ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೊಲೆ, ಬೆಟ್ಟಿಂಗ್‌, ಬೈಕ್‌ ಕಳ್ಳರ ಬಂಧನ

ವಿಜಯಪುರ ಜಿಲ್ಲಾ ಪೊಲೀಸರ ಭರ್ಜರಿ ಭೇಟಿ
Last Updated 22 ಅಕ್ಟೋಬರ್ 2020, 14:42 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ನಡೆದ ಕೊಲೆ‌, ಬೈಕ್‌, ಮನೆ ಕಳವು, ಗಾಂಜಾ, ಮಾವಾ ಮಾರಾಟ, ಕ್ರಿಕೆಟ್‌ ಬೆಟ್ಟಿಂಗ್‌, ಅಡುಗೆ ಅನಿಲ ರಿಫಿಲಿಂಗ್, ಜೂಜಾಟ, ಮಟ್ಕಾದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

50 ಬೈಕ್‌ ವಶ:ತಾಳಿಕೋಟೆ ಠಾಣೆ ಪೊಲೀಸರು ನಾಲ್ವರು ಅಂತರ ಜಿಲ್ಲಾ ಬೈಕ್‌ ಕಳ್ಳರನ್ನು ಬಂಧಿಸಿ, ಅವರಿಂದ ₹30 ಲಕ್ಷ ಮೌಲ್ಯದ 50 ಬೈಕುಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಮ್ಮಲದಿನ್ನಿಯ ರಾಮಣ್ಣ ಹಳ್ಳೂರ ಎಂಬುವವರು ಅ.19ರಂದು ದಾಖಲಿಸಿದ್ದ ಬೈಕ್‌ ಕಳವು ಪ್ರಕರಣವನ್ನು ಬೆನ್ನುಹತ್ತಿದಾಗ ಅಂತರ್ ಜಿಲ್ಲಾ ಬೈಕ್‌ ಕಳವು ಜಾಲ ಪತ್ತೆಯಾಗಿದೆ.

ಈ ಸಂಬಂಧ ಬಿಳೆಬಾವಿಯ ಮೌನೇಶ್ ಬಡಿಗೇರ(28), ನಿಂಗಣ್ಣ ಪೂಜಾರಿ(38), ಕೋಡೆಕಲ್‌ನ ಮೀರಾಸಾಬ್‌ ಬಳಿಗಾರ(29), ಮೆಹಬೂಬ್‌ ಬಳಿಗಾರ(28) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕದ್ದಿರುವ ಎಲ್ಲ ಬೈಕುಗಳು ‘ಹಿರೊ’ ಕಂಪನಿಗೆ ಸೇರಿದ ಸ್ಪೆಂಡರ್‌ ಬೈಕುಗಳಾಗಿವೆ. ಅದರಲ್ಲೂ ಸಿಲ್ವರ್‌ ಕಲರ್‌ ಬೈಕುಗಳೇ ಇವರ ಟಾರ್ಗೆಟ್‌ ಆಗಿದ್ದವು. ಈ ಬೈಕುಗಳ ಕೀಯನ್ನು ಸುಲಭವಾಗಿ ತೆಗೆಯಬಹುದು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.

ಮನೆಗಳ್ಳರ ಬಂಧನ:ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೂರು ತಿಂಗಳ ಹಿಂದೆ ರಾತ್ರಿ ವೇಳೆ ಮನೆ ಕೀಲಿ ಮುರಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬಸವನ ಬಾಗೇವಾಡಿಯ ಇಂದ್ರಾನಗರದ ಸೊಹೈಲ್‌ ಇನಾಂದಾರ(21), ಬಸವನ ನಗರದ ಆಕಾಶ ಕೋಲ್ಕಾರ(19) ಎಂಬುವವರನ್ನು ಬಂಧಿಸಿ, ಅವರಿಂದ 40 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ₹ 2.15 ಲಕ್ಷ್ಮ ಮೌಲ್ಯದ ಚಿನ್ನಾಭರಣವನ್ನು ಸಿಪಿಐ ಸೋಮಶೇಖರ ಜುಟ್ಟಿಲ್‌, ಪಿಎಸ್‌ಐ ಚಂದ್ರಶೇಖರ ವೈ.ಹೆರಕಲ್‌ ನೇತೃತ್ವದ ತನಿಖಾ ತಂಡ ವಶಪಡಿಸಿಕೊಂಡಿದೆ.

287 ಕೆ.ಜಿ ಗಾಂಜಾ ವಶ:ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಮತ್ತು ಮಾರಾಟ ಮಾಡುತ್ತಿದ್ದ ಒಟ್ಟು 18 ಪ್ರಕರಣಗಳನ್ನು ಪತ್ತೆ ಹಚ್ಚಿ 287 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಳ್ಳಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಗರವಾಲ್‌ ತಿಳಿಸಿದರು.

ಕ್ರಿಕೆಟ್‌ ಬೆಟ್ಟಿಂಗ್‌:ಜಿಲ್ಲೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಒಟ್ಟು 16 ಪ್ರಕರಣಗಳನ್ನು ದಾಖಲಿಸಿ, 32 ಆರೋಪಿಗಳನ್ನು ಬಂಧಿಸಿ, ಅವರಿಂದ ₹6,52,770 ನಗದು, 39 ಮೊಬೈಲ್‌ ಫೋನ್‌, 2 ಟಿವಿ, ಒಂದು ಡಸ್ಟರ್‌ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಸಿಲಿಂಡರ್‌ ಜಪ್ತಿ:ಅಡುಗೆ ಮತ್ತು ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ಗಳನ್ನುಅಕ್ರಮವಾಗಿ ರಿಫಿಲಿಂಗ್‌ ಮಾಡಿ ಮಾರಾಟ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ, ಅವರಿಂದ ₹ 1,38 ಲಕ್ಷ ಮೌಲ್ಯದ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾವಾ ಮಾರಾಟ:ಅಡಿಕೆ, ತಂಬಾಕು, ಸುಣ್ಣ ಸೇರಿಸಿ ಮಾವಾ ತಯಾರಿಸಿ ಮಾರಾಟ ಮಾಡುತ್ತಿದ್ದ ಐದು ಪ್ರಕರಣಗಳನ್ನು ದಾಖಲಿಸಿ, 10 ಆರೋಪಿಗಳ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಂದ ₹ 1.86 ಲಕ್ಷ ಮೌಲ್ಯದ ಮಾವಾ ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಕಾಯ್ದೆಯಡಿ 19 ಪ್ರಕರಣಗಳನ್ನು ದಾಖಲಿಸಿ, 19 ಆರೋಪಿಗಳನ್ನು ಬಂಧಿಸಲಾಗಿದೆ. 35 ಜೂಜಾಟ ಪ್ರಕರಣಗಳನ್ನು ಪತ್ತೆ ಹಚ್ಚಿ 130 ಆರೋಪಿಗಳನ್ನು ಬಂಧಿಸಲಾಗಿದೆ. ಮಟ್ಕಾ ಪ್ರಕರಣಗಳಿಗೆ ಸಂಬಂಧಿಸಿದಂತೆ30 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಈ ಎಲ್ಲ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಅಭಿನಂದಿಸಿ, ಬಹುಮಾನ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಇದ್ದರು.

ಕೊಲೆ ಆರೋಪಿಗಳ ಬಂಧನ

ಸಿಂದಗಿ ಪಟ್ಟಣದಲ್ಲಿಕಳೆದ ಆಗಸ್ಟ್‌ 25ರಂದು ಐಸಿಐಸಿಐ ಬ್ಯಾಂಕಿನ ಎಟಿಎಂ ಭದ್ರತಾ ಸಿಬ್ಬಂದಿ ರಾಹುಲ ರಾಠೋಡ(24) ಎಂಬುವವರ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಎಟಿಎಂ ಯಂತ್ರವನ್ನು ಒಡೆದು ಕಳವಿಗೆ ಯತ್ನಿಸಿದ್ದ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಎಟಿಎಂ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲೇಶ್ವರದ ಜೆಸಿಬಿ ಚಾಲಕ ಅನಿಲ ಬರಗಾಲ(28), ದಯಾನಂದ ಹೊಸಮನಿ(21) ಹಾಗೂ 17 ವರ್ಷ ಇನ್ನೊಬ್ಬ ಬಾಲಾಪರಾಧಿಯನ್ನು ಸಿಂದಗಿ ಸಿಪಿಐ ಎಚ್‌.ಎಂ.ಪಾಟೀಲ ನೇತೃತ್ವದ ತಂಡವು ಕೊಂಡಗುಳಿ ಗ್ರಾಮದಲ್ಲಿ ಬಂಧಿಸಿದೆ.

ಆರು ಜನರ ವಿರುದ್ಧಗೂಂಡಾ ಪ್ರಕರಣ

ಕೊಲೆ, ಸುಲಿಗೆ, ಮಟ್ಕಾ, ಡಕಾಯತಿ, ಜೂಜಾಟ, ಅಪಹರಣ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಆರು ಜನರನ್ನು ಗೂಂಡಾ ಕಾಯ್ದೆ ಅಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕೈಗೊಳ್ಳಲು ಸಿದ್ಧತೆ ನಡೆದಿದೆ ಎಂದು ಎಸ್‌.ಪಿ.ಅಗರವಾಲ್‌ ತಿಳಿಸಿದರು.

ತಾಂಬಾ ನಿವಾಸಿ ದೇವೇಂದ್ರ ತದ್ದೇವಾಡಿ, ನಾಗರಾಠದ ಚಂದ್ರಶೇಖರ ವಡೆದ್‌ ಮತ್ತು ಸಂಗನಗೌಡ ಸಂಕನಾಳ, ವಿಜಯಪುರದ ಚಾಂದ್‌ಪೀರ್‌ ಇನಾಂದಾರ್‌ ಮತ್ತು ಹೈದರ್‌ ಅಲಿ ನದಾಫ್‌ ಹಾಗೂ ಹಿಂಗಣಿಯ ಪೀರಪ್ಪ ಕಟ್ಟಿಮನಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT