ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ಮೋದಿ ಸರ್ಕಾರ: ನಳಿನ್‌ ಕುಮಾರ್ ಕಟೀಲ್

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಣಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಹೇಳಿಕೆ
Last Updated 5 ಅಕ್ಟೋಬರ್ 2021, 12:38 IST
ಅಕ್ಷರ ಗಾತ್ರ

ವಿಜಯಪುರ: ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ‌ ಸರ್ಕಾರ ಮಾಡಿದೆ. ಹಿಂದುಳಿದ ವರ್ಗಗಳ ಪಟ್ಟಿಗೆ ಅರ್ಹ ಜಾತಿಗಳ ಸೇರ್ಪಡೆ ಮಾಡುವ ಅಧಿಕಾರವನ್ನು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋದಿ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ಶಿಕ್ಷಣದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಿದೆ ಎಂದರು.

ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 13 ಜಾತಿಗಳಿಗೆ ನಿಗಮ ಮಾಡಿದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಸೇವೆಯ ಜೊತೆಗೆ ರಾಜಕೀಯ ಮಾಡುತ್ತಿದೆ.ಬಿಜೆಪಿಯು ರಾಜಕೀಯವನ್ನು ಒಂದು ವ್ರತವನ್ನಾಗಿ ಮಾಡುತ್ತಿದೆ. ಪಕ್ಷವು ಸೇವಾ ಹಿ ಸಂಘಟನೆ ಮೂಲಕ‌ ಅನೇಕ ಜನಪರ ಕಾರ್ಯಕ್ರಮ ಮಾಡುತ್ತಿದೆ. ಬೀಜದ ಉಂಡೆ(ಸೀಡ್‌ ಬಾಲ್‌) ವಿತರಣೆ, ಸಸಿ ನೆಡುವ ಕಾರ್ಯಕ್ರಮ, ಕೋವಿಡ್‌ ಸಂತ್ರಸ್ತರ ಸೇವೆ ಮಾಡುವ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ಒಂದು ಕಾಲಕ್ಕೆ ನಗರ ಪ್ರದೇಶಕ್ಕೆ ಸೀಮಿತವಾದ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಹಳ್ಳಿ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ ಎಂದರು.

ಅಹಿಂದ ಹೆಸರಲ್ಲಿ ಅಧಿಕಾರ ಹಿಡಿದ ಸಿದ್ದರಾಮಯ್ಯ ಅವರು ಹಿಂದುಳಿದವರ ಪರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ 20 ಜನ ಹತ್ಯೆಯಾದರೂ ಸಾಂತ್ವಾನ ಸಹ ಹೇಳಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮೇಲೆ ವಾಹನ ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೊಲೆಗಡುಕ ಸರ್ಕಾರ ಎಂದು ಆರೋಪಿಸಿದ್ದಾರೆ. ಆದರೆ, ಈ ಹಿಂದೆ ಇವರ ಆಡಳಿತಾವಧಿಯಲ್ಲಿ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ, ನರಗುಂದದಲ್ಲಿ ರೈತರ ಮೇಲೆ ಗೋಲಿಬಾರ್‌ ಆದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂದು ಪ್ರಶ್ನಿಸಿದರು.

ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ‌ ಸರ್ಕಾರ ಹಿಂದುಳಿದ ವರ್ಗದ ಅಭಿವೃದ್ಧಿಯನ್ನು ಘೋಷಣೆಗೆ ಸೀಮಿತಗೊಳಿಸಲಿಲ್ಲ. ದೇಶದಲ್ಲಿ 27 ಜನ ಕೇಂದ್ರ ಸಚಿವ ಸ್ಥಾನವನ್ನು ಹಿಂದುಳಿದ ವರ್ಗದವರಿವೆ ನೀಡಿದೆ. 20 ಜನ ದಲಿತರನ್ನು ಸಚಿವ ಸ್ಥಾನ ನೀಡಿದೆ. ದೇಶದ ಇತಿಹಾಸದಲ್ಲೇ ಇದು ಮೊದಲು ಎಂದರು.

ದೇಶದಲ್ಲಿ ಅತೀ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಹಿಂದುಳಿದವರು, ದಲಿತರ ಪರ ಯಾವುದೇ ಕೆಲಸ ಮಾಡಲಿಲ್ಲ. ಹಿಂದುಳಿದವರು, ದಲಿತರು ಬಿಜೆಪಿ ಪರ ಇದ್ದಾರೆ. ಇದೀಗ ಮುಸ್ಲಿಂ ಸಮುದಾಯ ಸಹ ಕಾಂಗ್ರೆಸ್ ನಿಂದ‌ ದೂರವಾಗುತ್ತಿದೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನೆ.ಲ. ನರೇಂದ್ರಬಾಬು ಮಾತನಾಡಿ, ಮುಂದಿನ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಎಲ್ಲ‌ ಚುನಾವಣೆಗಳಲ್ಲಿ ಒಬಿಸಿ‌ ಮೋರ್ಚಾ‌ ನಿರ್ಣಾಯಕ ಪಾತ್ರ ವಹಿಸಲಿದೆ. ಸಿಂದಗಿ ಹಾಗೂ ಹಾನಗಲ್ ಉಪ‌ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗೆಲ್ಲಿಸುವಲ್ಲಿ ಒಬಿಸಿ ಶ್ರಮಿಸಲಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಮಹೇಶ ಟೆಂಗಿನಕಾಯಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್‌ ಸದಸ್ಯರಾದ ಅರುಣ ಶಹಾಪುರ, ಹಣಮಂತ ನಿರಾಣಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಅರುಣಕುಮಾರ್‌, ಚಂದ್ರಶೇಖರ ಕವಟಗಿ, ಪಿ.ಎಚ್. ಪೂಜಾರ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಇದ್ದರು.

***

ಸಿಂದಗಿ ಹಾಗೂ ಹಾನಗಲ್‌ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅನ್ನು ಜನ ತಿರಸ್ಕರಿಸಿದ್ದಾರೆ. ಅದೇ ಕಾರಣಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಆಮದು ಮಾಡಿಕೊಂಡು ಅನುಕಂಪದ ಗಿಟ್ಟಿಸುವ ಕೆಲಸ ಮಾಡಿತ್ತಿದೆ

–ನಳಿನ್‌ ಕುಮಾರ್‌ ಕಟೀಲ್‌, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

***

ಜಾತಿ ಗಣತಿ ಸಿದ್ಧವಾಗಿಲ್ಲ. ಆಯೋಗದ ಸದಸ್ಯರೇ ಸಹಿ ಮಾಡಿಲ್ಲ. ಈ ವಿಷಯದಲ್ಲಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ವಿಧಾನ ಮಂಡಲದಲ್ಲಿ ಸಿದ್ದರಾಮಯ್ಯ ಏಕೆ ಧ್ವನಿ ಎತ್ತಲಿಲ್ಲ. ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರೇ

ಕೆ.ಎಸ್‌.ಈಶ್ವರಪ್ಪ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT