ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಪಠ್ಯ ಪುಸ್ತಕ ಕೈಬಿಡಿ: ಎಂ.ಬಿ.ಪಾಟೀಲ ಆಗ್ರಹ

Last Updated 6 ಜೂನ್ 2022, 12:40 IST
ಅಕ್ಷರ ಗಾತ್ರ

ವಿಜಯಪುರ: ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯನ್ನು ವಿಸರ್ಜಿಸಿದರೆ ಮಾತ್ರ ಸಾಲದು, ಈ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯ ಪುಸ್ತಕಗಳನ್ನು ಕೈಬಿಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಮಹಾತ್ಮರು, ಪುಣ್ಯಪುರುಷರು, ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಕಾಂಗ್ರೆಸ್‌ ಎಂದೂ ತಿರುಚುವ ಕೆಲಸ ಮಾಡಿಲ್ಲ. ಇತಿಹಾಸ ಇದ್ದಂತೆ ಉಳಿಸಿಕೊಳ್ಳಬೇಕೇ ಹೊರತು ತಿರುಚಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆರ್‌ಎಸ್‌ಎಸ್‌ ಮುಖಂಡರಾದ ಸಾವರ್ಕರ್‌, ಹೆಡಗೆವಾರ್‌ ಅವರ ಪಾಠವನ್ನು ಪಠ್ಯದಿಂದ ಕೈಬಿಡುವುದಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾವರ್ಕರ್‌, ಹೆಡಗೆವಾರ್‌ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ಬಳಿ ಕ್ಷಮಾಪ‍ಣೆ ಕೇಳಿರುವ ಅಂಶವನ್ನು ಸೇರಿಸಿಬೇಕು ಎಂದರು.

ಸಮರ್ಥ ಅಭ್ಯರ್ಥಿಗಳು: ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್‌ ಸಂಕ ಅವರು ಸಮರ್ಥ ಅಭ್ಯರ್ಥಿಗಳಾಗಿದ್ದು, ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕಾಶ ಹುಕ್ಕೇರಿ ಅವರು ಸರಳ, ಸಜ್ಜನಿಕೆಯ ರಾಜಕಾರಣಿ. ಈ ಹಿಂದೆ ಸಚಿವರಾಗಿ, ಸಂಸದರಾಗಿ, ಶಾಸಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಅನುಭವ ಇದೆ. ಶಿಕ್ಷಕರ ಸಮಸ್ಯೆ, ಕುಂದುಕೊರತೆಗಳ ಅರಿವಿದ್ದು, ಸ್ಪಂದಿಸಲಿದ್ದಾರೆ ಎಂದರು.

ಸುನೀಲ್‌ ಸಂಕ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಿದ್ದಾರೆ ಎಂದು ಹೇಳಿದರು.

ಶಹಪೂರ ವಿಫಲ: ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾತನಾಡಿ, ಎರಡು ಅವಧಿಗೆ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿಯ ಅರುಣ ಶಹಪೂರ ಅವರು ಶಿಕ್ಷಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.

ರಾಜಕಾರಣದಿಂದ ಅವರು ದೂರ ಇದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣ ಅವರೇ ಹೇಳಿರುವಂತೆ ಶಹಪುರ ಏನು ಕೆಲಸ ಮಾಡಿದ್ದಾರೆ ಎಂಬುದೇ ಯಾರಿಗೂ ಗೊತ್ತಿಲ್ಲ. 12 ವರ್ಷಗಳ ಕಾಲ ಸ್ಥಾನಕ್ಕೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಹೊಸ ಪಿಂಚಣಿ ಪದ್ಧತಿಯನ್ನು ರದ್ದು ಪಡಿಸಿ ಹಳೆ ಪಿಂಚಣಿ ಪದ್ಧತಿ ಜಾರಿಗೊಳಿಸಲಾಗುವುದು, ಕೇಂದ್ರ ಸರ್ಕಾರದ ನೌಕರರ ವೇತನದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಶ್ರೇಣಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

1995ರ ನಂತರ ಪ್ರಾರಂಭಿಸಲಾದ ಅನುದಾನ ರಹಿತ ಶಾಲಾ–ಕಾಲೇಜುಗಳನ್ನು ಅನುದಾನಕ್ಕೆ ಒಫಡಿಸಲು ಆದ್ಯತೆ ನೀಡಲಾಗುವುದು ಎಂದರು.

ನಿರುದ್ಯೋಗ ನಿವಾರಣೆಗೆ ಆದ್ಯತೆ: ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್‌ ಸಂಕ ಮಾತನಾಡಿ, ಹನುಮಂತ ನಿರಾಣಿ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿಲ್ಲ. ಸೋಲಿನ ಭೀತಿಯಿಂದ ಹತಾಷೆಯಾಗಿರುವ ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ನಿರುದ್ಯೋಗ ನಿವಾರಣೆಗೆ ಹಾಗೂ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಲು ಒತ್ತು ನೀಡಲಾಗುವುದು ಎಂದು ಹೇಳಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಾಜು ಆಲಗೂರ, ಮುಖಂಡರಾದ ಸಂಗಮೇಶ ಬಬಲೇಶ್ವರ, ಅಬ್ದುಲ್‌ ಹಮೀದ್‌ ಮುಶ್ರೀಫ್‌, ವಿದ್ಯಾರಾಣಿ ತುಂಗಳ, ಮಹಮ್ಮದ್‌ ರಫೀಕ್‌ ಟಪಾಳ್‌, ಚಾಂದ್‌ ಸಾಬ್‌ ಗಡಗಲಾವ್‌, ಸುರೇಶ ಗೊಣಸಗಿ, ಸಾಹೇಬಗೌಡ ಬಿರಾರಾದ, ಜಮೀರ್‌ ಭಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT