ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್ ಡೌನ್ ಅವೈಜ್ಞಾನಿಕ: ಡಿವೈಎಫ್‌ಐ ಆರೋಪ

Last Updated 9 ಮೇ 2021, 11:37 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ ಡೌನ್ ನಿಯಮಗಳು ಅಪ್ರಾಯೋಗಿಕ ಮಾತ್ರವಲ್ಲ, ಅಮಾನವೀಯವೂ ಆಗಿದೆ. ಈ ನಿಯಮಗಳು ಜನಸಾಮಾನ್ಯರನ್ನು ಹಸಿವಿಗೆ ದೂಡಿ ಸಾಯಿಸಲಿದೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಈರಣ್ಣ ಬೆಳ್ಳುಂಡಗಿ ಮತ್ತು ಪ್ರವೀಣ ಹಿರೇಮಠ ಆರೋಪಿಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ತಡೆಯಲು ಸೂಕ್ತ ಚಿಕಿತ್ಸೆ ಒದಗಿಸಿ, ಸಾವು ನೋವು ತಡೆಯಲು ಪೂರ್ಣವಾಗಿ ವಿಫಲಗೊಂಡಿರುವ ರಾಜ್ಯ ಸರ್ಕಾರ ಕಳೆದ ಮೂರು ವಾರಗಳಿಂದ ಜನಸಂದಣಿ ತಡೆಯುವ ನಿಟ್ಟಿನಲ್ಲಿ ಹೊರಡಿಸುತ್ತಿರುವ ಆದೇಶಗಳಲ್ಲಿ ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತಿದೆ ಎಂದು ದೂರಿದ್ದಾರೆ.

ನೆರೆಯ ರಾಜ್ಯ ಸರ್ಕಾರಗಳ ಮಾದರಿಯಂತೆ ಚಿಕಿತ್ಸೆ, ಪರಿಹಾರ, ನಿರ್ಬಂಧದಂತಹ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಜನತೆಯನ್ನು ಮನೆಗಳಲ್ಲಿ ಕೂಡಿ ಹಾಕುವ, ಅಗತ್ಯ ವಸ್ತುಗಳ ಖರೀದಿ ಸಂದರ್ಭ ಜನಜಂಗುಳಿ ಸೇರುವಂತಹ ತಪ್ಪುಗಳನ್ನು ಎಸಗುತ್ತಾ ಬಂದಿದೆ ಎಂದಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್, ಹಾಸಿಗೆ, ಚಿಕಿತ್ಸೆಗಳು ಇನ್ನೂ ಸರಿಯಾಗಿ ದೊರಕದ ದಯನೀಯ ಸ್ಥಿತಿ ಒಂದಡೆಯಾದರೆ, ಔಷಧಗಳ ಕಾಳದಂಧೆ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಸಂತ್ರಸ್ತ ಜನತೆಯನ್ನು ಹೈರಾಣಾಗಿಸಿದೆ ಎಂದು ದೂರಿದ್ದಾರೆ.

ಯಾವುದೇ ಪರಿಹಾರ ಪ್ಯಾಕೇಜ್‌ಗಳಿಲ್ಲದೆ ಜ‌ನತೆಯನ್ನು ಮನೆಗಳಲ್ಲಿ ಕೂಡಿಹಾಕುವ, ದುಡಿಮೆಯ ಅವಕಾಶ ನಿರಾಕರಿಸುವ ವಾರಾಂತ್ಯ ಕರ್ಫ್ಯೂ, ಜನತಾ ಕರ್ಫ್ಯೂಗಳು ಜನತೆಯ ಚೈತನ್ಯವನ್ನೇ ಕಡಿದು ಹಾಕಿದೆ. ಈಗ ಇವೆಲ್ಲದರ ಅತಿ ಎಂಬಂತೆ ಪೂರ್ಣ ಲಾಕ್ ಡೌ‌ನ್ ಘೋಷಿಸಿ ಕೇವಲ ಕಾಲ್ನಡಿಗೆಯಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಎಂದು ಆದೇಶಿಸಿರುವುದು ಜನತೆಯ ಬದುಕುವ ಹಕ್ಕಿಗೆ ಪೆಟ್ಟು ನೀಡಲಿದೆ ಎಂದಿದ್ದಾರೆ.

ಲಾಕ್ ಡೌನ್ ನಿಯಮಗಳು ಯಾವ ಕಾರಣಕ್ಕೂ ಪ್ರಾಯೋಗಿಕವಲ್ಲ.‌ ಅಗತ್ಯ ವಸ್ತುಗಳ ಖರೀದಿ ಅವಧಿಯಲ್ಲಿ ಆಟೋ ಸಹಿತ ಖಾಸಗಿ ವಾಹನಗಳ ಬಳಕೆಗೆ ಅವಕಾಶ ಒದಗಿಸಬೇಕು. ಕೂಲಿಕಾರರ ದುಡಿಮೆಗೆ ಹಾಕಿರುವ ನಿರ್ಬಂಧಗಳನ್ನು ಸರಳಗೊಳಿಸಬೇಕು, ಪಡಿತರ ಸಾಮಾಗ್ರಿ, ಹಸಿದವರಿಗೆ ಸಿದ್ದಪಡಿಸಿದ ಆಹಾರ, ದುಡಿಮೆಯ ಅವಕಾಶ ಕಳೆದುಕೊಂಡವರಿಗೆ ನಗದು ಪರಿಹಾರ ಪ್ಯಾಕೇಜ್ ಒದಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT