ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಶೀಘ್ರ ವಿಮಾನ ಹಾರಾಟ: ಸಚಿವ ಸತೀಶ ಜಾರಕಿಹೊಳಿ

Published 26 ಡಿಸೆಂಬರ್ 2023, 15:49 IST
Last Updated 26 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ, ಪರಿಶೀಲಿಸಿದರು.

ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ ಕಟ್ಟಡ, ರನವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಭದ್ರತಾ ಉಪಕರಣ ಸೇರಿದಂತೆ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಂತೆ ಎಲ್ಲ ಭೌತಿಕ ಕಾಮಗಾರಿಗಳು ಶೇ90ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ವಿಮಾನಗಳ ಹಾರಾಟ ನಡೆಯಲಿದೆ. ಜನವರಿಯಲ್ಲಿ ನಾಗರಿಕ ವಿಮಾನಯಾನ ಪ್ರಾಧಿಕಾರ (ಡಿಜಿಸಿಎ) ಆಗಮಿಸಿ ಪರಿವೀಕ್ಷಣೆ ನಡೆಸಲಿದ್ದಾರೆ ಎಂದರು.

ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಸೇರಿದಂತೆ ಬಾಕಿ ಉಳಿದಿರುವ ಲೋಕೋಪಯೋಗಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣ ಕಾರ್ಯಾರಂಭವಾದರೇ ಈ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ವ್ಯಾಪಾರ ವಹಿವಾಟಕ್ಕೆ ಉತ್ತೇಜನ ದೊರೆಯಲಿದೆ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ಸಹಕಾರಿಯಾಗಲಿದೆ ಎಂದರು.

ಎರಡನೇ ಹಂತದ ₹125 ಕೋಟಿ ಗಳಲ್ಲಿ ಪುನಃ ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಕಾಮಗಾರಿಗಾಗಿ ₹105.60 ಕೋಟಿ ಹಾಗೂ ಏವಿಯೋನಿಕ್ಸ, ಸೆಕ್ಯೂರಿಟಿ ಉಪಕರಣಳ ಕಾಮಗಾರಿಗಾಗಿ ₹19.40 ಕೋಟಿ ನಿಗದಿಪಡಿಸಲಾಗಿದೆ. ಸಿವಿಲ್ ಕಾಮಗಾರಿಯಲ್ಲಿ ₹86.20 ಕೋಟಿಗಳ ಮೊತ್ತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಪ್.ಆರ್. ಕಟ್ಟಡ, ಕಂಪೌಂಡ್ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು.

ಸಿವಿಲ್ ಉಪಕಾಮಗಾರಿಯಲ್ಲಿ ಉಳಿದ ₹19.40 ಕೋಟಿಗಳಲ್ಲಿ ವಿವಿಧ ಉಪಕಾಮಗಾರಿಗಳಿದ್ದು, ₹1.39 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವುದನ್ನು ಪರಿಗಣಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ. ₹5.94 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣಕ್ಕೆ 24/7 ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ. ₹3.65 ಕೋಟಿ ಮೊತ್ತದ ವಿಮಾನ ನಿಲ್ದಾಣಕ್ಕೆ 2000 ಕಿ.ಲೋ.ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಮೊತ್ತದ ಕಾಮಗಾರಿಯ ಮೇಲ್ವಿಚಾರಣೆ ಮಾಡುವ ತಾಂತ್ರಿಕ ಸಂಸ್ಥೆಗೆ ಶುಲ್ಕ ಪಾವತಿ ಮಾಡುವುದು ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಶಾಸಕ ಯಶವಂತರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ರಾಜು ಆಲಗೂರ, ಎಚ್.ಸುರೇಶ, ಬಸವಣ್ಣೆಪ್ಪ ಕಲಶೆಟ್ಟಿ, ರಾಜುಕೃಷ್ಣ ಮುಜುಮದಾರ, ಗುತ್ತಿಗೆದಾರ ಎಸ್.ಎಸ್.ಆಲೂರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎಂ.ಪಾಟೀಲ ಇದ್ದರು.

ವಿಜಯಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು
ವಿಜಯಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು
ವಿಮಾನಗಳ ಹಾರಾಟದಿಂದ ಸಮಯ ಉಳಿತಾಯದ ಜೊತೆಗೆ ಪ್ರಮುಖ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ ಲಿಂಬೆ ಸೇರಿದಂತೆ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ
ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT