ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ಉಪಚುನಾವಣೆ: ನಿರೀಕ್ಷಿತ ಫಲಿತಾಂಶ–ಕುಡಿಯೊಡೆದ ಕುಟುಂಬ ರಾಜಕಾರಣ!

ಸಮ್ಮಿಶ್ರ ಸರ್ಕಾರಕ್ಕೆ ವಿಜಯ
Last Updated 11 ಸೆಪ್ಟೆಂಬರ್ 2018, 9:54 IST
ಅಕ್ಷರ ಗಾತ್ರ

ವಿಜಯಪುರ:ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ತೆರವಾದ ಒಂದು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಸುನೀಲಗೌಡ ಬಿ.ಪಾಟೀಲ ಜಯ ಗಳಿಸಿದರು.

ಅಭ್ಯರ್ಥಿಗಳ ಘೋಷಣೆ ಬೆನ್ನಿಗೆ ಅವಳಿ ಜಿಲ್ಲಾ ರಾಜಕಾರಣದ ಪಡಸಾಲೆಯಲ್ಲಿ ಏಕಪಕ್ಷೀಯ ಚುನಾವಣೆ ಎಂಬ ಮಾತೇ ಕೇಳಿ ಬಂದಿತ್ತು. ಜನ ಸಾಮಾನ್ಯರ ನಿರೀಕ್ಷೆಯಂತೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಬಿ.ಪಾಟೀಲ 2040 ಮತಗಳ ಅಂತರದಿಂದ ಭಾರಿ ವಿಜಯ ದಾಖಲಿಸಿದ್ದಾರೆ.

ವಿಜಯಪುರ ಜಿಲ್ಲಾ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಹೋದರರಿಬ್ಬರು ಒಟ್ಟಿಗೆ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದು ವಿಶೇಷ. ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಪ್ರಾತಿನಿಧ್ಯ ನೀಡದಿದ್ದ ಮತದಾರ, ಇದೀಗ ನಡೆದ ವಿಧಾನ ಪರಿಷತ್‌ನ ಉಪ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ಕುಡಿಗೆ ಆಶೀರ್ವದಿಸಿದ್ದಾರೆ.

ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿಯ ಮುರುಗೇಶ ನಿರಾಣಿ ವಿಧಾನಸಭಾ ಸದಸ್ಯರಿದ್ದರೆ, ಸಹೋದರ ಹನುಮಂತ ನಿರಾಣಿ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಇಬ್ಬರೂ ಬಿಜೆಪಿ ಪ್ರತಿನಿಧಿಗಳು. ಈ ಪರಂಪರೆಗೆ ವಿಜಯಪುರ ಜಿಲ್ಲೆಯ ಮತದಾರರು ಇದೀಗ ಮುನ್ನುಡಿ ಬರೆದಿದ್ದಾರೆ. ಎಂ.ಬಿ.ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದರೆ, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇವರ ಸಹೋದರ ಸುನೀಲಗೌಡ ಬಿ.ಪಾಟೀಲ ಸಹ ಇದೀಗ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು.

ಎಂ.ಬಿ.ಪಾಟೀಲ ಕುಟುಂಬಕ್ಕಷ್ಟೇ ಮಣೆ

ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ‘ಕುಟುಂಬ ರಾಜಕಾರಣ’ ನಡೆಸಲು ಸಾಕಷ್ಟು ರಾಜಕಾರಣಿಗಳ ಮನೆತನ ಮುಂದಾಗಿದ್ದರೂ; ಜಿಲ್ಲೆಯ ಮತದಾರ ಮಾತ್ರ ಯಾರಿಗೂ ಆಶೀರ್ವದಿಸದೆ, ಎಂ.ಬಿ.ಪಾಟೀಲ ಕುಟುಂಬಕ್ಕಷ್ಟೇ ಒಲವು ತೋರಿದ್ದಾರೆ.

ಜಿಲ್ಲಾ ರಾಜಕಾರಣದಲ್ಲಿ ಒಮ್ಮೆಗೆ ಸಹೋದರರು ವಿಧಾನಸಭೆ ಪ್ರವೇಶಿಸಿದ ಇತಿಹಾಸವಿಲ್ಲ. ಆರೋಗ್ಯ ಸಚಿವ ಶಿವಾನಂದ ಪಾಟೀಲ ಸಹೋದರ ವಿಜುಗೌಡ ಪಾಟೀಲ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸ್ಪರ್ಧಿಸಿದ್ದರೂ ಅವಕಾಶವೇ ಸಿಕ್ಕಿಲ್ಲ.

ಎಂ.ಬಿ.ಪಾಟೀಲ ತಿಕೋಟಾ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಿದ್ದ ಅವಧಿಯಲ್ಲೇ, ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಜಿ.ಕೆ.ಪಾಟೀಲ ವಿಧಾನ ಪರಿಷತ್‌ ಸದಸ್ಯರಿದ್ದರು. ಜಿ.ಕೆ.ಪಾಟೀಲ ಎಂ.ಬಿ.ಪಾಟೀಲ ತಂದೆ ಬಿ.ಎಂ.ಪಾಟೀಲರ ತಾಯಿಯ ಅಣ್ಣನ ಮಗ. ಹತ್ತಿರದ ಸಂಬಂಧಿ. ಈ ಹಿಂದೆ ಸಹ ಮತದಾರ ಆಶೀರ್ವದಿಸಿದ್ದು ಎಂ.ಬಿ.ಪಾಟೀಲ ಕುಟುಂಬಕ್ಕೆ. ಉಳಿದಂತೆ ಯಾರಿಗೂ ಈ ಅವಕಾಶ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT