ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯಲ್ಲಿವೆ 84 ಕೊಳೆಗೇರಿಗಳು: ನಿವಾಸಿಗಳ ಬದುಕಿನಲ್ಲಿಲ್ಲ ಸುಧಾರಣೆ

ವಿಜಯಪುರ ಜಿಲ್ಲೆಯಲ್ಲಿ ಇವೆ 84 ಕೊಳೆಗೇರಿ
Last Updated 31 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ನಗರೀಕರಣ ಹೆಚ್ಚುತ್ತಿರುವಂತೆ ಕೊಳೆಗೇರಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿವೆ. ಈ ಕೊಳೆಗೇರಿಗಳಿಗೆ ಅಗತ್ಯ ಮೂಲಸೌಲಭ್ಯಗಳು ಇಲ್ಲದೇ ಇಲ್ಲಿನ ನಿವಾಸಿಗಳ ಬದುಕು ಅಸಹನೀಯವಾಗುತ್ತಿದೆ.

ವಿಜಯಪುರ ನಗರದಲ್ಲಿ 45, ಮುದ್ದೇಬಿಹಾಳ 3, ಇಂಡಿ 7, ಬಸವನ ಬಾಗೇವಾಡಿ 4, ಮನಗೂಳಿ 3, ನಿಡಗುಂದಿ 4, ತಾಳಿಕೋಟೆ 5, ಸಿಂದಗಿ 9 ಮತ್ತು ದೇವರ ಹಿಪ್ಪರಗಿ ಪಟ್ಟಣದಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ ಸದ್ಯ ಅಧಿಕೃತವಾಗಿ 84 ಕೊಳೆಗೇರಿಗಳಿವೆ. ಇನ್ನೂ ಘೋಷಣೆಗೆ ಹತ್ತಾರು ಬಾಕಿ ಇವೆ. ಘೋಷಿತ 84 ಕೊಳೆಗೇರಿಗಲ್ಲಿ 17,848 ಗುಡಿಸಲುಗಳಲ್ಲಿ 88,853 ಜನ ವಾಸವಾಗಿದ್ದಾರೆ.

ಬಹುತೇಕ ಕೊಳೆಗೇರಿಗಳು ಇಕ್ಕಟ್ಟಾದ ಪ್ರದೇಶದಲ್ಲಿ ಇವೆ. ಅಲ್ಲಿಯ ನಿವಾಸಿಗಳಿಗೆ ಮನೆಗಳು ಇಲ್ಲದೇ ಗುಡಿಸಲು, ಶೆಡ್‌ಗಳಲ್ಲಿ ವಾಸವಾಗಿದ್ದಾರೆ. ರಸ್ತೆ, ನೀರು, ಸ್ವಚ್ಛತೆ ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ಆರೋಗ್ಯದ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೊಳೆಗೇರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ.

ಕೊಳೆಗೇರಿ ನಿವಾಸಿಗಳು ಸ್ವಚ್ಛತೆ ಇಲ್ಲದೇ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅನಕ್ಷರತೆ, ಬಡತನ ಹಾಸು ಹೊದ್ದಿದೆ. ಕೂಲಿ ಕಾರ್ಮಿಕರಾಗಿ, ಗೌಂಡಿ ಕೆಲಸ, ಕಾಯಿಪಲ್ಲೆ ಮಾರಾಟ, ಬೀದಿ ಬದಿ ವ್ಯಾಪಾರ, ಆಟೋ ರಿಕ್ಷಾ ಚಾಲನೆ, ಚಹಾದಂಗಡಿ, ಪೌರಕಾರ್ಮಿಕರು ಈ ಕೊಳೆಗೇರಿಗಳಲ್ಲೇ ಬದುಕು ನಡೆಸುತ್ತಿದ್ದಾರೆ.

’ವಿಜಯಪುರ ನಗರದಲ್ಲಿ ಇನ್ನೂ 12 ಸ್ಲಂಗಳು ಘೋಷಣೆಗೆ ಬಾಕಿ ಇವೆ. ಸರ್ಕಾರ ಇನ್ನೂ ಘೋಷಣೆ ಮಾಡದೇ ವಿಳಂಬ ಮಾಡುತ್ತಿದೆ. ಇದರಿಂದ ಸ್ಲಂ ನಿವಾಸಿಗಳಿಗೆ ಸರ್ಕಾರದ ಸೌಲಭ್ಯ ಸಾಲಸೌಲಭ್ಯ ಪಡೆಯಲು ಆಗುತ್ತಿಲ್ಲ. ಅಲ್ಲದೇ, ಮನೆ ಹಕ್ಕುಪತ್ರಗಳು ಲಭಿಸದೇ ಸಮಸ್ಯೆಯಾಗಿದೆ‘ ಎನ್ನುತ್ತಾರೆ ವಿಜಯಪುರ ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಮ್‌ ಮಾಶಾಳಕರ್‌.

ವಿಜಯಪುರ ನಗರದಲ್ಲಿ ಸ್ಲಂ ನಿವಾಸಿಗಳಿಗೆ ಮನೆ ಹಂಚಿಕೆ ವಿಷಯದಲ್ಲೂ ಜಾತಿ, ಧರ್ಮ ನೋಡಲಾಗುತ್ತಿರುವುದು ಬೇಸರದ ಸಂಗತಿ. ಆದರೂ ನಮ್ಮವರಿಗೆ ಮನೆಗಳನ್ನು ನೀಡಲಾಗುತ್ತಿದೆಯಲ್ಲ ಎಂಬ ಕಾರಣಕ್ಕೆ ಮೌನವಾಗಿರಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಎರಡು ವರ್ಷದಿಂದ ಅನುದಾನ ಬಾರದೇ ಸ್ಥಗಿತಗೊಂಡಿವೆ. ತಕ್ಷಣ ಅನುದಾನ ಒದಗಿಸಲು ಸರ್ಕಾರ ಆದ್ಯತೆ ನೀಡಬೇಕು ಎನ್ನುತ್ತಾರೆ ಅವರು.

ಕೋವಿಡ್‌ನಿಂದ ಸ್ಲಂ ನಿವಾಸಿಗಳ ಪರಿಸ್ಥಿತಿ ಗಂಭೀರವಾಗಿದೆ. ದುಡಿಯಲು ಉದ್ಯೋಗ ಸಿಗದೇ ಹೆಣ್ಣುಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿ 7 ಕೆ.ಜಿ.ಯಿಂದ 5ಕೆ.ಜಿ.ಗೆ ಕಡಿತ ಮಾಡಿರುವುದು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎನ್ನುತ್ತಾರೆ ಮಾಶಾಳಕರ್‌.

4128 ಮನೆಗಳ ನಿರ್ಮಾಣ

ವಿಜಯಪುರ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಜಿಲ್ಲೆಯ ಕೊಳೆಗೇರಿ ನಿವಾಸಿಗಳಿಗಾಗಿ 4128 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಅನುದಾನದ ಕೊರತೆಯಿಂದ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. ಸರ್ಕಾರದಿಂದ ಅನುದಾನ ಬಂದ ತಕ್ಷಣ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವಿಜಯಪುರ ಜಿಲ್ಲೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌(ಪ್ರಭಾರ) ರಾಜಶೇಖರ ಚವ್ಹಾಣ.

ವಿಜಯಪುರಕ್ಕೆ 250, ದೇವರ ಹಿಪ್ಪರಗಿ 250, ಇಂಡಿ 250, ಮುದ್ದೇಬಿಹಾಳ 300, ತಾಳಿಕೋಟೆ 474, ನಿಡಗುಂದಿ 250 ಮತ್ತು ಸಿಂದಗಿ 250 ಸೇರಿದಂತೆ ಒಟ್ಟು 3059 ಮನೆಗಳ ನಿರ್ಮಾಣ ಮಾಡಲು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ ಎನ್ನುತ್ತಾರೆ ಅವರು.

ದೇವರಹಿಪ್ಪರಗಿ, ವಿಜಯಪುರ, ಮುದ್ದೇಬಿಹಾಳ ಶಾಸಕರು, ಕೊಳೆಗೇರಿ ನಿವಾಸಿಗಳಿಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ, ಮನೆಗಳನ್ನು ನಿರ್ಮಿಸಿಕೊಡಲು ಆಸಕ್ತಿ ತೋರಿಸಿದ್ದಾರೆ. ಈ ಸಂಬಂಧ ಜಾಗ ಗುರುತಿಸುವ ಪ್ರಕ್ರಿಯೆಯೂ ನಡೆದಿದೆ ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ ಸದ್ಯ 84 ಕೊಳೆಗೇರಿಗಳಿವೆ. ಇನ್ನೂ ಹತ್ತಾರು ಕೊಳೆಗೇರಿಗಳಿದ್ದು, ಅವುಗಳನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿದರೆ ಅವುಗಳನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕರನ್ನು ಒಳಗೊಂಡ ಸಮಿತಿ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ಬಳಿಕ ಜಿಲ್ಲಾಧಿಕಾರಿ ಅವರು ಕೊಳೆಗೇರಿ ಎಂದು ಘೋಷಣೆ ಮಾಡುತ್ತಾರೆ ಎನ್ನುತ್ತಾರೆ ಚವ್ಹಾಣ.

ಕೊಳೆಗೇರಿ ನಿವಾಸಿಗಳ ಪರದಾಟ

ಇಂಡಿ : ಇಂಡಿ ಪುರಸಭೆಯ ವ್ಯಾಪ್ತಿಯಲ್ಲಿ 370 ಕುಟುಂಬಗಳಿರುವ ಡಾ. ಅಂಬೇಡ್ಕರ್‌ ನಗರ, 329 ಕುಟುಂಬಗಳಿರುವ ಡೋರ ಓಣಿ, 267 ಕುಟುಂಬಗಳಿರುವ ಸಮಗಾರ ಓಣಿ, 383 ಕುಟುಂಬಗಳಿರುವ ತವಶಾಕ ಗಲ್ಲಿ, 475 ಕುಟುಂಬಗಳಿರುವ ಕುಂಬಾರ ಓಣಿ, 180 ಕುಟುಂಬಗಳಿರುವ ಅಂಜುಮನ್ ಶಾಲೆಯ ಓಣಿ, 436 ಕುಟುಂಬಗಳಿರುವ ಗೋರಿ ಪಟ್ಟಿ ತಾಂಡಾ, 160 ಕುಟುಂಬಗಳಿರುವ ಖೇಡ ಕಾಲೊನಿ ಸೇರಿದಂತೆ ಒಟ್ಟು ಎಂಟು ಕೊಳೆಗೇರಿಗಳಿವೆ.

ಕೊಳೆಗೇರಿಗಳ ಅಭಿವೃದ್ಧಿಗಾಗಿ ಪುರಸಭೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈಗಾಗಲೇ ಈ ಎಲ್ಲ ಕೊಳಚೆ ಪ್ರದೇಶಗಳಿಗೆ 24X7 ಕುಡಿಯುವ ನೀರು ಮತ್ತು ವಿದ್ಯುತ್ ಒದಗಿಸಲಾಗಿದೆ. ಆದರೆ, ಅವುಗಳಿಗೆ ಅಗತ್ಯವಿರುವ ರಸ್ತೆ ಮತ್ತು ಗಟಾರದ ಕೆಲಸ ಮಾತ್ರ ಬಾಕಿ ಉಳಿದುಕೊಂಡಿವೆ. ಕೊಳಚೆ ಪ್ರದೇಶಗಳಲ್ಲಿಯ ರಸ್ತೆಗಳು ಈಗಾಗಲೇ ಶೇ 70 ರಷ್ಟು ಪೂರ್ಣಗೊಳಿಸಲಾಗಿದೆ. ಕೇವಲ ಶೇ 30 ರಷ್ಟು ರಸ್ತೆಗಳು ಮಾತ್ರ ಬಾಕಿ ಉಳಿದುಕೊಂಡಿವೆ ಎಂದು ಪುರಸಭೆಯ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಮಳೆ ಬಂದರೆ ಸಾಕು ಗೋರಿಪಟ್ಟಿ ತಾಂಡಾ, ತವಶಾಕ ಗಲ್ಲಿ, ಡೋರ ಓಣಿಯ ಜನ ರಸ್ತೆಗಳಿಲ್ಲದೇ ಪರದಾಡುವ ಸ್ಥಿತಿ ಕಂಡುಬರುತ್ತಿದೆ. ಕೆಲವು ಕಡೆ ಗಟಾರದ ನೀರು ಮುಂದೆ ಹೋಗದೇ ರಸ್ತೆಗಳಲ್ಲಿಯೇ ನಿಂತು ಗಬ್ಬು ವಾಸನೆ ಬೀರುತ್ತಿದೆ.

ಕೊಳೆಗೇರಿಗಳಿಗೆ ಬೇಕಿದೆ ಸೌಲಭ್ಯ

ಹೊರ್ತಿ: ಇಲ್ಲಿನ ಇಂದಿರಾನಗರದ ದುರ್ಗಮುರ್ಗಿ ಓಣಿಯ ಕೊಳೆಗೇರಿಗೆ ಕುಡಿಯುವ ನೀರು ಅತ್ಯಗತ್ಯವಾಗಿ ಬೇಕಿದೆ. ಗಟಾರಗಳ ಸ್ವಚ್ಛತೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ. ಬೀದಿ ದೀಪಗಳ ಅಳವಡಿಕೆ ಅವಶ್ಯವಿದೆ ಹಾಗೂ ಸಾರ್ವಜನಿಕ ಮೂತ್ರಾಲಯ, ಶೌಚಾಲಯ ಕೊರತೆಯಿದೆ.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಈ ಹೊರ್ತಿ ಗ್ರಾಮದ ಈ ಇಂದಿರಾನಗರದ ದುರ್ಗಮುರ್ಗಿ ಓಣಿಯ ಕಡೆ ಗಮನ ಹರಿಸಿ ಈ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ಸುಖದೇವ ದುರ್ಗಮುರ್ಗಿ ಆಗ್ರಹಿಸಿದ್ದಾರೆ.

ಸ್ಲಂ ಜನರ ಬದುಕು ಅಸಹನೀಯ

ಸಿಂದಗಿ: ಪಟ್ಟಣದಲ್ಲಿ ಒಂಬತ್ತು ಸ್ಲಂ ವಾರ್ಡ್‌ಗಳಿವೆ. ಇವುಗಳು ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಕುಡಿಯುವ ನೀರು ಹೊರತುಪಡಿಸಿದರೆ ಚರಂಡಿ, ಸ್ವಚ್ಛತೆ, ರಸ್ತೆಗಳ ಅಭಿವೃದ್ದಿ ಕಾಣುತ್ತಿಲ್ಲ.

ಮಳೆ ಬಂದಾಗಲೊಮ್ಮೆ ಬಹುತೇಕ ಸ್ಲಂಗಳ ಮನೆಗಳಲ್ಲಿ ಕೊಳಚೆ ನೀರು ನುಗ್ಗುತ್ತದೆ. ಈ ಬಗ್ಗೆ ನಿವಾಸಿಗಳು ಸಾಕಷ್ಟು ಸಲ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸ್ಲಂ ಜನರಿಗೆ ನಿವೇಶನ ನೀಡಲು ಅಂತರಗಂಗಿ ರಸ್ತೆಯಲ್ಲಿ 411 ನಿವೇಶನಗಳು ಮಂಜೂರು ಆಗಿ ಅದರಲ್ಲಿ 197 ಫಲಾನುಭವಿಗಳ ಆಯ್ಕೆ ಮಾಡಿದ್ದರೂ ಈವರೆಗೂ ಯಾರೊಬ್ಬರಿಗೂ ಹಕ್ಕುಪತ್ರ ನೀಡಿಲ್ಲ.

ಇದೇ ರೀತಿ 12ನೇ ವಾರ್ಡ್ ಕಾಳಿಕಾನಗರದಲ್ಲಿಯೂ ಸ್ಲಂನಲ್ಲಿ ಜನರು ಶೆಡ್‌ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ.

ಸಿಂದಗಿ ಪುರಸಭೆಗೆ ಸ್ಲಂ ಬೋರ್ಡ್ ಅನುದಾನ ಬರುವುದೇ ವಿರಳ. ಹೀಗಾಗಿ ಸ್ಲಂ ಪ್ರದೇಶ ಅಭಿವೃದ್ದಿ ಪಡಿಸುವುದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪುರಸಭೆ 6ನೇ ವಾರ್ಡ್ ಸದಸ್ಯ ಹಣಮಂತ ಸುಣಗಾರ.

***

ಕೊಳೆಗೇರಿ ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ಸೇರಿದಂತೆ ಮೂಲಸೌಲಭ್ಯ ಒದಗಿಸಲು ಮಂಡಳಿ ಆದ್ಯತೆ ನೀಡಿದೆ
-ರಾಜಶೇಖರ ಚವ್ಹಾಣ, ಎಇಇ
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ

***

ವಿಜಯಪುರ ನಗರದಲ್ಲಿ ಬಾಕಿ ಇರುವ ಸ್ಲಂಗಳನ್ನು ಸರ್ಕಾರ ತಕ್ಷಣ ಘೋಷಣೆ ಮಾಡಿ, ಮನೆಗಳ ಹಕ್ಕು ಪತ್ರ ವಿತರಣೆ ಮಾಡಬೇಕು
–ಅಕ್ರಮ್‌ ಮಾಶಾಳಕರ, ಅಧ್ಯಕ್ಷ
ಸ್ಲಂ ಅಭಿವೃದ್ಧಿ ಸಮಿತಿ, ವಿಜಯಪುರ

***

ಸಿಂದಗಿ ವಾರ್ಡ್ ನಂ.7 ಸ್ಲಂ ಪ್ರದೇಶದ ಮನೆಗಳಿಗೆ ಕೊಳಚೆ ನೀರು ನುಗ್ಗುವುದು ಸಾಮಾನ್ಯ. ಈ ಬಗ್ಗೆ ಪುರಸಭೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ತಕ್ಷಣ ಸಮಸ್ಯೆ ಬಗೆಹರಿಸಬೇಕು
–ಸುರೇಶ ಆಲಕುಂಟೆ
ಸ್ಲಂ ನಿವಾಸಿ, ಸಿಂದಗಿ

*****

-ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಎ.ಸಿ.ಪಾಟೀಲ, ಕೆ.ಎಸ್.ಈಸರಗೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT