ಶನಿವಾರ, ಏಪ್ರಿಲ್ 1, 2023
32 °C
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ

ಮಾತೃವಂದನಾ: ಗರ್ಭಿಣಿ, ಬಾಣಂತಿಯರಿಗೆ ವರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗರ್ಭಿಣಿ, ಬಾಣಂತಿಯರ ಆರೋಗ್ಯ ಕಾಪಾಡಲು ಹಾಗೂ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿ ಮರಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಮಹಿಳೆಯರಿಗೆ ವರದಾನವಾಗಿದೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು.

ನಗರದ ಜಿಲ್ಲಾ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮಾತೃವಂದನ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ಆದ್ಯತೆ ನೀಡಲಾಗಿದ್ದು,  ಇಲಾಖೆಯ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು ಎಂದರು.

ಮೊದಲ ಹೆರಿಗೆಗೆ ಸೀಮಿತವಾಗಿ ₹ 5 ಸಾವಿರ ನಗದನ್ನು ಅರ್ಹ ಫಲಾನುಭವಿಗಳ ಖಾತೆಗೆ ಒದಗಿಸುವ ಯೋಜನೆ ಇದಾಗಿದೆ. ನೋಂದಣಿಯಾದ ಗರ್ಭಿಣಿಯರಿಗೆ 1ನೇ ಕಂತಾಗಿ ₹ 1 ಸಾವಿರ, 6ನೇ ತಿಂಗಳಿಗೆ ₹ 2 ಸಾವಿರ ಮತ್ತು ಮಗು ಜನನ ನೋಂದಣಿ ಸಂದರ್ಭದಲ್ಲಿ ಮೂರನೇ ಕಂತಾಗಿ ₹ 2 ಸಾವಿರ ಸಹಾಯಧನವನ್ನು ನೇರ ನಗದು ಮೂಲಕ ವರ್ಗಾಯಿಸಲಾಗುವುದು ಎಂದರು.

ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಅಪೌಷ್ಠಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಗರ್ಭೀಣಿಯರು, ಬಾಣಂತಿಯರು, ಆರು ವರ್ಷದೊಳಗಿನ ಮಕ್ಕಳು ಹಾಗೂ ಹದಿಹರೆಯದ ಬಾಲಕ, ಬಾಲಕಿಯರ ರಕ್ತಹೀನತೆ ತಡೆಗಟ್ಟುವುದು, ಕಡಿಮೆ ತೂಕದ ಶಿಶುಗಳ ಜನನದ ಮಟ್ಟವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ವಿಜಯಪುರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮೆಹಬೂಬ ಜಿಲಾನಿ ಮಾತನಾಡಿ, ಅಪೌಷ್ಠಿಕತೆ  ಹೋಗಲಾಡಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.

ವಿಜಯಪುರ ತಾಲ್ಲೂಕು ವೈದ್ಯಾಧಿಕಾರಿ ಡಾ.ಕವಿತಾ ದೊಡಮನಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಜನರಿಗೆ ಮಕ್ಕಳ ಚುಚ್ಚುಮದ್ದು ಮತ್ತು ಕೋವಿಡ್-19 ಲಸಿಕಾಕರಣದ ಅರಿವು ಮೂಡಿಸಲು ಸಲಹೆ ನೀಡಿದರು.

ಜಿಲ್ಲಾ ನಿರೂಪಣಾಧಿಕಾರಿ ದೀಪಾಕ್ಷಿ ಜಾನಕಿ ಮಾತನಾಡಿ, ನಿಗದಿತ ಸಮಯದೊಳಗೆ ಕೇಂದ್ರ ಪುರಸ್ಕೃತ ಯೋಜನೆಗಳ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದರಿಂದ ಅವುಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ವಿಜಯಪುರ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಗಳೂರ ಮಾತನಾಡಿ, ಕೋವಿಡ್-19 ಮೂರನೇ ಅಲೆಗೆ ಮಕ್ಕಳು ಗುರಿಯಾಗದಂತೆ ನೋಡಿಕೊಳ್ಳುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಸೆಪ್ಟೆಂಬರ್‌ 1ರಿಂದ 7ರ ವರೆಗೆ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮಾತೃವಂದನ ಸಪ್ತಾಹ ಹಾಗೂ ಸೆಪ್ಟೆಂಬರ್‌ ತಿಂಗಳು ಪೂರ್ತಿ ಪೋಷಣ್ ಮಾಸ ‌ಆಚರಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಸಮುದಾಯ ಆಧಾರಿತ ಚಟುವಟಿಕೆಗಳಾದ ಸೀಮಂತ ಹಾಗೂ ಅನ್ನಪ್ರಾಶನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು.

****

ಪೋಷಣ್ ಮಾಸಾಚರಣೆಯಲ್ಲಿ ಮಗುವಿನ ಮೊದಲ ಸಾವಿರ ದಿನಗಳ ಮೇಲೆ ಒತ್ತು ನೀಡಲಾಗುವುದು

-ಕೆ.ಕೆ.ಚವ್ಹಾಣ, ಉಪನಿರ್ದೇಶಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು