ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಶಕ್ತಿ; ಬಸವ ಅನುಯಾಯಿ..!

ಗೃಹ ಸಚಿವ ಎಂ.ಬಿ.ಪಾಟೀಲ ಜತೆ ಆಪ್ತ ಒಡನಾಟ
Last Updated 14 ಮಾರ್ಚ್ 2019, 15:10 IST
ಅಕ್ಷರ ಗಾತ್ರ

ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ ಕೂಡಲಸಂಗಮದಲ್ಲಿ ದಶಕದ ಹಿಂದೆಯೇ ‘ಬಸವ ಧರ್ಮ ಪೀಠ’ ಆರಂಭಿಸಿ, ಮಠ ಕಟ್ಟಿಕೊಂಡಿದ್ದರೂ; ಮಾತೆ ಮಹಾದೇವಿ ಅವರ ವಿಜಯಪುರದ ನಂಟು ಅಷ್ಟಕ್ಕಷ್ಟೇ.

ಮಾತೆ ಆರಂಭಿಸಿದ ಬಸವ ಸಮಿತಿ, ರಾಷ್ಟ್ರೀಯ ಬಸವ ದಳಗಳು ಇಂದಿಗೂ ಜಿಲ್ಲೆಯ ವಿವಿಧೆಡೆ ಸಕ್ರಿಯವಾಗಿವೆ. ಹಿರಿಯರ ಜತೆ, ಕಿರಿಯರು, ಯುವಕರು ಸದಸ್ಯರಾಗಿದ್ದು, ಬಸವ ತತ್ವ ಪಾಲನೆ, ಪ್ರಚಾರದಲ್ಲಿ ತಲ್ಲೀನವಾಗಿವೆ.

ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಹೋರಾಟ 2017ರಲ್ಲಿ ಬಿರುಸುಗೊಂಡ ನಂತರ, ಮಾತೆ ಮಹಾದೇವಿ ನಂಟು ಜಿಲ್ಲೆಗೂ ವ್ಯಾಪಿಸಿತು.

ಬಸವೇಶ್ವರರ ಅನುಯಾಯಿಯಾದ ಮಾತೆ ಮಹಾದೇವಿ ಬಸವಜನ್ಮಭೂಮಿ ಬಸವನಬಾಗೇವಾಡಿಗೆ 1968ರಲ್ಲಿ ಭೇಟಿ ಕೊಟ್ಟ ನೆನಪು ಸ್ಥಳೀಯರದ್ದು.

ಸಿಂದಗಿಯ ವೈದ್ಯ ಎಸ್‌.ಜಿ.ಬಮ್ಮಣ್ಣಿ 1970ರ ದಶಕದಲ್ಲಿ ಮಾತೆಯನ್ನು ಪ್ರವಚನ ನೀಡಲಿಕ್ಕಾಗಿ ಪಟ್ಟಣಕ್ಕೆ ಆಹ್ವಾನಿಸಿದ್ದರು. ನಾಲ್ಕುವರೆ ದಶಕದ ಹಿಂದೆಯೇ ಸಿಂದಗಿಯ ನಾಟಕ ಥಿಯೇಟರ್‌ವೊಂದರಲ್ಲಿ ಮಹಾದೇವಿ ಒಂದು ತಿಂಗಳು ಪ್ರವಚನ ನೀಡಿದರು.

ಮಾತೆಯ ಪ್ರವಚನ ಆಲಿಸಿದ ಬಹುತೇಕರು ಇವರ ಪ್ರಭಾವಕ್ಕೊಳಗಾದರು. ಪ್ರವಚನ ನಡೆದಿದ್ದ ಅವಧಿಯಲ್ಲೇ ಸಿಂದಗಿಯಲ್ಲಿ ಬಸವ ಸಮಿತಿಯೊಂದನ್ನು ಅಸ್ಥಿತ್ವಕ್ಕೆ ತಂದರು. ಅಂದಿನಿಂದಲೂ ಬಸವ ಸಮಿತಿ ಕ್ರಿಯಾಶೀಲವಾಗಿದೆ. ಬದಲಾದ ಕಾಲಘಟ್ಟದಲ್ಲಿ ರಾಷ್ಟ್ರೀಯ ಬಸವದಳವಾಗಿ ಪರಿವರ್ತನೆ ಹೊಂದಿದೆ.

ಮಾತೆಗೂ ಸಿಂದಗಿಗೂ ಅವಿನಾಭಾವ ಸಂಬಂಧ. ಇಂದಿಗೂ ಮಹಾದೇವಿಯ ಅನುಯಾಯಿಗಳು, ಭಕ್ತರು ಇಲ್ಲಿದ್ದಾರೆ. 1978ರಲ್ಲಿ ನಡೆದ ಕಲ್ಯಾಣ ನಾಡಿನ ಚತುರ್ಥ ವೀರಶೈವ ಸಮ್ಮೇಳನದಲ್ಲೂ ಮಾತೆ ಭಾಗಿಯಾಗಿದ್ದು ಇದೀಗ ಸ್ಮರಣಾರ್ಹ.

ಆರೋಗ್ಯ ವಿಚಾರಿಸಿದ್ದ ಗೃಹ ಸಚಿವ:

ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯ ಮುಂಚೂಣಿ ನಾಯಕರಾಗಿ ಎಂ.ಬಿ.ಪಾಟೀಲ ಗುರುತಿಸಿಕೊಂಡ ಬಳಿಕ ಮಾತೆ ಮಹಾದೇವಿ ಜತೆ ಆಪ್ತ ಒಡನಾಟ ಬೆಸೆದುಕೊಂಡಿತು.

ಕಳೆದ ಫೆಬ್ರುವರಿಯಲ್ಲಿ ಮಾತೆ ಅನಾರೋಗ್ಯಕ್ಕೀಡಾದ ಸಂದರ್ಭ ಎಂ.ಬಿ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿದ್ದರು. ಇದೇ ಸಂದರ್ಭ ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲೂ ಭಾಗಿಯಾಗಿದ್ದರು. ಆಗಲೇ ಎಂ.ಬಿ.ಪಾಟೀಲ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಸಮ್ಮೇಳನದ ವೇದಿಕೆಯಿಂದ ಪ್ರತಿಧ್ವನಿಗೊಂಡಿತ್ತು.

ಈಚೆಗಷ್ಟೇ ಆರೋಗ್ಯ ತೀವ್ರ ಕ್ಷೀಣಿಸಿದಾಗಲೂ ಗೃಹ ಸಚಿವ ಎಂ.ಬಿ.ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಟ್ಟಿಗೆ ಚಿಕಿತ್ಸೆ ಬಗ್ಗೆ ಚರ್ಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT