ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೆಚ್ಚಿನ ಮೇಷ್ಟ್ರು; ಗಣಿತ ಸರಳೀಕರಿಸಿದ ಶಿಕ್ಷಕ

Last Updated 5 ಜನವರಿ 2019, 19:30 IST
ಅಕ್ಷರ ಗಾತ್ರ

ನಾಲತವಾಡ:ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗಣಿತ ಇಂದಿಗೂ ಬಿಡಿಸಲಾಗದ ಕಗ್ಗಂಟು. ಕಬ್ಬಿಣದ ಕಡಲೆ. ಇದೇ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಈ ವಿಷಯದಲ್ಲೇ ನಪಾಸಾಗುತ್ತಾರೆ. ಇಲ್ಲವೇ ಕಷ್ಟಪಟ್ಟು 30, 35 ಅಂಕಕ್ಕೆ ಸೀಮಿತಗೊಳ್ಳುತ್ತಾರೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿನ ಗಣಿತ ಭಯ ಹೋಗಲಾಡಿಸುವ ಸಂಕಲ್ಪ ತೊಟ್ಟವರೇ ಶಿಕ್ಷಕ ಎಸ್.ವೈ.ಪಾಟೀಲ. ಪಟ್ಟಣದ ವೀರೇಶ್ವರ ಪ್ರೌಢಶಾಲೆಯ ಗಣಿತ ಶಿಕ್ಷಕರಿವರು.

ಈ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡ ಬಳಿಕ ಮಕ್ಕಳಲ್ಲಿನ ಗಣಿತ ಭಯ ಹೋಗಲಾಡಿಸಿದ್ದಾರೆ. ಎಲ್ಲರೂ ಸರಳವಾಗಿ ಅರ್ಥೈಸಿಕೊಳ್ಳುವಂತೆ ಬೋಧಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ‘ಗಣಿತ ಭಯ’ ಹೋಗಲಾಡಿಸುವ ಕುರಿತಂತೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಗಣಿತದ ಆಸಕ್ತಿ ಮೂಡಿಸುವುದು ಹೇಗೆ ?
ನಮ್ಮ ದೈನಂದಿನ ಬದುಕಿನಲ್ಲಿ ಎದುರಾಗುವ, ಬಳಕೆಯಾಗುವ ಸಮಸ್ಯೆಗಳನ್ನು ಮೊದಲು ಶಿಕ್ಷಕರು ಅರಿತು, ಇವನ್ನು ಪಠ್ಯದೊಂದಿಗೆ ತಾಳೆ ಮಾಡುವುದು. ನಂತರ ವಿದ್ಯಾರ್ಥಿಗಳಲ್ಲಿ ಇದನ್ನು ಹೇಳಿದರೆ, ಅವರಲ್ಲಿ ಆಸಕ್ತಿ ಮೂಡುತ್ತದೆ. ಜತೆಗೆ ಕುತೂಹಲ ಕೆರಳುತ್ತದೆ. ಸುಲಭವಾಗಿ ಮನದಟ್ಟಾಗಲಿದೆ.

* ಕಬ್ಬಿಣದ ಕಡಲೆಯೇ ?
ಖಂಡಿತವಾಗಿಯೂ ಇಲ್ಲ. ಗಣಿತ ಅರ್ಥೈಸಿಕೊಂಡರೇ ಸಾಕು, ತುಂಬಾನೇ ಸುಲಭ. ಸರಳ. ಮಕ್ಕಳಿಗೆ ಮನದಟ್ಟಾಗುವಂತೆ ಹೇಳುವುದಷ್ಟೇ ಪ್ರಮುಖವಾದುದು.

* ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರಿ ಹೇಗೆ ?
ಪಾಸಿಂಗ್ ಪ್ಯಾಕೇಜ್‌ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಬರಬಹುದಾದ ಸಂಭವನೀಯ ನಕ್ಷೆಗಳು, ಪ್ರಮೇಯಗಳು, ಸೂತ್ರಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸಿದರೆ, ನಪಾಸಿನ ಭಯವೇ ಇರಲ್ಲ.

* ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹೇಗೆ ?
ಆರಂಭದಲ್ಲೇ ಮೂಲ ಕ್ರಿಯೆಗಳ ಕಲ್ಪನೆ ಮೂಡಿಸಬೇಕು. ಪ್ರತಿಯೊಬ್ಬರ ಬುದ್ದಿಮಟ್ಟ, ಸಾಮರ್ಥ್ಯಕ್ಕನುಗುಣವಾಗಿ ಒಂದೊಂದು ತಂಡ ರಚಿಸುವುದು. ಅದಕ್ಕೊಬ್ಬ ನಾಯಕನನ್ನು ನೇಮಿಸಿ, ಗಣಿತದ ಸಮಸ್ಯೆಗಳನ್ನು ಬಿಡಿಸಲು ಶುರು ಮಾಡಬೇಕು.

ಪ್ರತಿ ಗುಂಪಿಗೂ ಬಹುಮಾನ ಘೋಷಿಸುವ ಮೂಲಕ ಉತ್ತೇಜನ ನೀಡುವುದು. ನಾನೂ ಸಮರ್ಥ ಎಂಬ ಭಾವನೆ ಆಯಾ ಗುಂಪಿನ ಎಲ್ಲರಲ್ಲೂ ಮೂಡುವ ತನಕವೂ ಸೂಕ್ತ ಮಾರ್ಗದರ್ಶನ. ತಪ್ಪುಗಳನ್ನು ನಿರಂತರವಾಗಿ ತಿದ್ದುವ ಮೂಲಕ ಹುರಿದುಂಬಿಸುವ ಕೆಲಸ ಮಾಡಬೇಕಿದೆ.

ಪ್ರತಿ ಪಾಠ, ಘಟಕ, ಸೆಮಿಸ್ಟರ್‌ಗೂ ಪರೀಕ್ಷೆ ನಡೆಸಿ, ಪರೀಕ್ಷಾ ಭಯ ದೂರ ಮಾಡುವುದು. ವಾರ್ಷಿಕ ಪರೀಕ್ಷೆಯಲ್ಲಿ 100 ಅಂಕ ಪಡೆಯುವವರಿಗೆ ಬಹುಮಾನ ನೀಡುವುದು ನಾನು ಅನುಸರಿಸುವ ಕೆಲ ಕ್ರಮಗಳು.

ವರ್ಗ ಕೋಣೆಯ ಹೊರಗೆ ನಾನು ಶಿಕ್ಷಕನಲ್ಲ. ಅವರು ವಿದ್ಯಾರ್ಥಿಗಳಲ್ಲ. ಆತ್ಮೀಯ ಮಿತ್ರರಂತೆ ನಡೆದುಕೊಂಡಾಗಲೇ ಶಿಕ್ಷಕರ ಗೌರವ ಹೆಚ್ಚಲಿದೆ. ಫಲಿತಾಂಶವೂ ಪರಿಣಾಮಕಾರಿಯಾಗಲಿದೆ. ನಮ್ಮ ವೃತ್ತಿಗೂ ಒಂದು ಘನತೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT