್ದರಿಂದ ಪುಸ್ತಕಗಳನ್ನು ಮೂಟೆಗಳಲ್ಲಿಯೇ ಸಂಗ್ರಹಿಸಿರುವುದು
ಬಲರಾಮ ಕಟ್ಟಿಮನಿ ತಹಶೀಲ್ದಾರ್
ಬಲರಾಮ ಕಟ್ಟಿಮನಿ ತಹಶೀಲ್ದಾರ್
ಸಿ.ಎಸ್.ನಾಡಗೌಡ ಶಾಸಕರು
ಸಿ.ಎಸ್.ನಾಡಗೌಡ ಶಾಸಕರು
ಮಹೇಶ ದೊಡಮನಿ ಓದುಗ
ಮಹೇಶ ದೊಡಮನಿ ಓದುಗ
ನಾಗರಾಜ ಬಡಿಗೇರ ಓದುಗ
ನಾಗರಾಜ ಬಡಿಗೇರ ಓದುಗ
-ಅಜಯಕುಮಾರ್ ಡಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ
-ಅಜಯಕುಮಾರ್ ಡಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ

ಅಧಿಕಾರಿಗಳ ನಿರ್ಲಕ್ಷ್ಯ: ಪುಸ್ತಕಗಳಿಗೆ ದೂಳು ಕೆಳಗೆ ಕುಳಿತು ಓದುವ ವಿದ್ಯಾರ್ಥಿಗಳು ಅಗತ್ಯ ಸೌಲಭ್ಯ ಹೊಂದಿರುವ ನೂತನ ಕಟ್ಟಡ ನಿರ್ಮಾಣಕ್ಕೆ ಮನವಿ ನಿವೇಶನ ನೀಡುವಂತೆ ಪುರಸಭೆ ಅಧಿಕಾರಿಗೆ ಮನವಿ

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಖಾ ಗ್ರಂಥಾಲಯವನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. 
-ಸಿ.ಎಸ್.ನಾಡಗೌಡ (ಅಪ್ಪಾಜಿ) ಶಾಸಕರು
ಶಾಖಾ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಬೇಕು ಎಂದು ಪುರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಅಗತ್ಯ ನಿವೇಶನ ಕೊಟ್ಟರೆ ಗ್ರಂಥಾಲಯದ ಇಲಾಖೆಯಿಂದ ಅನುದಾನ ಪಡೆದು ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು.
-ಅಜಯಕುಮಾರ್ ಡಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ

ಗ್ರಂಥಾಲಯ ಸ್ಥಳಾಂತರಕ್ಕೆ ಮನವಿ ‘ಮುದ್ದೇಬಿಹಾಳ ಶಾಖಾ ಗ್ರಂಥಾಲಯವನ್ನು ಖಾಲಿ ಇರುವ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಕ್ಕೆ ಅನುಮತಿ ನೀಡಲು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆ ಕಟ್ಟಡದ ಸುಸ್ಥಿತಿಯ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ನ.22ರಂದು ವರದಿ ನೀಡಲಾಗಿದೆ. ಗೋಡೆಗಳು ಉತ್ತಮವಾಗಿವೆ. ಆದರೆ ಕೆಲ ದುರಸ್ತಿ ಕಾರ್ಯಗಳಿದ್ದು ಅವುಗಳನ್ನು ಮಾಡಿಸಿದರೆ ಕಟ್ಟಡವನ್ನು ಉಪಯೋಗ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದೆ‘ ಎನ್ನುತ್ತಾರೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT