ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಅನುಯಾಯಿಗಳಿಂದ ಮನುಸ್ಮೃತಿ ಆರಾಧನೆ ಆಘಾತಕಾರಿ: ಶಾಸಕ ರಮೇಶ ಕುಮಾರ್‌ ವಿಷಾದ

‘ವರ್ತಮಾನದ ಬದುಕು' ವಿಶೇಷ ಉಪನ್ಯಾಸದಲ್ಲಿ ಶಾಸಕ ರಮೇಶಕುಮಾರ್‌ ವಿಷಾದ
Last Updated 27 ಜುಲೈ 2022, 14:24 IST
ಅಕ್ಷರ ಗಾತ್ರ

ವಿಜಯಪುರ:ಬಸವಣ್ಣನ ಅನುಯಾಯಿ ಸಮಾಜ, ಮಠಮಾನ್ಯಗಳು ಇಂದು ವಚನ, ಶರಣ ತತ್ವಗಳಿಗೆ ವಿರುದ್ಧವಾಗಿ ಮನುಸ್ಮೃತಿಯ ಆರಾಧಕರಾಗುತ್ತಿರುವುದು ಆಘಾತಕಾರಿ ಎಂದು ಶಾಸಕ, ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ವಿಷಾದ ವ್ಯಕ್ತಪಡಿಸಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶಿವಯೋಗಿ, ಮಹಾದಾನಿ ಬಂಗಾರಮ್ಮ ಸಜ್ಜನ, ಶಿಕ್ಷಣ ಪ್ರೇಮಿ ದಿ.ಬಿ.ಎಂ.ಪಾಟೀಲರ ಸ್ಮರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವರ್ತಮಾನದ ಬದುಕು' ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಮೌಢ್ಯ, ಜಾತಿ, ಮತಬೇಧ, ಶೋಷಣೆಯ ವಿರುದ್ಧ ಸಿಡಿದೆದ್ದ ವಚನಕಾರರ ಋಣವನ್ನು ಈ ಸಮಾಜ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಆದರೆ,ರಾಜಕೀಯ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಪ್ರಜ್ಞಾಪೂರ್ವಕವಾಗಿ ಮನುಸ್ಮೃತಿ ಪುನರ್‌ ಪ್ರತಿಷ್ಠಾಪನೆಗಾಗಿಬಸವಣ್ಣನ ನೆರಳಿನಲ್ಲಿ ಹೋಗುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ಮನುಷ್ಯರನ್ನು ಗುಲಾಮಗಿರಿಗೆ ತಳ್ಳುವ ಮನುಸ್ಮತಿಯನ್ನು ನಾಗರಿಕರಾದವರು ವಿರೋಧಿಸಬೇಕು. ದೇಶದ ಸಂವಿಧಾನ, ಬಸವತತ್ವವನ್ನು ರಕ್ಷಿಸಬೇಕು ಎಂದು ಹೇಳಿದರು.

‘ಜಪಾನ್‌, ಜರ್ಮನಿ, ಇಟಲಿ ಜಗತ್ತಿನಲ್ಲಿ ಬಲಿಷ್ಠವಾಗಿರಲು ಆ ದೇಶಗಳಲ್ಲಿ ಏಕ ನಾಯಕ, ಏಕ ಧರ್ಮ ಕಾರಣ. ಇದೇ ನೀತಿ ಭಾರತವೂ ಅನುಸರಿಸಬೇಕು’ ಎಂದುಆರ್‌ಎಸ್‌ಎಸ್‌ ಸರಸಂಘ ಚಾಲಕರಾಗಿದ್ದ ಗೋಲ್ವಾಲ್ಕರ್‌ ಪ್ರತಿಪಾದಿಸಿದ್ದರು. ಸದ್ಯ ದೇಶದಲ್ಲಿ ಒಂದು ದೇಶ, ಒಂದು ಧರ್ಮ, ಒಂದು ಚುನಾವಣೆ, ಒಬ್ಬ ನಾಯಕ ಎಂಬ ಗೋಲ್ವಾಲ್ಕರ್‌ ಚಿಂತನೆ ಹರಿದಾಡತೊಡಗಿದೆ. ಪ್ರಜಾಪ್ರಭುತ್ವ ದೇಶಕ್ಕೆ ಈ ನೀತಿ ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಭಾರತದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಮುಸ್ಲಿಂ, ಕ್ರಿಶ್ಚಿಯನ್ನರು ಶರಣಾಗಬೇಕು, ಅಡಿಯಾಳಾಗಬೇಕು; ಇಲ್ಲವೇ ದೇಶ ತೊರೆದು ಹೋಗಬೇಕು ಎಂಬುದು ಆರ್‌ಎಸ್‌ಎಸ್‌ ನಾಯಕರ ಅಜೆಂಡವಾಗಿದೆ. ಅವರು ಹೇಳಿದ ಮಾತು, ಈಗ ಬಿಜೆಪಿ ಸರ್ಕಾರ ನಡೆದುಕೊಳ್ಳುವ ರೀತಿ ಎರಡೂ ಒಂದೇ ಆಗಿದೆ ಎಂದರು.

ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡೆಗೆವಾರ್‌ ಮತ್ತು ಕ್ರಾಂತಿಕಾರಿ ಭಗತ್‌ಸಿಂಗ್ ಒಂದೇ ವಯಸ್ಸಿನವರು. ಭಗತ್‌ ಸಿಂಗ್‌ ನೇಣಿಗೆ ಏರುವಾಗ ಹೆಡೆಗೆವಾರ್‌ ಪ್ರಶ್ನಿಸಲಿಲ್ಲ ಏಕೆ, ವಿರೋಧಿಸಲಿಲ್ಲ ಏಕೆ, ಮೌನವಾಗಿದ್ದದ್ದುಏಕೆ ಎಂದು ಪ್ರಶ್ನಿಸಿದರು.

ಭಗತ್‌ ಸಿಂಗ್‌ ನೇಣಿಗೇರುವ ಸಂದರ್ಭದಲ್ಲಿ ‘ಇನ್‌ ಕ್ವಿಲಾಬ್‌ ಜಿಂದಾಬಾದ್‌, ಭಾರತ್‌ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರು. ಅವರ ಘೋಷಣೆಯ ಕೊನೆಯ ಭಾಗವಾದ ‘ಭಾರತ್‌ ಮಾತಾಕಿ ಜೈ’ ಎಂಬುದನ್ನು ಮಾತ್ರ ಕಿತ್ತುಕೊಂಡವರು ಇಂದು ತಾವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಂತೆ ಬಿಂಬಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಪ್ರತಿಪಾದಕ ಎಂದು ಸಂಘ ಪರಿವಾರದವರು ವಕಾಲತ್ತು ವಹಿಸುತ್ತಿದ್ದಾರೆ. ಆದರೆ, ಅವರು ಹಿಂದೂ ಧರ್ಮದಲ್ಲಿರುವ ಅನಿಷ್ಠ ಪದ್ಧತಿ, ತಾರತಮ್ಯ, ಜಾತಿ ವ್ಯವಸ್ಥೆಯಿಂದ ರೋಷಿ ಹೋಗಿದ್ದರು. ವಿಶ್ವದ ಎಲ್ಲ ಧರ್ಮಗಳಿಂತ ಹಿಂದೂ ಧರ್ಮ ಶ್ರೇಷ್ಠ. ಹಾಗೆಯೇ ಇತರೆಲ್ಲ ಧರ್ಮಗಳಿಗಿಂತ ಕ್ರೂರ ಎಂದೂ ಹೇಳಿದದ್ದರು. ಅಷ್ಟೇ ಅಲ್ಲದೇ ತಮ್ಮ ಭಾಷಣದಲ್ಲಿ ‘ಅರೆಬೆತ್ತಲೆಯ ಭಾರತೀಯರೇ, ಅರೆಹೊಟ್ಟೆಯ ಭಾರತೀಯರೇ, ರೋಗರುಜಿನಗಳಿಂದ ಬಳುತ್ತಿರುವ ಭಾರತೀಯರೇ, ಅಸ್ಪೃಶ್ಯ ಭಾರತೀಯರೇ, ಬ್ರಾಹ್ಮಣ ಭಾರತೀಯರೇ ಎದ್ದೇಳಿ, ಒಂದಾಗಿ, ಸದೃಢ ಭಾರತವನ್ನು ಕಟ್ಟಿ’ ಎಂದು ಕರೆಕೊಟ್ಟಿದ್ದರು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ವಿಚಾರವಾದಿ ಎಂ.ಎಂ.ಕಲಬುರ್ಗಿ ಅವರನ್ನು ಏಕೆ ಕೊಲ್ಲಲಾಯಿತು ಗೊತ್ತೇ? ಕಲಬುರ್ಗಿ ಬಸವ ಧರ್ಮದ ಅನುಯಾಯಿ, ಹಿಂದೂ ಧರ್ಮದ ವಿರೋಧಿ ಎಂಬ ಕಾರಣಕ್ಕೆ ಕೊಲ್ಲಲಾಯಿತು. ಆದರೆ, ಅವರ ವಿಚಾರಧಾರೆಗಳಿಗೆ ಎಂದಿಗೂ ಸಾವಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸ ಇದೆ. ಅಂದಿನ ಕಾಂಗ್ರೆಸ್‌ಗೂ ಇಂದಿನ ಕಾಂಗ್ರೆಸ್‌ಗೂ ವ್ಯತ್ಯಾಸ ಇರಬಹುದು. ಆದರೆ, ಈ ದೇಶಕ್ಕಾಗಿ ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೇ, ಪ್ರಾಣ ಕಳೆದುಕೊಳ್ಳದೇ ಅಂದು ಸುಮ್ಮನಿದ್ದವರು ಇಂದು ದೇಶಭಕ್ತಿ ಪಾಠ ಹೇಳುತ್ತಿರುವುದು ನಾಚಿಕೆಯ ಸಂಗತಿ ಎಂದರು.

ಶಾಸಕ ಎಂ.ಬಿ.ಪಾಟೀಲ, ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು.

***

ವಚನ ಸಾಹಿತ್ಯ ಜಗತ್ತಿಗೆ ಮಾದರಿಯಾಗಿದೆ. ವಚನಗಳ ತತ್ವ, ತಾತ್ಪರ್ಯ ಬಿಟ್ಟು ಮನುವಾದಿಗಳಿಗೆ ಪ್ರೋತ್ಸಾಹ ಮಾಡುವುದು ಅಕ್ಷಮ್ಯ ಅಪರಾಧ

–ಕೆ.ಆರ್‌.ರಮೇಶ್‌ ಕುಮಾರ್‌,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT