ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ–ಬಾಗಲಕೋಟೆ ವಿಧಾನ ಷರಿಷತ್‌ ಕ್ಷೇತ್ರ; ಅವಿರೋಧ ಆಯ್ಕೆಗೆ ತೆರೆಮರೆ ಕಸರತ್ತು

ಪಕ್ಷೇತರ ಅಭ್ಯರ್ಥಿಗಳ ಕಣದಿಂದ ಹಿಂದೆ ಸರಿಸಲು ಯತ್ನ
Last Updated 24 ನವೆಂಬರ್ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ದ್ವಿ ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ ಒಂದು ಡಜನ್‌ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಂಗಳವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ ಒಂದು ನಾಮಪತ್ರ ಮಾತ್ರ ಅಸಿಂಧುವಾಗಿದೆ(ಕ್ರಮಬದ್ಧವಾಗಿಲ್ಲ). ಉಳಿದ 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ಹಿಂತೆಗೆದುಕೊಳ್ಳಲು ನ.26 ಕೊನೆಯ ದಿನವಾಗಿದೆ.

ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಹೊರತಾಗಿ ಕಣದಲ್ಲಿ ಉಳಿದಿರುವ 10 ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾರಾರು ಕಣದಿಂದ ಹಿಂದೆ ಸರಿಯುತ್ತಾರೆ, ಯಾರಿಗೆ ತಮ್ಮ ಬೆಂಬಲ ಘೋಷಣೆ ಮಾಡುತ್ತಾರೆ ಎಂಬುದು ಕಾದುನೋಡಬೇಕಿದೆ. ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಚುನಾವಣೆ ಅನಿವಾರ್ಯವಾಗಲಿದೆ.

ಚುನಾವಣೆ ಖರ್ಚು–ವೆಚ್ಚಗಳು ಕೋಟಿ ಲೆಕ್ಕದಲ್ಲಿ ಆಗುವುದರಿಂದ ಅವಿರೋಧ ಆಯ್ಕೆಗೆ ಕಾಂಗ್ರೆಸ್‌, ಬಿಜೆಪಿ ತೆರೆ ಮರೆಯಲ್ಲಿ ಕಸರತ್ತು ನಡೆಸಿವೆ. ಮತದಾರರಿಗೆ ಹಣ ಹಂಚುವ ಬದಲು; ಪಕ್ಷೇತರ ಅಭ್ಯರ್ಥಿಗಳಿಗೆ ಅಲ್ಪಸ್ವಲ್ಪ ನೀಡಿ ಸ್ಪರ್ಧೆಯಿಂದ ಹಿಂದೆ ಸರಿಸಿದರೆ ಗೆಲುವಿನ ಹಾದಿ ಸುಲಭ ಎಂಬ ಲೆಕ್ಕಾಚಾರ ನಡೆದಿದೆ.

ವಿಸ್ತಾರವಾಗಿರುವ ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಸುತ್ತಿ, ಮತದಾರರನ್ನು ಭೇಟಿಯಾಗಿ ಮತಯಾಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜೊತೆಗೆ ಸಮಯವೂ ಇಲ್ಲ. ಹೀಗಾಗಿಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳಿಗೆ ಹಣ ಸೇರಿದಂತೆ ಇತರೆ ಆಮಿಷಗಳನ್ನು ಒಡ್ಡುವ ಮೂಲಕಹಿಂದಕ್ಕೆ ಸರಿಸುವ ಪ್ರಯತ್ನಗಳು ನಡೆದಿವೆ.

ಒಂದು ವೇಳೆ ಪಕ್ಷೇತರ ಅಭ್ಯರ್ಥಿಗಳುಕಣದಿಂದ ಹಿಂದೆ ಸರಿಯದಿದ್ದರೇ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಅಖಾಡದಲ್ಲಿ ಬೆವರಿನ ಜೊತೆ ಹಣದ ಹೊಳೆ ಹರಿಸುವುದುಅನಿವಾರ್ಯವಾಗಲಿದೆ.

ನಾಮಪತ್ರ ಸಲ್ಲಿಸಿರುವ ಪಕ್ಷೇತರ ಅಭ್ಯರ್ಥಿಗಳು ರಾಜಕೀಯವಾಗಿ ಅಂತಹ ಪ್ರಭಾವಿಗಳಲ್ಲದೇ ಇರುವುದರಿಂದ ಹಾಗೂ ಅವರ ಹಿಂದೆ ಅವಳಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಇಲ್ಲದೇ ಇರುವುದರಿಂದ ಹೆಚ್ಚು ತಲೆ ಕೆಡಸಿಕೊಳ್ಳದೇ ಚುನಾವಣೆ ಎದುರಿಸಲು ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಅಣಿಯಾಗಿದ್ದಾರೆ ಎನ್ನಲಾಗಿದೆ.

ವಿಸ್ತಾರವಾಗಿರುವ ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಶಾಸಕರು, ಮಾಜಿ ಶಾಸಕರು, ಸಚಿವರು, ಮಾಜಿ ಸಚಿವರು, ಸಂಸದರು, ಸ್ಥಳೀಯ ಸಂಸ್ಥೆಗಳ ಹಾಲಿ, ಮಾಜಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಪ್ರಮಾಣದ ಪಡೆ ಇರುವುದರಿಂದ ಚುನಾವಣೆ ಎದುರಿಸುವುದು ಸುಲಭ. ಆದರೆ, ಪಕ್ಷೇತರ ಅಭ್ಯರ್ಥಿಗಳಿಗೆ ಉಳಿದಿರುವ 15 ದಿನಗಳಲ್ಲಿ ಕ್ಷೇತ್ರವನ್ನು ಒಂದು ಸುತ್ತು ಹಾಕುಲು ಸಾಧ್ಯವಾಗುವುದಿಲ್ಲ.ಏನಿದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮಾತ್ರ ಸ್ಪರ್ಧೆ ಏರ್ಪಡಲಿದೆ. ಹೀಗಾಗಿ ಅವರನ್ನು ಕಡೆಗಣಿಸೋಣ ಎಂಬುದು ಎರಡೂ ಪಕ್ಷಗಳ ಮುಖಂಡರ ಅಭಿಪ್ರಾಯವಾಗಿದೆ.

ಅವಿರೋಧ ಆಯ್ಕೆಯಾದರೆ ಚುನಾವಣೆ ರಂಗು ಕಳೆದುಕೊಳ್ಳುತ್ತದೆ. ಗ್ರಾಮ ಪಂಚಾಯ್ತಿ, ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ, ಮಹಾನಗರ ಪಾಲಿಕೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರ ಮಹತ್ವ ಕಡಿಮೆಯಾಗುತ್ತದೆ. ಹೀಗಾಗಿ, ಏನೇ ಆದರೂ ಚುನಾವಣೆ ನಡೆಯಬೇಕು ಎಂಬ ಮಾತುಗಳು ಮತದಾರರಿಂದ ಕೇಳಿಬರುತ್ತಿವೆ.

****

ಡಜನ್‌ ಅಭ್ಯರ್ಥಿಗಳು!

ಬಿಜೆಪಿ ಅಭ್ಯರ್ಥಿ ಪಿ.ಎಚ್‌.ಪೂಜಾರ, ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿಗಳಾದ ದುರಗಪ್ಪ ಸಿದ್ದಾಪುರ, ಮಲ್ಲಿಕಾರ್ಜುನ ಕೆಂಗನಾಳ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ ಎಸ್‌.ಲೋಣಿ, ಕಾಂತಪ್ಪ ಇಂಚಗೇರಿ, ಶ್ರೀಮಂತ ಬಾರಿಕಾಯಿ, ಗೊಲ್ಲಾಳಪ್ಪಗೌಡ ಪಾಟೀಲ, ಬಸವರಾಜ ಯರನಾಳ, ಕಾಶಿಂ ಪಟೇಲ, ಮಾರುತಿ ಜಮೀನ್ದಾರ ಅವರ ನಾಮಪತ್ರ ಕ್ರಮಬದ್ಧವಾಗಿವೆ.ತುಳಸಪ್ಪ ದಾಸರ ಅವರ ಉಮೇದುವಾರಿಕೆ ತಿರಸ್ಕೃತವಾಗಿದೆ.

***

ಚುನಾವಣೆ ಎದುರಿಸಲು ತಯಾರಾಗಿದ್ದೇವೆ. ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಎದುರಿಸುವುದು ಅಷ್ಟು ಸುಲಭವಲ್ಲ. ಅವರೇ ಸೂಕ್ತ ನಿರ್ಧಾರ ಮಾಡಲಿ

–ಸುನೀಲ್‌ಗೌಡ ಪಾಟೀಲ, ಕಾಂಗ್ರೆಸ್‌ ಅಭ್ಯರ್ಥಿ, ವಿಜಯಪುರ

***

ಯಾರನ್ನೂ ಕಣದಿಂದ ಹಿಂದೆ ಸರಿಸುವ ಪ್ರಯತ್ನ ಮಾಡಲ್ಲ. ಒಂದು ವೇಳೆ ಅವರೇ ಕಣದಿಂದ ಹಿಂದೆ ಸರಿದು, ನಮಗೆ ಬೆಂಬಲ ಘೋಷಿಸಿದರೆ ಸಂತೋಷ

–ಪಿ.ಎಚ್‌.ಪೂಜಾರ, ಬಿಜೆಪಿ ಅಭ್ಯರ್ಥಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT