ಗುರುವಾರ , ಜೂನ್ 30, 2022
22 °C
ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಸಮೂಹದಿಂದ ಕಾರ್ಯಕ್ರಮ ಆಯೋಜನೆ

ವಿಜಯಪುರ: ಗುರಿ ಸಾಧನೆಗೆ ಪ್ರೇರೇಪಿಸಿದ ‘ಗೈಡಿಂಗ್‌ ಫೋರ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕೆಂಬ ಹೆಬ್ಬಯಕೆಯೊಂದಿಗೆ ಬಂದಿದ್ದ ಜಿಲ್ಲೆಯ ಸಾವಿರಾರು ಯುವಜನ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್‌’ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಕ್ರಮ ಪ್ರೇರಣಿ ನೀಡಿತು.

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ’ಗೈಡಿಂಗ್‌ ಫೋರ್ಸ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿಟ್ಟವಾಗಿ ಎದುರಿಸುವ ಗುಟ್ಟು ತಿಳಿಸಿಕೊಟ್ಟರು.

‍ಪರೀಕ್ಷೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಎದುರಾಗುವ ಅಡೆ–ತಡೆಗಳನ್ನು ದಾಟುವುದು ಹೇಗೆ? ಕೊನೆಯವರೆಗೆ ಏಕಾಗ್ರತೆ ಕಾಪಾಡಿಕೊಳ್ಳಲು ಏನು ಮಾಡಬೇಕು? ಕೆಲಸ–ಕುಟುಂಬದ ಒತ್ತಡದ ನಡುವೆಯೇ ಪರೀಕ್ಷೆಗೆ ಸಿದ್ಧವಾಗುವುದು ಹೇಗೆ ? ಪರೀಕ್ಷೆ ಬರೆಯುವ ವೇಳೆ ನಮ್ಮ ಯೋಜನೆ ಹೇಗಿರಬೇಕು ಎಂಬಂದನ್ನು ತಿಳಿಸಿದರು. ಜೊತೆಗೆ ಅಧಿಕಾರಿಗಳಾದ ಬಳಿಕ ಕಾರ್ಯ ವೈಕರಿ ಹೇಗಿರಬೇಕು ಎಂಬುದನ್ನು ತಿಳಿಸಿದರು. 

ಬೆಂಗಳೂರಿನ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿಜಯಕುಮಾರ್ ಜಿ.ಬಿ., ವ್ಯವಸ್ಥಾಪಕ ಶರತ್‌ಕುಮಾರ್ ಎಸ್‌. ಮತ್ತು  ಹಿರಿಯ ಬೋಧಕ ಶಮಂತಗೌಡ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ವಿಷಯ ವಸ್ತು ತಿಳಿಸುವ ಜೊತೆಗೆ ಮಾರ್ಗದರ್ಶನ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿರುವವರಷ್ಟೇ ಅಲ್ಲದೆ, ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಗಳ ಹಾಗೂ ವಿಶ್ವವಿದ್ಯಾಲಯಗಳಿಂದ ಬಂದಿದ್ದ ವಿದ್ಯಾರ್ಥಿ ಯುವಜನರು ಸಮಾಧಾನಚಿತ್ತದಿಂದ ಆಲಿಸಿ, ಹೊಸ ಕನಸುಗಳನ್ನು ಹೊತ್ತು ತೆರಳಿದರು.

ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ‘ಪ್ರಜಾವಾಣಿ’ ಪತ್ರಿಕೆಯ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥೆ ರಶ್ಮಿ ಎಸ್‌., ಪ್ರಸರಣ ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ  ಶಿವರಾಜ ನರೋನಾ, ಜಾಹೀರಾತು ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ದಿವಾಕರ ಭಟ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಂಜಲಿ, ಹರಿಪ್ರಿಯಾ ಪ್ರಾರ್ಥನಾ ಗೀತೆ ಹಾಡಿದರು. ಎಚ್‌.ಎಂ.ಮಮದಾಪುರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು