ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾ ದೇಗುಲದಲ್ಲಿ ನವರಾತ್ರಿ ಉತ್ಸವ

ಯುವಕರಿಂದ ನಿತ್ಯ ದಾಂಡಿಯಾ ನೃತ್ಯ ಪ್ರದರ್ಶನ
Last Updated 1 ಅಕ್ಟೋಬರ್ 2022, 17:37 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣದ ಬಜಾರದಲ್ಲಿರುವ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ 32 ವರ್ಷಗಳಿಂದ ರಾಜಸ್ಥಾನ ವೈಷ್ಣವಿ ಸಮಾಜ ಹಾಗೂ ವಿವಿಧ ಹಿಂದೂ ಸಮಾಜಗಳ ಆಶ್ರಯದಲ್ಲಿ ಅಂಬಾದೇವಿ (ದುರ್ಗಾದೇವಿ, ನಾಡದೇವತೆ, ಬನ್ನಿ ಮಹಾಕಾಳಿ ದೇವಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ) ದೇವತೆಯ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.

ದೇಗುಲದ ಪಕ್ಕದಲ್ಲಿ ಪ್ರತ್ಯೇಕ ಮಂಟಪ ರಚಿಸಿ, ಅದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೆ.26 ಆರಂಭವಾಗಿರುವ ನವರಾತ್ರಿ ಉತ್ಸವ ಅ.5 ರಂದು ಮುಕ್ತಾಯವಾಗುತ್ತದೆ.

ಪ್ರತಿ ದಿನವೂ ದೇವತೆಯ ಪೂಜೆಗೆ ಪಟ್ಟಣದ ಜನರು ಸಾಗರೋಪಾದಿಯಲ್ಲಿ ಬೆಳಗಿನ ಮೂರು ಗಂಟೆಯಿಂದಲೇ ಬರುತ್ತಾರೆ.

1990ರ ಸುಮಾರಿಗೆ ಸಂಪತ್ ಪೋರ್ವಾಲ, ದಿ. ಅಮರಪ್ಪ ಅಮರಣ್ಣವರ, ಜ್ಯೋತಿರಾಮ ಸೋಲಂಕಿ, ಮುರಿಗೆಪ್ಪ ಮೋಟಗಿ, ಅಪ್ಪಣ್ಣ ಸಿದ್ದಾಪೂರ, ಅಶೋಕ ನಾಡಗೌಡ, ರಾಜು ಪೋರ್ವಾಲ, ಮುತ್ತಣ್ಣ ಒಣರೊಟ್ಟಿ, ಮುದಕಪ್ಪ ಪ್ಯಾಟಿಗೌಡರ ಮೊದಲಾದವರು ಸೇರಿ ದೇವಿಯ ಪೂಜೆ ಆರಂಭಿಸಿದರು.

ಇದೇ ವರ್ಷ ಕೋಲಾಪೂರದಿಂದ ದೇವಿಯ ಹೊಸ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ ಎಂದು ಮುರಿಗೆಪ್ಪ ಮೋಟಗಿ ಹಾಗೂ ಅಪ್ಪಣ್ಣ ಸಿದ್ದಾಪೂರ ಹೇಳಿದರು.

ದೇವಿಯ ಪೂಜೆ ನಿತ್ಯ ಬೆಳಿಗ್ಗೆ 3 ಗಂಟೆಗೆ ಶುರುವಾಗುತ್ತದೆ. ಪ್ರತೀ ನಿತ್ಯ ದೇವಿಗೆ ಒಂದೊಂದು ಸೀರೆ ಉಡಿಸಲಾಗುತ್ತದೆ. ಹೂವಿನ ಹಾರ, ಅಲಂಕಾರ, ದೀಪದ ಪೂಜೆ ಹೀಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಅಭಿಷೇಕವನ್ನು ಅರ್ಚಕರಿಂದ ಮಾಡಿಸಲಾಗುತ್ತದೆ.

ನಿತ್ಯ ಸಂಜೆ 8 ರಿಂದ 11 ಗಂಟೆಯವರೆಗೆ ರಾಜಸ್ಥಾನಿ ವೈಷ್ಣವಿ ಸಮಾಜದ ಯುವಕರು ದಾಂಡಿಯಾ (ಕೋಲಾಟ) ನೃತ್ಯ ಸೇರಿದಂತೆ, ಭಜನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.

ಇದಲ್ಲದೇ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪ್ರದಕ್ಷಿಣೆ, ಪೂಜೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಸಲಾಗುತ್ತಿದೆ ಎಂದು ಹಣಮಂತ ನಲವಡೆ ಹೇಳಿದರು.

ಮಹಾಂತೇಶ ನಗರದಲ್ಲಿರುವ ಮಹಾ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಬಂಧ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಗುತ್ತಿದೆ.

ವಿಬಿಸಿ ಪ್ರೌಢಶಾಲೆಯಲ್ಲಿರುವ ಬನ್ನಿ ಬಸವಣ್ಣನ ಕಟ್ಟೆಯ ಆವರಣದಲ್ಲಿ ಉಪನ್ಯಾಸಕ ಐ. ವಿ. ಹಿರೇಮಠ ಅವರ ನೇತೃತ್ವದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯುತ್ತಿವೆ.

ಪಟ್ಟಣದಲ್ಲಿ ವಿವಿಧ ಸಮಿತಿಗಳು ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಅ.5 ರಂದು ಬನ್ನಿ ಹಬ್ಬದ ದಿನ ಉತ್ಸವಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT